
ಕೊಡಗು (ಆ.15): ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ, ತಮಿಳುನಾಡು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಸೋಮವಾರ ಅದು ವಿಚಾರಣೆಗೆ ಬರುತ್ತಿದ್ದು, ಈ ಆದೇಶವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದು ಕೃಷಿ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದ್ದಾರೆ.
ಕಾಲುವೆಗಳ ಮೂಲಕ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಕದ ರಾಜ್ಯದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಒಂದು ತೀರ್ಮಾನ ಮಾಡಬೇಕಾಗುತ್ತದೆ. ಸೋಮವಾರ ಬರುವ ತೀರ್ಮಾನದ ಮೇಲೆ ನಾವು ಒಂದು ನಿರ್ಧಾರಕ್ಕೆ ಬರುತ್ತೇವೆ. ಅಲ್ಲಿಯವರೆಗೆ ನಾವು ಈ ಚಳವಳಿ, ವಿರೋಧದ ವಿಚಾರದಲ್ಲಿ ಮಾತನಾಡಲಾಗಲ್ಲ ಎಂದಿದ್ದಾರೆ. ಪಕ್ಕದ ರಾಜ್ಯದ ಮೇಲೆ ಕರುಣೆ ತೋರಿಸುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಇದನ್ನು ತಪ್ಪು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ, ನಾವು ಸಮವಾಗಿ ಈ ವಿಚಾರ ಹಂಚಿಕೊಳ್ಳಬೇಕಾಗಿದೆ.
ಇದಾದ ಮೇಲೆ ಮೇಕೆದಾಟು ಯೋಜನೆ ಇದೆ, ಮೇಕೆದಾಟು ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿವೆ. ಈಗ ಅದನ್ನು ಆರಂಭಿಸುವ ಸಂದರ್ಭದಲ್ಲಿ ಕೆಳಗಿನ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ನಿಭಾಯಿಸಬೇಕಾಗಿದೆ. ಕೆಲವು ಸಂದರ್ಭದಲ್ಲಿ 500 ರಿಂದ 600 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಈ ಸಂಕಷ್ಟ ಬಗೆಹರಿಸಲು ಮೇಕೆದಾಟು ಸರಿಯಾದ ಪರಿಹಾರ. ನ್ಯಾಯಾಲಯ ಏನು ತೀರ್ಮಾನ ನೀಡುತ್ತದೆ. ಅದನ್ನು ತಾಳ್ಮೆ, ಜಾಣ್ಮೆಯಿಂದ ಇದನ್ನು ಪರಿಹರಿಸಬೇಕಾಗಿದೆ ಎಂದು ಮಡಿಕೇರಿಯಲ್ಲಿ ಕೊಡಗು ಉಸ್ತುವಾರಿ, ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಇನ್ನು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಹಾಗೂ ಉಸ್ತುವಾರಿಯಿಂದ ವಿನಾಯಿತಿ ಕೊಡುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಚಿವ ಜಮೀರ್ ಅಹಮ್ಮದ್ ಅವರನ್ನು ಕೃಷಿ ಸಚಿವ ನರೇಂದ್ರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಆ ರೀತಿ ಹೇಳಿರುವುದಕ್ಕೆ ಸಾಧ್ಯವೇ ಇಲ್ಲ ಎಂದ ನರೇಂದ್ರಸ್ವಾಮಿ, ಸದನದಲ್ಲಿ ನಾನು ಇದ್ದೇ ನನ್ನ ಗಮನಕ್ಕೆ ಅದು ಬಂದಿಲ್ಲ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರಬಹುದೇನೋ ಅದರ ಬಗ್ಗೆ ನನಗೆ ಅರಿವಿಲ್ಲ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದರು. ಉಸ್ತುವಾರಿ ಜಿಲ್ಲೆ ಹಂಚಿಕೆ ಮಾಡಿದಾಗ ಅವರು ಇರಲಿಲ್ಲ. ಸದನ ಮುಗಿಸಿ ಜಮೀರ್ ಅವರು ಹೋಗಿದ್ದರು. ಅವರಿಗೆ ಜಿಲ್ಲಾ ಉಸ್ತುವಾರಿ ಜಮೀರ್ ಅವರೇ ಕೇಳಿದ್ದರೋ, ಇಲ್ಲ ಸಿಎಂ ಅವರೇ ಕೊಟ್ಟಿದ್ದರೋ ಗೊತ್ತಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಿವೆ ನಾವು 34 ಜನರು ಇದ್ದೇವೆ. ಇನ್ನೂ ಮೂರು ಜಿಲ್ಲೆಗಳ ಕೊರತೆ ಇರುತ್ತದೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.