ಜೆಡಿಎಸ್‌ಗೆ ಮುಖಂಡರ ಸಾಮೂಹಿಕ ರಾಜೀನಾಮೆ

By Kannadaprabha News  |  First Published Oct 9, 2022, 4:34 AM IST

ಪಕ್ಷೇತರ ಅಭ್ಯರ್ಥಿಯಾಗಿ, ಶಾಸಕರಾಗಿ ನಂತರ ಜೆಡಿಎಸ್‌ ಪಕ್ಷಕ್ಕೆ ಬಂದ ಶಾಸಕ ವಾಸಣ್ಣ ಅವರು ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ಅವರ ಅವಶ್ಯಕತೆ ಇತ್ತೇ ಹೊರತು ಜೆಡಿಎಸ್‌ ಪಕ್ಷ ಅವರನ್ನು ಬೆಳೆಸಿಲ್ಲ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಗುರು ರೇಣುಕಾರಾಧ್ಯ ತಿಳಿಸಿದರು.


 ಗುಬ್ಬಿ (ಅ.09): ಪಕ್ಷೇತರ ಅಭ್ಯರ್ಥಿಯಾಗಿ, ಶಾಸಕರಾಗಿ ನಂತರ ಜೆಡಿಎಸ್‌ ಪಕ್ಷಕ್ಕೆ ಬಂದ ಶಾಸಕ ವಾಸಣ್ಣ ಅವರು ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ಅವರ ಅವಶ್ಯಕತೆ ಇತ್ತೇ ಹೊರತು ಜೆಡಿಎಸ್‌ ಪಕ್ಷ ಅವರನ್ನು ಬೆಳೆಸಿಲ್ಲ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಗುರು ರೇಣುಕಾರಾಧ್ಯ ತಿಳಿಸಿದರು.

ತಾಲೂಕಿನ ಹಾಗಲವಾಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್‌ (JDS)  ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಇಪ್ಪತ್ತು ವರ್ಷ ಜೆಡಿಎಸ್‌ ಕಟ್ಟಿದ್ದು ವಾಸಣ್ಣ ಗುಬ್ಬಿ ಕ್ಷೇತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ ಸದೃಢಗೊಳಿಸಿದ್ದರು. ಸಚಿವ (Minister)  ಸ್ಥಾನ ನೀಡಿದ ಬಳಿಕ ಅಭಿವೃದ್ಧಿ ಕೆಲಸ ಮಾತ್ರ ನೀಡದೆ ಅವರನ್ನು ಹೀನವಾಗಿ ನಡೆಸಿಕೊಂಡ ಬಗ್ಗೆ ಎಲ್ಲಾ ಕಾರ್ಯಕರ್ತರಿಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಇಡೀ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದರು.

Tap to resize

Latest Videos

ತಾಲೂಕಿನಲ್ಲಿ 52 ಸಾವಿರ ಜೆಡಿಎಸ್‌ ಸದಸ್ಯತ್ವ ಕಾರ್ಡ್‌ಗಳಿದ್ದು ಈಗಾಗಲೇ ಬಿದರೆ, ಕಡಬ, ಹಾಗಲವಾಡಿ ಪಂಚಾಯಿತಿ ಮಟ್ಟದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಪ್ರತಿ ಶನಿವಾರ ಒಂದೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹ ಕಾರ್ಯಕರ್ತರು ಜೆಡಿಎಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವಾಸಣ್ಣ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ನಾವು ಸಹ ಅಲ್ಲಿಗೆ ಹೋಗುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿರುವುದು ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು ತಿಳಿಸಿದರು.

ಯಾದವ ಮುಖಂಡ ಸಿದ್ದರಾಜು ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಸ್‌.ಅನಿಲ್‌ಕುಮಾರ್‌ ಮಾತನಾಡಿ, ವಾಸಣ್ಣ ಅವರು ಸಚಿವ ಆದಾಗ ಕುಮಾರಸ್ವಾಮಿಯವರನ್ನು ಅನುದಾನ ಕೊಡಿ ಅಂಥ ಕೇಳಿದಾಗ ಅನುದಾನ ಕೊಡದೇ ಅವರನ್ನ ಪಕ್ಷದಿಂದಲೇ ಹೊರಹಾಕಿ ಹಾಲಿ ಶಾಸಕರು ಇರುವವಾಗೇ ಸಿ ಎಸ್‌ ಪುರ ಮೂಲದ ನಾಗರಾಜುರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇದು ಸರಿಯಲ್ಲ, ಮುಂದಿನ ದಿನಗಳಲ್ಲಿ ಜೆಡಿಎಸ್‌ ಪಕ್ಷಕ್ಕೆ ಗುಬ್ಬಿಯಲ್ಲಿ ಕಾರ್ಯಕರ್ತರು ತಕ್ಕ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಾಗಲವಾಡಿಯ ನೂರು ಜನ ಕಾರ್ಯಕರ್ತರು ಜೆಡಿಎಸ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್‌, ಗಂಗಮ್ಮ, ರಮೇಶ್‌, ಕರಿಬಸಮ್ಮ, ಮುಖಂಡರಾದ ವೆಂಕಟೇಶ್‌, ಕರಿಬಸವಯ್ಯ, ಮರಿಯಣ್ಣ, ಸಿದ್ದರಾಜು, ಜುಂಜೇಗೌಡ, ಹೇಮಂತ್‌, ರಮೇಶ್‌, ಕೊಟ್ಟಪ್ಪ , ಮಂಜುನಾಥ್‌, ಮಹೇಶ್‌, ಅನಿಲ್‌ಕುಮಾರ್‌ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ :  

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರುವುದು ಖಚಿತ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್‌ ಹೇಳಿದರು. ಜೆಡಿಎಸ್‌ ಉಪಾಧ್ಯಕ್ಷರಾಗಿ ನೇಮಕಗೊಂಡಿರು ಹಿನ್ನಲೆ ಇಲ್ಲಿನ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದಾಗಿ ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನನ್ನನ್ನು ಉಪಾಧ್ಯಕ್ಷನಾಗಿ ನೇಮಿಸಿ ಅಪಾರ ನಿರೀಕ್ಷೆಯಿಟ್ಟಿದ್ದಾರೆ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಯೋಜನೆಗಳನ್ನು ಜನತೆಗೆ ತಲುಪಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು.

MURUGHA MUTT; ಮುರುಘಾ ಮಠದಲ್ಲಿ ಗಣ್ಯರ ಜತೆ ಶ್ರೀಗಳಿದ್ದ 47 ಪೋಟೋ ಕಳ್ಳತನ!

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ನಾಯಕ ಸಮುದಾಯಕ್ಕೆ ಜೆಡಿಎಸ್‌ ಪಕ್ಷ ಹಾಗೂ ವೈಯಕ್ತಿಕವಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಕೊಡುಗೆಯಿಂದ ವರಿಷ್ಠರು ನನ್ನ ಮೇಲಿಟ್ಟಿರುವ ನಿರೀಕ್ಷೆಗೆ ತಕ್ಕಂತೆ ಪಕ್ಷ ಸಂಘಟಿಸುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ, ಪಕ್ಷದ ವರಿಷ್ಠರು ನಮ್ಮ ಜಿಲ್ಲೆಗೆ ಸಮರ್ಥ ನಾಯಕತ್ವ ನೀಡುವ ಉದ್ದೇಶದಿಂದ ಬಿ.ಕಾಂತರಾಜ್‌ರನ್ನು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ. ಈಗಿನಿಂದಲೇ ಪಕ್ಷದ ನಾಯಕತ್ವ ವಹಿಸಿ ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಿ ಜಿಲ್ಲೆಯಲ್ಲಿ ಹೊಸ ಸಂಚಲನ ಸೃಷ್ಠಿಸುವಂತೆ ಸಲಹೆ ನೀಡಿದರು.

ಮುರುಘಾಶ್ರೀ ಪ್ರಕರಣ: ಎಸ್.ಕೆ‌ ಬಸವರಾಜನ್ ದಂಪತಿ ವಿರುದ್ದ Atrocity Case ದಾಖಲಿಸಲು ದಲಿತ ಸಂಘಟನೆ ಆಗ್ರಹ

ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಮಠದಹಟ್ಟಿವೀರಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್‌, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ತಾಲೂಕು ಅಧ್ಯಕ್ಷ ತಿಮ್ಮಣ್ಣ, ಹಿರಿಯೂರು ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೀತಮ್ಮ, ನಗರಸಭೆ ಸದಸ್ಯ ನಸ್ರುಲ್ಲಾ, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಚಂದ್ರಶೇಖರ್‌, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್‌, ಜಾನುಕೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಜಲಿಂಗಪ್ಪ, ಗುರುಸಿದ್ದಪ್ಪ ಜೆ.ಎನ್‌.ಕೋಟೆ. ಕಾಟಿಹಳ್ಳಿ ಕರಿಯಪ್ಪ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್‌, ಸೂರಪ್ಪ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್‌ ಬಿ.ಕಾಂತರಾಜ್‌ರವರನ್ನು ಅಭಿನಂದಿಸಿದರು.

click me!