ರಿಯಲ್ ಎಸ್ಟೇಟ್‌ನಲ್ಲಿ ಮೆಗಾ ಡೀಲ್, ದಕ್ಷಿಣ ಭಾರತದಲ್ಲಿ ಬೆಂಗಳೂರಿನ ಕಂಪನಿಯಿಂದ ₹1,500 ಕೋಟಿ ವೆಚ್ಚದ ಬೃಹತ್ ವಸತಿ ಯೋಜನೆ!

Published : Nov 02, 2026, 05:33 PM IST
Real Estate

ಸಾರಾಂಶ

ಬೆಂಗಳೂರು ಮೂಲದ ದಿವ್ಯಶ್ರೀ ಡೆವಲಪರ್ಸ್ ಮತ್ತು ಎಚ್‌ಡಿಎಫ್‌ಸಿ ಕ್ಯಾಪಿಟಲ್ ಜಂಟಿಯಾಗಿ 1,500 ಕೋಟಿ ರೂ. ಮೊತ್ತದ ವಸತಿ ಅಭಿವೃದ್ಧಿ ವೇದಿಕೆಯನ್ನು ಸ್ಥಾಪಿಸಿವೆ. ಈ ಮೂಲಕ ಮುಂದಿನ 3-4 ವರ್ಷಗಳಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ 6,750 ಕೋಟಿ ರೂ. ಮೌಲ್ಯದ ಮಧ್ಯಮ ಆದಾಯದ ವಸತಿ ಯೋಜನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.

ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಮೂಲದ ದಿವ್ಯಶ್ರೀ ಡೆವಲಪರ್ಸ್, ತನ್ನ ವಸತಿ ನಿರ್ಮಾಣ ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಎಚ್‌ಡಿಎಫ್‌ಸಿ ಸಮೂಹದ ರಿಯಲ್ ಎಸ್ಟೇಟ್ ಖಾಸಗಿ ಇಕ್ವಿಟಿ ವಿಭಾಗವಾದ ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್' ಜೊತೆ ಕೈಜೋಡಿಸಿರುವ ಸಂಸ್ಥೆಯು, ಭಾರತದಲ್ಲಿ 1,500 ಕೋಟಿ ರೂ. ಮೊತ್ತದ ವಸತಿ ಅಭಿವೃದ್ಧಿ ವೇದಿಕೆಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ.

6,750 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಬಂಡವಾಳ

ದಿವ್ಯಶ್ರೀ ಡೆವಲಪರ್ಸ್ ಹೊಂದಿರುವ ಸ್ಥಳೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಜ್ಞಾನ ಹಾಗೂ ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಬಲವಾದ ಹೂಡಿಕೆ ಪರಿಣತಿಯನ್ನು ಒಗ್ಗೂಡಿಸಿ ಈ ಜಂಟಿ ವೇದಿಕೆಯನ್ನು ರೂಪಿಸಲಾಗಿದೆ. ಮುಂದಿನ 3 ರಿಂದ 4 ವರ್ಷಗಳಲ್ಲಿ ಹೊಸ ಭೂಮಿ ಖರೀದಿ ಮತ್ತು ವಸತಿ ಯೋಜನೆಗಳ ಅಭಿವೃದ್ಧಿಗೆ ಇದು ನೇರವಾಗಿ ಬಂಡವಾಳ ಒದಗಿಸಲಿದೆ. ಈ ಸಹಭಾಗಿತ್ವದ ಮೂಲಕ ಅಂದಾಜು 6,750 ಕೋಟಿ ರೂ. ಒಟ್ಟು ಅಭಿವೃದ್ಧಿ ಮೌಲ್ಯದ ವಸತಿ ಯೋಜನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಎರಡು ಪ್ರತ್ಯೇಕ ಬೃಹತ್ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಕರಡು ಒಪ್ಪಂದಗಳು ಸಿದ್ಧವಾಗಿದ್ದು, ಮುಂಬರುವ 2 ರಿಂದ 3 ತಿಂಗಳುಗಳಲ್ಲಿ ಇವು ಅಂತಿಮಗೊಂಡು ಅಧಿಕೃತವಾಗಿ ಘೋಷಣೆಯಾಗಲಿವೆ.

ಮೂರು ಪ್ರಮುಖ ನಗರಗಳಿಗೆ ವಿಸ್ತರಣೆ

ಹೊಸ ಬಂಡವಾಳ ಹೂಡಿಕೆಯ ಕುರಿತು ಹರ್ಷ ವ್ಯಕ್ತಪಡಿಸಿರುವ ದಿವ್ಯಶ್ರೀ ವಸತಿ ವಿಭಾಗದ ಸಿಇಒ ಅವಿನಾಶ್ ಸುರೇಶ್, "ನಮ್ಮ ವಸತಿ ವಿಭಾಗವು ಪ್ರಸ್ತುತ ಅತ್ಯಂತ ಪ್ರಮುಖ ಘಟ್ಟದಲ್ಲಿದ್ದು, ಎಚ್‌ಡಿಎಫ್‌ಸಿ ಕ್ಯಾಪಿಟಲ್ ನೀಡುತ್ತಿರುವ ಬಂಡವಾಳವು ಯೋಜನೆಗಳ ಕಾಮಗಾರಿಗೆ ಹೆಚ್ಚಿನ ವೇಗ ನೀಡಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಿಂದ ಆರಂಭಿಸಿ, ಶೀಘ್ರವಾಗಿ ಬೆಳೆಯುತ್ತಿರುವ ದಕ್ಷಿಣ ಭಾರತದ ಇತರ ಪ್ರಮುಖ ನಗರಗಳಿಗೂ ನಮ್ಮ ವಸತಿ ಯೋಜನೆಗಳನ್ನು ವಿಸ್ತರಿಸಲಿದ್ದೇವೆ" ಎಂದು ತಿಳಿಸಿದ್ದಾರೆ.

ಈ ಒಪ್ಪಂದದ ಕುರಿತು ದಿವ್ಯಶ್ರೀ ಡೆವಲಪರ್ಸ್ ಅಧ್ಯಕ್ಷ ಹಾಗೂ ಸಿಇಒ ಭಾಸ್ಕರ್ ಎನ್. ರಾಜು ಮಾತನಾಡಿ, ದಿವ್ಯಶ್ರೀ ಸಂಸ್ಥೆಯು ಮುಂದಿನ ಹಂತದ ಬೃಹತ್ ಬೆಳವಣಿಗೆಗೆ ಸಂಪೂರ್ಣವಾಗಿ ಸಜ್ಜಾಗಿದೆ. ಎಚ್‌ಡಿಎಫ್‌ಸಿ ಜೊತೆಗಿನ ಈ ಸಹಭಾಗಿತ್ವವು ನಮ್ಮ ಮುಂಬರುವ ಯಶಸ್ಸು ಮತ್ತು ಮಾರುಕಟ್ಟೆ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ" ಎಂದಿದ್ದಾರೆ.

ಮಧ್ಯಮ ಆದಾಯದ ಮನೆಗಳಿಗೆ ಹೆಚ್ಚಿನ ಒತ್ತು

ಭಾರತದಲ್ಲಿ ಉತ್ತಮ ಗುಣಮಟ್ಟದ ಹಾಗೂ ಮಧ್ಯಮ ಆದಾಯದ ಮನೆಗಳಿಗೆ ನಿರಂತರ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಎಂಡಿ ಮತ್ತು ಸಿಇಒ ವಿಪುಲ್ ರುಂಗ್ಟಾ: ದಿವ್ಯಶ್ರೀ ಡೆವಲಪರ್ಸ್ ಹೊಂದಿರುವ ಬಲವಾದ ಟ್ರ್ಯಾಕ್ ರೆಕಾರ್ಡ್ ಜೊತೆ ಕೈಜೋಡಿಸಿ ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯ ಮತ್ತು ಅತ್ಯುತ್ತಮ ವಿನ್ಯಾಸದ ಮನೆಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ.

ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಪಾಲುದಾರ ಕುನಾಲ್ ವಾಧ್ವಾನಿ: ದೇಶದಲ್ಲಿ ಮಧ್ಯಮ ವರ್ಗದ ಮನೆಗಳಿಗಾಗಿ ಇರುವ ಬೃಹತ್ ಬೇಡಿಕೆಯನ್ನು ಪೂರೈಸಲು ಈ ಕಾರ್ಯತಂತ್ರದ ಒಪ್ಪಂದವು ಸಹಕಾರಿಯಾಗಲಿದೆ.

ದಿವ್ಯಶ್ರೀ ಡೆವಲಪರ್ಸ್ ಮತ್ತು ಎಚ್‌ಡಿಎಫ್‌ಸಿ ಕ್ಯಾಪಿಟಲ್ ಹಿನ್ನೆಲೆ

1975 ರಲ್ಲಿ ಸ್ಥಾಪನೆಯಾದ 'ದಿವ್ಯಶ್ರೀ ಡೆವಲಪರ್ಸ್' ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5 ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಬೃಹತ್ ಐಟಿ ಕಾರಿಡಾರ್‌ಗಳು ಹಾಗೂ ಪ್ರೀಮಿಯಂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಇದುವರೆಗೆ 3 ಕೋಟಿ ಚದರ ಅಡಿಯಷ್ಟು ಪ್ರೀಮಿಯಂ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ದಿವ್ಯಶ್ರೀ, ಮುಂಬರುವ ದಿನಗಳಲ್ಲಿ ತನ್ನ ಒಟ್ಟು ನಿರ್ಮಾಣ ವ್ಯಾಪ್ತಿಯನ್ನು 5.6 ಕೋಟಿ ಚದರ ಅಡಿಗೆ ವಿಸ್ತರಿಸುವ ಬೃಹತ್ ಗುರಿ ಹೊಂದಿದೆ.

ಇನ್ನೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಂಗಸಂಸ್ಥೆಯಾಗಿರುವ 'ಎಚ್‌ಡಿಎಫ್‌ಸಿ ಕ್ಯಾಪಿಟಲ್', ಭಾರತದಲ್ಲಿ ಕೈಗೆಟುಕುವ ಮತ್ತು ಮಧ್ಯಮ ವರ್ಗದ ಮನೆಗಳ ನಿರ್ಮಾಣಕ್ಕೆ ಪ್ರೈವೇಟ್ ಇಕ್ವಿಟಿ ಮೂಲಕ ಆರ್ಥಿಕ ನೆರವು ನೀಡುವ ದೇಶದ ಮುಂಚೂಣಿ ಸಂಸ್ಥೆಯಾಗಿದೆ. ಪ್ರಸ್ತುತ ಈ ಸಂಸ್ಥೆಯು ಸುಮಾರು 50,000 ಕೋಟಿ ರೂ. ಮೌಲ್ಯದ ಬೃಹತ್ ಹೂಡಿಕೆ ವೇದಿಕೆಯನ್ನು ನಿರ್ವಹಿಸುತ್ತಿದೆ.

PREV
Read more Articles on
click me!

Recommended Stories

ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು
'ಕಳೆದ 11 ವರ್ಷಗಳಿಂದ ಬಸ್‌ ಟಿಕೆಟ್‌ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್‌, 2025ರ ಶೇ.15ರಷ್ಟು ಏರಿಕೆ ಮರೆತುಹೋಯ್ತಾ?