ದುಂದು ವೆಚ್ಚಕ್ಕೆ ಸಾಮೂಹಿಕ ವಿವಾಹವೇ ಮದ್ದು: ಸಿದ್ದರಾಮಯ್ಯ

By Govindaraj SFirst Published Dec 19, 2022, 3:40 AM IST
Highlights

ಹಣವಿದ್ದವರು ಹೆಚ್ಚು ಖರ್ಚು ಮಾಡಿ ಮದುವೆ ಮಾಡುತ್ತಾರೆ, ಆದರೆ ದುಂದು ವೆಚ್ಚ ಮಾಡಿದರೂ ಮದುವೆಯೇ, ಸರಳವಾಗಿ ಮದುವೆಯಾದರೂ ಮದುವೆಯೇ ಹೀಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹವೇ ಮದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಅಫಜಲ್ಪುರ/ಚವಡಾಪುರ (ಡಿ.19): ಹಣವಿದ್ದವರು ಹೆಚ್ಚು ಖರ್ಚು ಮಾಡಿ ಮದುವೆ ಮಾಡುತ್ತಾರೆ, ಆದರೆ ದುಂದು ವೆಚ್ಚ ಮಾಡಿದರೂ ಮದುವೆಯೇ, ಸರಳವಾಗಿ ಮದುವೆಯಾದರೂ ಮದುವೆಯೇ ಹೀಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹವೇ ಮದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಫಜಲ್ಪುರ ಪಟ್ಟಣದ ಮಹಾಂತೇಶ್ವರ ಕಾಲೇಜು ಮೈದಾನದಲ್ಲಿ ಶಾಸಕ ಎಂ.ವೈ. ಪಾಟೀಲ್‌ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕ ಎಂ.ವೈ. ಪಾಟೀಲ್‌ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಅವರಿಗೆ ಅಪಾರ ಅನುಭವ ಇದೆ. 

ಸರ್ವದರ್ಮಗಳ ಸಾಮೂಹಿಕ ವಿವಾಹ ಏರ್ಪಡಿಸಿ ಬಡವರ ಕಣ್ಣಿರು ಒರೆಸುವ ಕೆಲಸ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು. ಈ ಭಾಗದಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿ ಬೆಳೆ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರ ರೈತರ ನೆರವಿಗೆ ಬಾರದೆ ಇರುವುದು ನಿಜಕ್ಕೂ ಖಂಡನೀಯ. ಬಿಜೆಪಿಗರಿಗೆ ರೈತರು ಬೇಕಾಗಿಲ್ಲ, ಕಾರ್ಪೊರೇಟರ್‌ಗಳೆ ಬೇಕು, ಅಲ್ಲದೆ ರಾಜ್ಯದ ಹಿತ ಬೇಕಾಗಿಲ್ಲ, ತಮ್ಮ ವರಿಷ್ಠರ ಹಿತ ಕಾಯುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ತೊಗರಿ ಬೆಳೆ ಹಾಳಾಗಿರುವ ಕುರಿತು ಚರ್ಚೆ ನಡೆಸಿ ಪರಿಹಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಒಬಿಸಿ ಮೀಸಲಿಗೆ ಸರ್ಕಾರ ಮೀನಮೇಷ: ಸಿದ್ದರಾಮಯ್ಯ ಕಿಡಿ

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಡಾ. ಅಜಯ್‌ ಸಿಂಗ್‌, ಮಾಜಿ ಶಾಸಕ ಬಿ.ಆರ್‌ ಪಾಟೀಲ್‌ ಮಾತನಾಡಿ, ಹಣವಂತರು ಪ್ರತಿಷ್ಟೆಗಾಗಿ ದುಂದುವೆಚ್ಚ ಮಾಡಿ ಮದುವೆ ಮಾಡುತ್ತಾರೆ. ಆದರೆ, ಶಾಸಕ ಎಂ.ವೈ. ಪಾಟೀಲ್‌ ಅವರು ಬಡವರ ಮಕ್ಕಳ ಮದುವೆಯನ್ನು ತಮ್ಮ ಮೊಮ್ಮಗಳ ಮದುವೆಯೊಂದಿಗೆ ಮಾಡಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಅವರು ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಶಾಸಕ ಎಂ.ವೈ. ಪಾಟೀಲ್‌ ಮಾತನಾಡಿ, ಅನೇಕ ದಿನಗಳಿಂದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಬೇಕೆನ್ನುವ ಆಸೆ ಇತ್ತು. ಎಲ್ಲರ ಸಹಕಾರದಿಂದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಹಕಾರ ನೀಡಿದ ಎಲ್ಲರಿಗೂ ಮನತುಂಬಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಲ್ಲರ ಆಶೀರ್ವಾದವೇ ನಮಗೆ ಶ್ರೀರಕ್ಷೆಯಾಗಿದೆ ಎಂದರು.

ಸಿದ್ದರಾಮಯ್ಯ, ನನ್ನ ಮಧ್ಯೆ ಜಗಳ ಶುದ್ಧ ಸುಳ್ಳು: ಡಿ.ಕೆ.ಶಿವಕುಮಾರ್‌

ಎಚ್‌ಕೆಇ ಸಂಸ್ಥೆಯ ನಿರ್ದೇಶಕ ಅರುಣಕುಮಾರ ಪಾಟೀಲ್‌ ಮಾತನಾಡಿದರು. ಮಾಜಿ ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿದರು. ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ವೀರಮಹಾಂತ ಶಿವಾಚಾರ್ಯರು, ಜಯಗುರುಶಾಂತಲಿಂಗಾರಾಧ್ಯ ಶಿವಾಚಾರ್ಯ, ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಂಕರ ಮೇತ್ರೆ, ಎಸ್‌.ಬಿ ಪಾಟೀಲ್‌ ಪುಣೆ, ಖನೀಜ್‌ ಫಾತೀಮಾ, ಅಲ್ಲಮಪ್ರಭು ಪಾಟೀಲ್‌, ಅವಿನಾಶ ಜಾಧವ, ಸುಭಾಷ ಗುತ್ತೇದಾರ, ಜಗದೇವ ಗುತ್ತೇದಾರ, ರಾಜೇಂದ್ರ ಪಾಟೀಲ್‌ ರೇವೂರ(ಬಿ), ತಿಪ್ಪಣ್ಣಪ್ಪ ಕಮಕನೂರ, ಶರಣು ಮೋದಿ, ಮಕ್ಬೂಲ್‌ ಪಟೇಲ್‌, ರಜಾಕ್‌ ಪಟೇಲ್‌, ಪಪ್ಪು ಪಟೇಲ್‌, ಮತೀನ್‌ ಪಟೇಲ್‌, ರಮೇಶ ಪೂಜಾರಿ, ಜೆ.ಎಂ ಕೊರಬು, ಸಂಗ್ರಾಮಗೌಡ ಪಾಟೀಲ್‌, ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಡಾ. ಸಂಜು ಪಾಟೀಲ್‌, ಎಸ್‌.ವೈ ಪಾಟೀಲ್‌, ಅಮರ ಪಾಟೀಲ್‌ ಇದ್ದರು.

click me!