
ನಮ್ಮ ಮೆಟ್ರೊ ಗುಲಾಬಿ ಮಾರ್ಗ (Namma Metro Pink Line) ಕುರಿತು ಇದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಜನರು. ಇದರ ಉದ್ಘಾಟನೆ ಬಗ್ಗೆ ಮೇಲಿಂದ ಮೇಲೆ ಬೇರೆ ಬೇರೆ ರೀತಿಯ ಸುದ್ದಿಗಳು ಬರುತ್ತಲೇ ಇವೆ. ಅದೇ ಇನ್ನೊಂದೆಡೆ ಇದೇ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬಿಗ್ ಅಪ್ಡೇಟ್ ಹೊರಬಂದಿದೆ. ಅದೇನೆಂದರೆ ಇದೇ 13ರಂದೇ ಈ ಉದ್ಘಾಟನೆ ನಡೆಯಲಿದ್ದು, ಪ್ರಧಾನಿಯವರು ಇದಕ್ಕಾಗಿ ಅಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ಕುರಿತು ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆ ನವೆಂಬರ್ 13 ರಂದು ನಡೆಯಲಿದ್ದು, ಅಂದು ಪ್ರಧಾನಿ ಆಗಮಿಸಲಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೆಟ್ರೋ ಲೈನ್ ಉದ್ಘಾಟನೆಗೆ ಪ್ರಧಾನಿ ಅವರಿಗೆ ಆಹ್ವಾನ ಇತ್ತಿದ್ದರು. ಆಗ ಅವರು ನವೆಂಬರ್ 15ರ ಡೇಟ್ ಕೊಟ್ಟಿದ್ದರು. ಆದರೆ ಇದೀಗ ಉದ್ಘಾಟನೆ ಎರಡು ದಿನ ಮುಂಚಿತವಾಗಿ ನಡೆಯಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ಕುರಿತು ತೇಜಸ್ವಿ ಸೂರ್ಯ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಗುಲಾಬಿ ಮಾರ್ಗವು ಒಟ್ಟು 21.3 ಕಿ.ಮೀ ಮಾರ್ಗದಲ್ಲಿ, ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಉಳಿದ 13.8 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ನ.13ರಂದು ಮೊದಲ ಹಂತ ಉದ್ಘಾಟನೆ ಆಗಲಿದೆ. ಈ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಒಟ್ಟು 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಅದರಂತೆ, ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಒಟ್ಟು 6 ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಲಿವೆ. ಒಟ್ಟಾರೆಯಾಗಿ, ಈ ಮಾರ್ಗದ ಆರಂಭದೊಂದಿಗೆ ಬೆಂಗಳೂರು ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು 96.10 ಕಿ.ಮೀ ನಿಂದ 103.60 ಕಿ.ಮೀ ಗೆ ವಿಸ್ತರಣೆಯಾಗಲಿದೆ.