Mandya: ನನ್ನ ಜೀವನೋತ್ಸಾಹ ಕುಂದಿಲ್ಲ: ಎಸ್‌.ಎಂ.ಕೃಷ್ಣ

By Govindaraj SFirst Published Dec 18, 2022, 11:18 PM IST
Highlights

ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯಿಂದ 91ರ ಇಳಿ ವಯಸ್ಸಿನಲ್ಲೂ ನನ್ನ ಜೀವನೋತ್ಸಾಹ ಕುಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ಮಂಡ್ಯ (ಡಿ.18): ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯಿಂದ 91ರ ಇಳಿ ವಯಸ್ಸಿನಲ್ಲೂ ನನ್ನ ಜೀವನೋತ್ಸಾಹ ಕುಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು. ಕರ್ನಾಟಕ ಸಂಘ ಮತ್ತು ಸಂಕಥನ ಮಂಡ್ಯ ವತಿಯಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜಗದೀಶ್‌ ಕೊಪ್ಪ ಅವರ ದಕ್ಷಿಣದ ಗಾಂಧಿ ಕೆ.ಕಾಮರಾಜ್‌ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಕೆಲವರು ನರೇಂದ್ರ ಮೋದಿ ಅವರನ್ನು ಹಿಂದೆ-ಮುಂದಿಲ್ಲದವರು ಎಂದು ಅತ್ಯಂತ ಲಘುವಾಗಿ ಟೀಕಿಸುತ್ತಾರೆ. ಆದರೆ, ರಾಷ್ಟ್ರನಾಯಕರನ್ನು ಸೃಷ್ಟಿಸಬಲ್ಲಂತಹ ಶಕ್ತಿ ಹೊಂದಿದ್ದ ಕೆ.ಕಾಮರಾಜ್‌ ನಾಡಾರ್‌ ಅವರೂ ಕೂಡ ಆಜನ್ಮ ಬ್ರಹ್ಮಚಾರಿಯಾಗಿದ್ದರು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

1967ರಲ್ಲಿ ನಾನು ಹಾಗೂ ಎಚ್‌.ಕೆ.ವೀರಣ್ಣಗೌಡರು ಅಂದಿನ ಚುನಾವಣೆಯಲ್ಲಿ ಸೋಲನುಭವಿಸಿದ್ದೆವು. ಆಗ ಆಕಾಶವಾಣಿ ವಾರ್ತೆಯಲ್ಲಿ ಕೆ.ಕಾಮರಾಜ್‌ ನಾಡಾರ್‌ ಕೂಡ ಚುನಾವಣೆಯಲ್ಲಿ ಸೋಲನುಭವಿಸಿದ್ದು ಬಿತ್ತರಗೊಂಡಿತ್ತು. ಆಗ ನಾವು ಅಂತಹ ದೊಡ್ಡ ವ್ಯಕ್ತಿಯೇ ಸೋತಿದ್ದಾರೆ. ನಮ್ಮದೇನು ಮಹಾ ಎಂದು ಸಮಾಧಾನಪಟ್ಟುಕೊಂಡಿದ್ದೆವು. ಆದರೆ, ಸಭ್ಯತೆಯ ವ್ಯಾಪ್ತಿಯನ್ನು ಮೀರಿ ಎದುರಾಳಿಯನ್ನು ಟೀಕಿಸುವ ಮಟ್ಟಕ್ಕೆ ನಾವು ಇಳಿಯುತ್ತಿರಲಿಲ್ಲ. ಒಮ್ಮೆ ಕೆ.ವಿ.ಶಂಕರಗೌಡ ಕೂಡ ನನ್ನ ಎದುರಾಳಿಯಾಗಿದ್ದರು. ಪ್ರಚಾರದ ದಿನಗಳಲ್ಲಿ ಒಂದು ದಿನವೂ ಅವರ ವಿರುದ್ಧ ಲಘುವಾಗಿ ಮಾತನಾಡಿಲ್ಲ. ಏಕೆಂದರೆ, ಶಂಕರಗೌಡರು ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಅನನ್ಯವಾದುದು ಎಂಬ ಸೂಕ್ಷ್ಮತೆ ನಮ್ಮಲ್ಲಿತ್ತು ಎಂದರು.

ಜನರ ಕನಸು ಸಾಕಾರಗೊಳಿಸಲು ಬಿಜೆಪಿ ಸೇರಿದೆ, ವೈಯಕ್ತಿಕ ಲಾಭಕ್ಕಾಗಿ ಅಲ್ಲ: ಸಚಿವ ಬಿ.ಸಿ.ಪಾಟೀಲ್‌

ಆನಂತರದಲ್ಲಿ ಜಿಲ್ಲೆಯ ಜನರು ನನ್ನನ್ನು ಸಂಸತ್ತಿಗೆ ಕಳುಹಿಸಿದರು. ಅಲ್ಲಿ ಕೆ.ಕಾಮರಾಜ್‌ ಅವರ ರಾಜಕೀಯ ಕಾರ್ಯವೈಖರಿಯನ್ನು ಹತ್ತಿರದಿಂದ ಕಾಣುವಂತಾಯಿತು. ಇಂತಹ ಅವಕಾಶ ಕೊಟ್ಟಿದ್ದಕ್ಕಾಗಿ ಜಿಲ್ಲೆಯ ಜನರನ್ನು ಮನಃತುಂಬಿ ಅಭಿನಂದಿಸುತ್ತೇನೆ ಎಂದರು. ಜಗದೀಶ್‌ ಕೊಪ್ಪ ಅವರು ಪುಸ್ತಕಗಳನ್ನು ಬರೆಯುತ್ತಾ ದೊಡ್ಡ ಮನುಷ್ಯರ ಸಮಾಜಮುಖಿ ಕೆಲಸಗಳನ್ನು ದಾಖಲಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ದಾಖಲೀಕರಣಗಳು ಮುಂದುವರೆದರೆ ಭವಿಷ್ಯದ ಪ್ರಜೆಗಳ ನೈತಿಕ ಶಕ್ತಿಯನ್ನು ಹೆಚ್ಚಿಸುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ಕೃತಿಯ ಕುರಿತು ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌, ಪ್ರಸ್ತುತದಲ್ಲಿ ಒಬ್ಬ ಗ್ರಾಪಂ ಸದಸ್ಯನಾಗಿ ಗೆದ್ದ ಬಳಿಕ ಅಧ್ಯಕ್ಷನಾಗಬೇಕು. ತಾಪಂ, ಜಿಪಂ ಅಧ್ಯಕ್ಷನಾಗಿ ಏಕಾಏಕಿ ಶಾಸಕನಾಗಿಬಿಡಬೇಕು ಎಂಬ ಹಪಾಹಪಿಯಲ್ಲಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ಆಡಳಿತಗಾರನೆನಿಸಿಕೊಂಡ ಕೆ.ಕಾಮರಾಜ್‌ ಅವರನ್ನೇ ಸೋಲಿಸಿಬಿಡುತ್ತಾರೆ. ಇದು ಸಾಮಾಜಿಕ ವಿಪ್ಲವಗಳ ಒಂದು ಮುಖವನ್ನು ತೋರಿಸುತ್ತದೆ ಎಂದರು. ದೇಶದ ಪ್ರಥಮ ಪ್ರಧಾನಿ ನೆಹರು ಅವರು ಪಂಚವಾರ್ಷಿಕ ಯೋಜನೆ ಚಿಂತನೆಯಲ್ಲಿದ್ದಾಗ ಕೆ.ಕಾಮರಾಜ್‌ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಮೀಸಲಿರಿಸುವಂತೆ ಒತ್ತಡ ಹಾಕಿ ಅದರಲ್ಲಿ ಯಶಸ್ವಿಯಾಗುತ್ತಾರೆ. ಅದರ ಪ್ರತಿಫಲವನ್ನು ತಮಿಳುನಾಡು ಜನತೆ ನಿರಂತರವಾಗಿ ಅನುಭವಿಸಿಕೊಂಡು ಬಂದಿದ್ದಾರೆ ಎಂದು ನುಡಿದರು.

Uttara Kannada: ಮರಾಠಿಗರಿಗೆ ಕಸಾಪ ತಕ್ಕ ಪಾಠ ಕಲಿಸಲಿ: ಸಚಿವ ಹೆಬ್ಬಾರ್

ಅವರಿಂದ ಸ್ಫೂರ್ತಿಗೊಂಡ ಎಸ್‌.ಎಂ.ಕೃಷ್ಣ ಅವರೂ ಕೂಡ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೊಳಿಸಿದರು. ಅಂದಿನ ಸಂದರ್ಭದಲ್ಲಿ ನಾನು ದೇಶದಲ್ಲಿ ಪ್ರಥಮವಾಗಿ ಆರಂಭಿಸಿದ್ದಲ್ಲ, ಕಾಮರಾಜ್‌ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಯೋಜನೆಯಾಗಿದೆ. ಅದನ್ನೇ ನಾನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತಂದಿದ್ದೇನೆ ಎಂದು ಆತ್ಮವಂಚನೆ ಇಲ್ಲದೆ ಹೇಳಿಕೊಂಡಿದ್ದಾರೆ. ಇಂತಹ ಬೆಳವಣಿಗೆಗಳು ರಾಜಕೀಯ ಧುರೀಣರಲ್ಲಿ ಮಾತ್ರ ಕಾಣಬಹುದು ಎಂದರು. ವೇದಿಕೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು. ಲೇಖಕ ಜಗದೀಶ್‌ ಕೊಪ್ಪ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು.

click me!