ದೇಶಭಕ್ತಿಯನ್ನ ಹೀಗೂ ತೋರಿಸಬಹುದು.. ಬಾಗಲಕೋಟೆಯಲ್ಲಿ ಕ್ಷೌರಿಕನಿಂದ ಸತತ 21 ವರ್ಷಗಳಿಂದ ನಿರಂತರ ಸೇವೆ

Published : Aug 15, 2026, 04:22 PM IST
A Barber's Patriotism in Bagalkot

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಸೂಳೇಭಾವಿಯ ಮುತ್ತಪ್ಪ ಹಡಪದ ಎಂಬುವವರು ಕಳೆದ 21 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಹಿರಿಯರು, ಅಶಕ್ತರು ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಕರೆಯಿಂದ ಸೇವೆ ಒದಗಿಸುತ್ತಿರುವ ಮುತ್ತಪ್ಪ ಅವರ ಈ ವಿಶಿಷ್ಟ ದೇಶಪ್ರೇಮಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್‌ 15) ಸಂಭ್ರಮ ಮನೆಮಾಡಿದೆ. ದೇಶಪ್ರೇಮವನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಒಂದೊಂದು ದಾರಿ ಕಂಡುಕೊಳ್ಳುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದ ನಿವಾಸಿಯೊಬ್ಬರು ಕಳೆದ 21 ವರ್ಷಗಳಿಂದ ವಿಭಿನ್ನ ಹಾಗೂ ಮಾದರಿ ಸೇವೆಯ ಮೂಲಕ ದೇಶಭಕ್ತಿ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ. ಅವರೇ ಮುತ್ತಪ್ಪ ಹಡಪದ.

ಸ್ವಾತಂತ್ರ್ಯ ದಿನದಂದು ಉಚಿತ ಸೇವೆ!

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಮುತ್ತಪ್ಪ ಹಡಪದ ಅವರು ಸಣ್ಣದೊಂದು ಕ್ಷೌರದ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ಆಗಸ್ಟ್‌ 15 ರಂದು ತಮ್ಮ ಅಂಗಡಿಯನ್ನು ಸಣ್ಣ ಸಣ್ಣ ತ್ರಿವರ್ಣ ಧ್ವಜಗಳಿಂದ ಅಂದವಾಗಿ ಅಲಂಕರಿಸುವ ಇವರು, ಅಂದು ತಮ್ಮ ಬಳಿ ಬರುವ ಎಲ್ಲ ಗ್ರಾಹಕರಿಗೂ ಉಚಿತವಾಗಿ ಕ್ಷೌರ (Haircut) ಮತ್ತು ಶೇವಿಂಗ್‌ ಸೇವೆ ನೀಡುತ್ತಾರೆ. ಈ ಮೂಲಕ ದೇಶಕ್ಕಾಗಿ ತಮ್ಮದೇ ಆದ ಪುಟ್ಟ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.

ಗ್ರಾಮದ ಹಿರಿಯರ ಸಲಹೆಯಂತೆ ಆರಂಭವಾದ ಈ ವಿಶಿಷ್ಟ ಸೇವಾ ಕಾರ್ಯವನ್ನು ಮುತ್ತಪ್ಪ ಅವರು ಕಳೆದ 21 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೇವಲ ಉಚಿತ ಸೇವೆ ನೀಡುವುದಷ್ಟೇ ಅಲ್ಲದೇ ಗ್ರಾಮದ ಹಿರಿಯರು, ಅಶಕ್ತರು, ವಿಕಲಚೇತನರು ಹಾಗೂ ಬುದ್ಧಿಮಾಂದ್ಯರು ಸೇರಿದಂತೆ ಸಮಾಜದ ಅಗತ್ಯವಿರುವ ವರ್ಗದವರಿಗೆ ಅಕ್ಕರೆಯಿಂದ ಸೇವೆ ಒದಗಿಸುತ್ತಾರೆ. ದೇಶಕ್ಕಾಗಿ ದೊಡ್ಡ ಮಟ್ಟದಲ್ಲಿ ಸೇವೆ ಮಾಡಲು ಸಾಧ್ಯವಾಗದಿದ್ದರೂ ತಮ್ಮ ವೃತ್ತಿಯ ಮೂಲಕವೇ ಸಮಾಜಸೇವೆ ಮಾಡುತ್ತಿರುವ ಮುತ್ತಪ್ಪ ಅವರ ಕಾರ್ಯ ನಿಜಕ್ಕೂ ವಿಭಿನ್ನವಾಗಿದೆ.

ತಮ್ಮ ಪುಟ್ಟ ಅಂಗಡಿಯಲ್ಲೇ ದೇಶಭಕ್ತಿಯ ಭಾವನೆಯನ್ನು ಮೂಡಿಸಿ, ಸಮಾಜದ ಹಿಂದುಳಿದ ಹಾಗೂ ಅಶಕ್ತ ವರ್ಗದವರಿಗೆ ನೆರವಾಗುತ್ತಿರುವ ಮುತ್ತಪ್ಪ ಹಡಪದ ಅವರ ಕಾರ್ಯಕ್ಕೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ. ಪ್ರತಿ ವರ್ಷವೂ ತಪ್ಪದೇ ಈ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಮುತ್ತಪ್ಪ ಅವರ ಸಮಾಜಮುಖಿ ಕಳಕಳಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನತೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದಾರೆ. ದೇಶಭಕ್ತಿ ಎಂದರೆ ಕೇವಲ ಭಾಷಣ ಅಥವಾ ಆಚರಣೆಯಲ್ಲ, ಅದು ನಮ್ಮ ದೈನಂದಿನ ಬದುಕಿನಲ್ಲಿ ಮತ್ತು ಇತರರಿಗೆ ನೀಡುವ ಸೇವೆಯಲ್ಲೂ ಇರಬೇಕು ಎಂಬುದಕ್ಕೆ ಮುತ್ತಪ್ಪ ಅವರೇ ಒಂದು ಪ್ರೇರಣೆಯಾಗಿದ್ದಾರೆ.

PREV
Read more Articles on
click me!

Recommended Stories

'ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ
ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..