
ಕಲಬುರಗಿ: ಕರ್ನಾಟಕದ ಗ್ರಾಮವೊಂದರಲ್ಲಿ ಪಾಳುಬಿದ್ದ ಮನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವರದಿ ಪ್ರಕಾರ, ಇದೊಂದು ಶಾಪಗ್ರಸ್ಥ ಮನೆಯಾಗಿದ್ದು, ಈ ಆಸ್ತಿಗೆ ಸಂಬಂಧಿಸಿದವರು ಯಾರು ಇಲ್ಲಿ ವಾಸವಾಗಿಲ್ಲ. ಈ ಬೃಹತ್ ಮನೆಯಲ್ಲಿ ನಿಧಿಯೊಂದಿದೆ ಎಂಬ ಮಾತಿದೆ. ಗ್ರಾಮಸ್ಥರು ಸಹ ಈ ಮನೆಯಲ್ಲೊಂದು ನಿಧಿ ಇರೋದರ ಬಗ್ಗೆ ಹೇಳುತ್ತಾರೆ. ಇಷ್ಟು ಮಾತ್ರವಲ್ಲ ಈ ವಿಷಯ ಗೊತ್ತಿದ್ರೂ ಈ ಮನೆಯೊಳಗೆ ಜನರು ಹೋಗಲು ಹೆದರುತ್ತಾರೆ. ಊರಿನ ಮಧ್ಯದಲ್ಲಿಯೇ ಈ ಮನೆಯನ್ನು ನೀವು ನೋಡಬಹುದು. ಹಾಗಾದ್ರೆ ಈ ಮನೆ ಎಲ್ಲಿದೆ? ಈ ಮನೆಯೊಳಗೆ ಹೋಗಲು ಜನರು ಯಾಕೆ ಹೆದರುತ್ತಾರೆ? ಇಷ್ಟು ವರ್ಷಗಳಾದ್ರೂ ಇಲ್ಲಿಯ ನಿಧಿ ಸುರಕ್ಷಿತವಾಗಿರೋದ್ಯಾಕೆ ಎಂಬುದನ್ನು ನೋಡೋಣ ಬನ್ನಿ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಶಾಪಗ್ರಸ್ಥ ಮನೆಯನ್ನು ನೋಡಬಹುದು. ಈ ಮನೆ ಸುಮಾರು 300 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಯಾಕೆ ಇಲ್ಲಿ ಜನರು ವಾಸಿಸುತ್ತಿಲ್ಲ ಎಂಬ ಪ್ರಶ್ನೆಗೆ ವ್ಲಾಗರ್ ಪ್ರಸಾದ್ ಗೋಗಿ ಉತ್ತರವನ್ನು ನೀಡಿದ್ದಾರೆ.
ಈ ಮನೆ ಹಾಳು ಬೀಳುವ ಮುನ್ನ ಇಲ್ಲಿಗೆ ಪ್ರತಿದಿನವೊಂದು ಕರಿನಾಗರ ಹಾವು (ಕಾಳಿಂಗ ಸರ್ಪ) ಬರುತ್ತಿತ್ತಂತೆ. ಆ ಸಮಯದಲ್ಲಿಯೂ ಈ ಹಾವು ಮನೆಯಲ್ಲಿರೋ ಸದಸ್ಯರಿಗೆ ಯಾವುದೇ ರೀತಿಯ ಅಪಾಯವನ್ನು ಮಾಡಿಲ್ಲವಂತೆ. ಸ್ಥಳೀಯರ ಪ್ರಕಾರ, ಇಂದಿಗೂ ಈ ಮನೆಯಲ್ಲಿ ಕರಿನಾಗರಹಾವು ವಾಸವಾಗಿದೆಯಂತೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಮನೆಯಲ್ಲಿರುವ ಹುತ್ತಗಳನ್ನು ಪ್ರಸಾದ್ ಗೋಗಿ ಅವರ ವಿಡಿಯೋದಲ್ಲಿ ನೋಡಬಹುದು. ಇಂದಿಗೂ ಮನೆಯ ಗೋಡೆಗಳು ಬಲಿಷ್ಠವಾಗಿದ್ದು, ಇದೆಲ್ಲವನ್ನು ರಕ್ಷಣೆ ಮಾಡುತ್ತಿರೋದು ಗಾನದೇವತೆ. ಇಂದು ಮನೆಯಲ್ಲಿ ದೊಡ್ಡ ದೊಡ್ಡ ಮರಗಳು ಬೆಳೆದಿದ್ದು, ಈ ಮರದ ಬುಡದಲ್ಲಿಯೇ ಹಾವು ವಾಸವಾಗಿದೆಯಂತೆ.
ಇಷ್ಟು ದಿನಗಳಿಂದ ಮನೆಯನ್ನು ರಕ್ಷಣೆ ಮಾಡುತ್ತಿರುವ ಗಾನದೇವತೆ ತಾಯಿಯ ದರ್ಶನವನ್ನು ಪ್ರಸಾದ್ ಅವರು ಮಾಡಿಸಿದ್ದಾರೆ. ಇಂದಿಗೂ ಈ ಮನೆಯ ಮಾಲೀಕರಿಂದ ಗಾನದೇವತೆ ಪೂಜೆಗಳು ನಡೆದುಕೊಂಡು ಬರುತ್ತಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗಾನದೇವತೆಗೆ ಪೂಜೆ ನಡೆಯುತ್ತದೆ. ವಿಡಿಯೋ ಪ್ರಕಾರ, ಏಳು ರಂಜುಣ್ಣಗಿ (ಹಗೆ) ತುಂಬುವಷ್ಟು ಬಂಗಾರವನ್ನು ಈ ಮನೆ ಹೊಂದಿದೆ ಎನ್ನಲಾಗುತ್ತಿದೆ. ಆದ್ರೆ ಕಾಳಿಂಗ ಸರ್ಪ ಮತ್ತು ಗಾನದೇವತೆ ರಕ್ಷಣೆ ಹೊಂದಿರುವ ಕಾರಣ, ನಿಧಿಯನ್ನು ಮುಟ್ಟಲು ಯಾರು ಮುಂದಾಗಿಲ್ಲ ಅನ್ನೋದು ಇಲ್ಲಿಯ ಜನರ ಬಲವಾದ ನಂಬಿಕೆಯಾಗಿದೆ.
ಹಲವು ವರ್ಷಗಳಿಂದ ಪಾಳು ಬಿದ್ದಿರೋ ಈಗಿನ ತಲೆಮಾರಿನ ಮೂಲ ಮಾಲೀಕರು, ಮತ್ತೆ ಈ ಮನೆಯಲ್ಲಿ ವಾಸ ಮಾಡಬಹುದಾ ಎಂದು ಪಂಡಿತರನ್ನು ವಿಚಾರಿಸಿದ್ದಾರೆ. ಕರಿಗಡಬು, ತುಪ್ಪದಿಂದ ಹೋಮ ಹವನ ಮಾಡಿಸಿ, ಮನೆಯನ್ನು ಪುನರ್‌ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಆದ್ರೆ ಮನೆಯನ್ನು ಕಡೆವಲು ಮಾಲೀಕರು ಮುಂದಾಗಿಲ್ಲ.
ಈ ಮನೆಯು ಆರು ದೊಡ್ಡ ಕೋಣೆಗಳನ್ನು ಹೊಂದಿದೆ. ಈ ಮನೆಯಲ್ಲಿ ವಾಸಿಸುವ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರಂತೆ. ಹಾಗೆಯೇ ಮನೆಯಲ್ಲಿದ್ರೆ ಗಂಡು ಸಂತಾನ ಆಗಲ್ಲ ಎಂಬ ಮಾತಿದೆ. ಆರರ ಪೈಕಿ ಒಂದು ಕೋಣೆಯಲ್ಲಿ ಹುತ್ತವಿದ್ದು, ಇದರ ಕೆಳಗಡೆ ಚಿನ್ನಾಭರಣ ತುಂಬಿರೋ ನಿಧಿ ಇದೆಯಂತೆ. ಈ ಶಾಪದಿಂದಾಗಿ ಹಲವು ವರ್ಷಗಳ ಹಿಂದೆಯೇ ಮಾಲೀಕರು ಈ ಮನೆಯಿಂದ ಹೊರಗೆ ಬಂದಿದ್ದಾರಂತೆ. ಆದ್ರೆ ಈ ಮನೆಯ ಮೂಲ ಮಾಲೀಕರು ಯಾರು? ಸದ್ಯ ಎಲ್ಲಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.