ಮಾಜಿ ಶಾಸಕ ಪ್ರತಾಪಗೌಡ ಅವರಿಗೆ ಅಗ್ನಿ ಪರೀಕ್ಷೆಯ ಎಲೆಕ್ಷನ್| ಕ್ಷೇತ್ರವನ್ನು ಬಿಟ್ಟು ಕೊಡಬಾರದು ಎನ್ನುವ ತಂತ್ರಕಾರಿಗೆಯಲ್ಲಿ ಕಾಂಗ್ರೆಸ್| ಮಸ್ಕಿ ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ತಂತ್ರ-ಪ್ರತಿತಂತ್ರಗಾರಿಕೆ|
ರಾಮಕೃಷ್ಣ ದಾಸರಿ
ರಾಯಚೂರು(ಜ.20): ಕಾಂಗ್ರೆಸ್‌ನಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ, ಹೊಸ ಸರ್ಕಾರ ರಚನೆ, ಉಪ ಚುನಾವಣೆ ಘೊಷಣೆಗೆ ನ್ಯಾಯಾಲಯದಲ್ಲಿ ವ್ಯಾಜ್ಯ ಅಡ್ಡಿ ಬಳಿಕ ಅರ್ಜಿ ವಜಾ ಎಲ್ಲವೂ ಕ್ಲಿಯರ್, ಇನ್ನೇನು ಉಪಕದನಗೆ ಸಿದ್ಧ ಎಂದುಕೊಳ್ಳುತ್ತಿದ್ದಂತೆಯೇ ಗ್ರಾಪಂ ಸಾರ್ವಜನಿಕ ಚುನಾವಣೆ ಘೋಷಣೆ ಹೀಗೆ ಒಂದಿಲ್ಲ ಒಂದು ಅಡ್ಡಿ, ಆತಂಕಗಳಿಂದ ದೂರವಾಗುತ್ತಲೇ ಇರುವ ಮಸ್ಕಿ ಉಪಚುನಾವಣೆ ಕೊನೆಗೂ ಘೋಷಣೆಯ ನಿರೀಕ್ಷೆಯ ಕೊನೆ ಹಂತಕ್ಕೆ ಬಂದು ತಲುಪಿದ ಹಾಗೆ ಕಾಣುತಿದೆ.
undefined
ರಾಜಕೀಯ ಪಕ್ಷಗಳ ಲೆಕ್ಕಾಚಾರದ ಪ್ರಕಾರ ಈ ವಾರ ಇಲ್ಲವೇ ಮುಂದಿನ ವಾರ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮಂಕಾಗಿದ್ದ ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆಗಳು ಮತ್ತು ಚುರುಕುಪಡೆದಿದೆ.
ಅಗ್ನಿ ಪರೀಕ್ಷೆ:
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಬಿಜೆಪಿ ಸರ್ಕಾರ ರಚನೆ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹಾಗೂ ತನಗೆ ಸಚಿವ ಸ್ಥಾನ ಹೀಗೆ ಮೂರು ಗುರಿಗಳನ್ನಿಟ್ಟುಕೊಂಡು ಕಾಂಗ್ರೆಸ್‌ನಿಂದ ಗೆದ್ದಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರವಿಲ್ಲದೇ ಎರಡು ವರ್ಷಗಳ ಕಾಲ ಕಾಯುತ್ತಾ ಕುಳಿತಿರುವ ಪ್ರತಾಪಗೌಡ ಪಾಟೀಲ್ ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಲೇಬೇಕು ಎನ್ನುವ ಒತ್ತಡದಲ್ಲಿದ್ದಾರೆ. ಇಲ್ಲದಿದ್ದರೇ ಹಾಕಿಕೊಂಡ ಗುರಿ, ತೆಗೆದುಕೊಂಡು ನಿರ್ಧಾರಗಳು, ಕಳೆದ ಹೋದ ಅಧಿಕಾರ-ಸ್ಥಾನ ಮಾನಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎನ್ನುವುದು ಆಡಳಿತರೂಢ ಕಮಲ ಪಾಳೆಯದ ತಳಮಳವಾಗಿದೆ.
ಯಡಿಯೂರಪ್ಪ ನಾಲಿಗೆ ಇಲ್ಲದ ನಾಯಕ: ಸಿಎಂ ವಿರುದ್ಧ ವಿಶ್ವನಾಥ್ ವಾಗ್ದಾಳಿ
ಕೈ ಜಾರದಂತೆ ತಂತ್ರಗಾರಿಕೆ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ದಕ್ಕಿಸಿಕೊಂಡಿದ್ದ ಕಾಂಗ್ರೆಸ್ ಉಪಚುನಾವಣೆಯಲ್ಲಿ ಆ ಸ್ಥಾನವನ್ನು ಕೈಜಾರದಂತೆ ರಾಜಕೀಯ ತಂತ್ರಗಾರಿಕೆಯನ್ನು ಎಣೆದು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಮೊದಲ ಭಾಗವಾಗಿ ಬಿಜೆಪಿಯಲ್ಲಿದ್ದ ಆರ್.ಬಸನಗೌಡ ತುರವಿಹಾಳ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಪರಾಬವಗೊಂಡಿದ್ದ ತುರವಿಹಾಳ ಅವರ ರಾಜಕೀಯ ಜೀವನಕ್ಕೆ ಕೈ ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ. ಆ ನಿಟ್ಟಿನಲ್ಲಿಯೇ ಉಪ ಚುನಾವಣೆಯಲ್ಲಿ ಪ್ರತಾಪಗೌಡರ ವಿರುದ್ಧ ಹೋರಾಡುವ ಸಮರ್ಥ ನಾಯಕನನ್ನು ಹಿಡಿದು ಕೈ ವಶಕ್ಕೆ ಮಾಡಿಕೊಂಡಿದ್ದಾರೆ. ಇನ್ನು ರಾಜ್ಯ ಸರ್ಕಾರದ ನ್ಯೂನ್ಯತೆಗಳು, ಎರಡು ವರ್ಷಗಳಿಂದ ಕ್ಷೇತ್ರವನ್ನು ಅನಾಥವನ್ನಾಗಿಸಿದವರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈ ಪಾಳೆಯದ ಮುಖಂಡರು ಶ್ರದ್ಧಾ-ಭಕ್ತಿಯಿಂದ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಮಸ್ಕಿ ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ತಂತ್ರ-ಪ್ರತಿತಂತ್ರಗಾರಿಗೆಯಡಿ ಕಾವು ಪಡೆದಿದ್ದು, ಘೋಷಣೆಯೊಂದೆ ಬಾಕಿ ಯಾರ ಬಲಾಬಲ ಎಷ್ಟುಎನ್ನುವುದನ್ನು ನೋಡಿಯೇ ಬಿಡೋಣ ಎನ್ನುವ ಮಾದರಿಯಲ್ಲಿ ಕೈ-ಕಮಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪೂರ್ವಸಿದ್ಧತೆಯಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ.