ಕೋವಿಡ್‌ ಲಸಿಕೆ ಪಡೆಯದಿದ್ರೂ ನೀಡಿದ ಬಗ್ಗೆ ಮೆಸೇಜ್‌: ಕಕ್ಕಾಬಿಕ್ಕಿಯಾದ ಜನತೆ..!

By Kannadaprabha News  |  First Published Jun 7, 2021, 8:08 AM IST

* ವ್ಯಾಕ್ಸಿನ್‌ 2ನೇ ಡೋಸ್‌ ಪಡೆಯುವ ಮೊದಲೇ ಎಸ್‌ಎಂಎಸ್‌
* ನಿಮ್ಮ 2ನೇ ಡೋಸ್‌ ಪೂರ್ಣಗೊಂಡಿದೆ ಎಂದು ಬರುತ್ತಿರುವ ಎಸ್‌ಎಂಎಸ್‌ಗಳು
* ಸಾರ್ವಜನಿಕರಲ್ಲಿ ಆತಂಕ, ಜಿಲ್ಲೆಯಲ್ಲಿ ಮಾತ್ರ ವ್ಯಾಕ್ಸಿನ್‌ ಲಭ್ಯತೆಯೇ ಇಲ್ಲ
 


ಶಿವಕುಮಾರ ಕುಷ್ಟಗಿ

ಗದಗ(ಜೂ.07): ಪ್ರತಿಯೊಬ್ಬರೂ ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿವೆ. ಆದರೆ ಗದಗ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌ 1ನೇ ಡೋಸ್‌ ಪಡೆದು, ಇನ್ನು 2ನೇ ಡೋಸ್‌ ಪಡೆಯುವ ಮೊದಲೇ ನಿಮ್ಮ 2ನೇ ಡೋಸ್‌ ಪೂರ್ಣಗೊಂಡಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಸರು ಉಲ್ಲೇಖಿಸಿ ಎಸ್‌ಎಂಎಸ್‌ ಬರುತ್ತಿದ್ದು, ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.

Latest Videos

undefined

ಗದಗ ನಗರದ ವಿಮಲಾ ಶಿವಶಿಂಪಗೇರ ಹಾಗೂ ಗೋಪಾಲ ನಾಕೋಡ ಎನ್ನುವವರು ಸೇರಿದಂತೆ ಹಲವಾರು ಜನರು ಕೋವ್ಯಾಕ್ಸಿನ್‌ ಮೊದಲ ಡೋಸ್‌ ಏ. 19ರಂದು ಪಡೆದಿದ್ದಾರೆ. ಅದಾದ ಆನಂತರ ನಿಮ್ಮ 2ನೇ ಡೋಸ್‌ ಮೇ 5ರಂದು ಇದೆ ಎಂದು ಅವರಿಗೆ ಮಾಹಿತಿ ರವಾನಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ವ್ಯಾಕ್ಸಿನ್‌ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅವರೆಲ್ಲಾ ಮೇ 19ರಂದು ತಮ್ಮ 2ನೇ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ. ಆದರೆ ಜೂ. 5ರಂದು ಇದೇ ರೀತಿ 2ನೇ ಡೋಸ್‌ ವ್ಯಾಕ್ಸಿನ್‌ ಪಡೆಯದೇ ಇರುವ, ನಿಗದಿತ ಅವಧಿ ಪೂರ್ಣಗೊಂಡಿರುವ ಹಲವಾರು ಜನರಿಗೆ ನಿಮ್ಮ 2ನೇ ಡೋಸ್‌ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಎಸ್‌ಎಂಎಸ್‌ ಬರುತ್ತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.

ಅಟೋ ಜನರೇಟ್‌ ಸಾಧ್ಯತೆ

ಈ ಬಗ್ಗೆ ಆರೋಗ್ಯ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆಯಲ್ಲಿ 2ನೇ ಡೋಸ್‌ಗೆ ನಿಗದಿತ ಅವಧಿ ಪೂರ್ಣಗೊಂಡ ಕೆಲ ದಿನಗಳ ನಂತರವೂ ಅವರು ವ್ಯಾಕ್ಸಿನ್‌ ಪಡೆಯದೇ ಇದ್ದರೆ, ಅಟೋ ಜನರೇಟ್‌ ಎಸ್‌ಎಂಎಸ್‌ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಲಸಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಹಲವಾರು ರೀತಿಯ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು, ಈಗ ಲಸಿಕೆ ಪಡೆಯದೇ ನೀವು ಲಸಿಕೆ ಪಡೆದಿದ್ದೀರಿ ಎಂದು ಎಸ್‌ಎಂಎಸ್‌ ಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಮತ್ತಷ್ಟುಗೊಂದಲಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ದಲ್ಲೂ ನಿಲ್ಲದ ವಾಹನ ಸಂಚಾರ..!

ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವ್ಯಾಕ್ಸಿನ್‌ ಕೊರತೆ ಇರುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಕಳೆದ ತಿಂಗಳು ಪೂರ್ಣ ಕೋವಿಡ್‌ 2ನೇ ಅಲೆಯ ಗಾಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ವ್ಯಾಕ್ಸಿನ್‌ ಪಡೆಯಲು ಬಂದಿಲ್ಲ. ಲಸಿಕೆ ಪಡೆಯದೇ ಇದ್ದರೂ ಪಡೆದಿದ್ದಾರೆ ಎಂದು ಸೂಚಿಸುವ ವ್ಯವಸ್ಥೆಯ ಬಗ್ಗೆ ಏನು ಹೇಳಬೇಕು ಎಂದು ಈ ರೀತಿಯ ಎಸ್‌ಎಂಎಸ್‌ ಬಂದಿರುವ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ವೈಬ್‌ಸೈಟ್‌ನಲ್ಲಿ ಒಂದೇ ದಾಖಲು ಇದೆ

ಈ ಗೊಂದಲಮಯ ಪ್ರಕ್ರಿಯೆಯನ್ನು ಪರಾಮರ್ಶಿಸಲು ಕೋವಿನ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಸರ್ಟಿಫಿಕೆಟ್‌ ಡೌನ್‌ಲೋಡ್‌ ಮಾಡಿದರೆ ಕೇವಲ ಮೊದಲ ಡೋಸ್‌ ಮಾತ್ರ ಆಗಿದೆ ಎಂದು ಬರುತ್ತದೆ.

ಎರಡು ಲಕ್ಷ ಜನ ಮಿಕ್ಕಿ ಲಸಿಕೆ

ಜಿಲ್ಲೆಯಲ್ಲಿ ಇದುವರೆಗೂ (ಜೂ. 5ರ ವರೆಗೆ) 2,44,981 ಜನರಿಗೆ ಲಸಿಕೆ ಹಾಕಲಾಗಿದ್ದು, ಇದರಲ್ಲಿ 45 ವರ್ಷ ಮೇಲ್ಪಟ್ಟವರು, 18 ವರ್ಷದಿಂದ 44 ವರ್ಷದೊಳಗಿನವರು. ಸರ್ಕಾರ ಘೋಷಿಸಿರುವ ಫ್ರಂಟ್‌ಲೈನ್‌ ವಾರಿಯರ್ಸ್‌ಗಳು ಹೀಗೆ ಎಲ್ಲರೂ ಸೇರಿದ್ದಾರೆ. ರಾಜ್ಯದಲ್ಲಿ 1,49,77,980 ಜನರು ಲಸಿಕೆ ಪಡೆದಿದ್ದು, ರಾಜ್ಯದಲ್ಲಿ ಇನ್ನು 5 ಕೋಟಿಗೂ ಅಧಿಕ ಜನ ಲಸಿಕೆ ಪಡೆಯಬೇಕಿದೆ.    

ಈ ಬಗ್ಗೆ ನಮಗೇನೂ ಮಾಹಿತಿ ಇಲ್ಲ, ಅದು ನಮಗೆ ಗೊತ್ತಾಗುವುದಿಲ್ಲ, ಇದು ನೇರವಾಗಿ ವೆಬ್‌ಸೈಟ್‌ನಲ್ಲಿಯೇ ನೋಂದಣಿ ಮತ್ತು ಎಸ್‌ಎಂಎಸ್‌ ಬರುತ್ತದೆ ಎಂದು ಗದಗ ಡಿಎಚ್‌ಒ ಡಾ. ಸತೀಶ ಬಸರಿಗಿಡದ ತಿಳಿಸಿದ್ದಾರೆ. 
 

click me!