ಕಲಬುರಗಿಯಲ್ಲಿ ನಿಲ್ಲದೆ ಓಡುತ್ತಿವೆ ರೈಲುಗಳು: ಇಲಾಖೆಯ ಅಲಕ್ಷತನಕ್ಕೆ ಜನ ಹೈರಾಣ

By Kannadaprabha News  |  First Published Jan 20, 2021, 10:51 AM IST

ಆದೋನಿ, ಮಂತ್ರಾಲಯಂ, ತಾಡಪತ್ರಿ, ಗುಂತಕಲ್‌, ಕಡಪಾದಲ್ಲಿ ನಿಲ್ಲುವ ರೈಲು ಕಲಬುರಗಿಯಲ್ಲಿ ನಿಲ್ಲೋದಿಲ್ಲ| ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನತ್ತ ರೈಲ್ವೆ ಇಲಾಖೆಯ ಮುಂದುವರಿದ ಅಲಕ್ಷತನ ಧೋರಣೆ| 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜ.20): ಕಲ್ಯಾಣ ನಾಡಿನ ಹೆಬ್ಬಾಗಿಲು, ವಿಭಾಗೀಯ ಕೇಂದ್ರಸ್ಥಳ ಕಲಬುರಗಿ ಕೇಂದ್ರ ರೇಲ್ವೆ ಸಚಿವಾಲಯದ ಕಣ್ಣಿಗೆ ಕಾಣುತ್ತಲೇ ಇಲ್ಲವೆ? ಎಂಬಂತಾಗಿದೆ. ಏಕೆಂದರೆ ಅತ್ಯಂತ ಮಹತ್ವದ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್‌ನ ಅನೇಕ ಮಹತ್ವದ ನಗರಗಳಿಗೆ, ಬಿಸಿನೆಸ್‌ ಸೆಂಟರ್‌ಗಳಿಗೆ ಸಂಪರ್ಕ ಬೆಸೆಯುವ 2 ಮಹತ್ವದ ರೈಲುಗಳು ಕಲಬುರಗಿ ಮೂಲಕವೇ ಓಡುತ್ತಿವೆಯಾದರೂ ಈ ಊರಲ್ಲಿ ನಿಲ್ಲುತ್ತಿಲ್ಲ!

Tap to resize

Latest Videos

ಕಳೆದೊಂದು ವಾರದೊಳಗೆ ನಡೆದಿರುವಂತಹ ಈ ಬೆಳವಣಿಗೆ ಸಹಜವಾಗಿಯೇ ಕಲಬುರಗಿ ಸೇರಿದಂತಿರುವ ಕಲ್ಯಾಣ ನಾಡಿನ ನಾಲ್ಕು ಜಿಲ್ಲೆಗಳ ರೇಲ್ವೆ ಬಳಕೆದಾರರಲ್ಲಿ ಬೇಸರ- ನಿರಾಸೆ ಮೂಡಿಸಿದೆ. ಮೊದಲೇ ರೇಲ್ವೆ ಸವಲತ್ತಿಲ್ಲ ಎಂದು ಕಂಗಾಲಾಗಿರುವ ನಮಗೆ ನಮ್ಮೂರಿಂದಲೇ ರೈಲುಗಳು ಓಡುತ್ತಿದ್ದರೂ ಅವುಗಳನ್ನು ಹತ್ತುವ ಯೋಗಾಯೋಗ ಇಲ್ಲವಲ್ಲ ಎಂದು ರೇಲ್ವೆ ಪ್ರಯಾಣಿಕರು ಅಲವತ್ತುಕೊಳ್ಳುತ್ತಿದ್ದಾರೆ.

ಕಲಬುರಗಿ ಅಂದ್ರೆ ಅಪಥ್ಯ:

ನಾಲ್ಕು ದಿನಗಳ ಹಿಂದಷ್ಟೆಗುಜರಾತ್‌ನ ಕೇವಡಿಯಾಕ್ಕೆ (ಏಕತಾ ಪ್ರತಿಮೆ ಇರುವ ಸ್ಥಳ) ದೇಶದ ಎಲ್ಲಾ ಮೂಲೆಗಳಿಂದಲೂ ಸಂಪರ್ಕ ಬೆಸೆಯುವಂತಹ ಉದ್ದೇಶದೊಂದಿಗೆ ದಕ್ಷಿಣ ಭಾರತದ ಚ್ನೈನೆನಿಂದ ಹೊಸ ರೈಲನ್ನು ಆರಂಭಿಸಲಾಗಿತ್ತು. ಈ ರೈಲಿಗೆ ಖುದ್ದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚಾಲನೆ ನೀಡಿದ್ದರು. ಈ ರೈಲೂ ಸಹ ಕಲಬುರಗಿ ಮೂಲಕವೇ ಸಾಗಿ ಕೇವಡಿಯಾ ತಲುಪುತ್ತಿದ್ದರೂ ಕಲಬುರಗಿಗೆ ನಿಲ್ಲೋದಿಲ್ಲ. ಗುಂತಕಲ್‌ಗೆ ನಿಲ್ಲುವ ಈ ರೈಲಿಗೆ ಕಲಬುರಗಿ ಅಂದರೆ ಅಪಥ್ಯ.

ಚಿಂಚೋಳಿ: ನಕಲಿ ಬಿಲ್‌ಗೆ ಸಹಿ ಮಾಡದ ಅಧಿಕಾರಿ ಮೇಲೆ ಪುರಸಭೆ ಸದಸ್ಯನ ಗುಂಡಾಗಿರಿ

ಏಕತಾ ಪ್ರತಿಮೆ ಇರುವ ಗುಜರಾತ್‌, ಮಹಾರಾಷ್ಟ್ರದ ಅನೇಕ ಊರುಗಳಿಗೆ ಸಂಪರ್ಕ ಕಲ್ಪಿಸುವ ಕೇವಡಿಯಾ- ಚೆನ್ನೈ ರೈಲು ಕಲಬುರಗಿಯಲ್ಲಿ ನಿಲುಗಡೆಯಾದಲ್ಲಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದಿದ್ದರೂ ಈ ರೈಲು ಇಲ್ಲಿ ನಿಲ್ಲದೆ ಓಡುತ್ತಲೇ ಇದೆ. ಈ ಬಗ್ಗೆ ನಮ್ಮ ಜನನಾಯಕರೂ ಮೂಕರಾಗಿದ್ದಾರೆ.

ಇದೀಗ ಚೆನ್ನೈ-ಅಹಮ್ಮದಾಬಾದ್‌ ಸರದಿ:

ಇದೀಗ ಚೆನ್ನೈ ಸೆಂಟ್ರಲ್‌ನಿಂದ ಗುಜರಾತ್‌ನ ಮತ್ತೊಂದು ಮಹಾ ನಗರ ಅಹ್ಮದಾಬಾದ್‌ಗೂ ರೈಲು ಓಡಿಸಲಾಗುತ್ತಿದೆ. ಈ ರೈಲು ಸಹ ಕಲಬುರಗಿಯ ಮೂಲಕವೇ ಸಾಗುತ್ತಿದ್ದರೂ ಕಲಬುರಗಿಯಲ್ಲಿ ನಿಲ್ಲೋದಿಲ್ಲ! ಹೇಗಿದೆ ನಮ್ಮ ದುರಾದೃಷ್ಟಎಂಬುದನ್ನ ನೀವೇ ಊಹಿಸಬಹುದಾಗಿದೆ. ಆಂಧ್ರದ ಆದೋನಿ, ತಾಡಪತ್ರಿ, ಮಂತ್ರಾಲಮ್‌ ರೋಡ್‌ ಇಲ್ಲೆಲ್ಲಾ ಈ ರೈಲು ನಿಲ್ಲುತ್ತದೆ, ಆದರೆ ಕಲಬುರಗಿಯಲ್ಲಿ ನಿಲ್ಲದೆ ಓಡುತ್ತದೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿದಿಯೆ ಎನ್ನುತ್ತಾರೆ ರೇಲ್ವೆ ಬಳಕೆದಾರ ಇಂಜಿನಿಯರ್‌ ಸುನೀಲ್‌ ಕುಲಕರ್ಣಿ. ರೈಲ್ವೆ ಸವಲತ್ತು ನಮಗೆ ದೊರಕುತ್ತಿಲ್ಲ, ಈ ಬಗ್ಗೆ ಸಂಸದರೂ ಸೇರಿದಂತೆ ಯಾರೂ ಧ್ವನಿ ಎತ್ತುತ್ತಿಲ್ಲ. ನಮ್ಮ ದುರ್ದೈವ ಎಂದು ಸುನೀಲ್‌ ಇಂದಿನ ದುರವಸ್ಥೆಗೆ ಹಳಹಳಿಸುತ್ತಿದ್ದಾರೆ. ಅನೇಕ ಮಹತ್ವದ ನಗರಗಳಿಗೆ, ಸ್ಥಳಗಳಿಗೆ ಸಂಪರ್ಕ ಕಲ್ಪಿಸುವಂತಹ ರೈಲುಗಳು ಕಲಬುರಗಿ ಮಾರ್ಗವಾಗಿಯೇ ಓಡುತ್ತಿದ್ದರೂ ಕಲಬುರಗಿಯಲ್ಲಿ ನಿಲ್ಲೋದಿಲ್ಲ. ಹೀಗಾಗಿ ಕಲಬುರಗಿ ಮಂದಿ ರೈಲುಗಳು ಓಡೋದನ್ನ ನೋಡಿಯೇ ಆನಂದ ಪಡುವಂತಾಗಿದೆ.

ಕಲಬುರಗಿ ಅಂದ್ರೆ ಕಾಸಿನ ಕಿಮ್ಮತ್ತಿಲ್ಲ ರೇಲ್ವೆ ಮಂದಿಗೆ!

2013ರಲ್ಲಿ ಮಂಜೂರಾದ ರೇಲ್ವೆ ವಿಭಾಗೀಯ ಕಚೇರಿಯೇ 8 ವರ್ಷ ಉರುಳಿದರೂ ಕಲಬುರಗಿಗೆ ಬಂದಿಲ್ಲ, ಕಲಬುರಗಿ ಪಿಟ್‌ ಲೈನ್‌ ಬಳಸಿ ಬೆಂಗಳೂರಿಗೆ ಹೊಸ ರೈಲು ಓಡಿಸಿರಿ ಅಥವಾ ಸೊಲ್ಲಾಪುರದಿಂದ ಓಡುವ ಯಶವಂತಪುರ- ಹಾಸನ್‌ ರೈಲನ್ನೇ ಕಲಬುರಗಿಯಿಂದಲೇ ಉಗಮಗೊಳಿಸಿರಿ ಎಂಬ ಬೇಡಿಕೆ ಇದ್ದರೂ ಈ ಬೇಡಿಕೆಯೂ ದಶಕದಿಂದ ಕೊಳೆಯುತ್ತಲೇ ಇದೆ. ಹೀಗೆ ರೇಲ್ವೆ ಸಂಬಂಧಿ ಹಲವಾರು ಮಹತ್ವದ ಬೇಡಿಕೆಗಳು ಇಲ್ಲಿನ ಜನ ಕೇಳುತ್ತಿದ್ದರೂ ಇಲ್ಲಿನ ಸಂಸದರು, ಶಾಸಕರು, ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ ತರುವ, ಈ ಭಾಗದ ಜನರ ರೇಲ್ವೆ ಸವಲತ್ತುಗಳಿಗೆ ಪೋಷಿಸುವ, ನೀರು ಎರೆಯುವ ಕೆಲಸವನ್ನು ಮಾಡುತ್ತಿಲ್ಲ. ಹೀಗಾಗಿ ಕಲಬುರಗಿ ಭಾಗದಲ್ಲಿ ರೇಲ್ವೆ ಲೈನ್‌ ತುಂಬ ಮಹತ್ವದ್ದಾಗಿದ್ದರೂ ಅಲ್ಲಿ ಓಡುವ ಒಂದೂ ರೈಲು ಕಲಬುಗಿಯಲ್ಲಿ ನಿಲುಗಡೆ ಸಾಧಿಸದೆ ಹಾಗೇ ಓಡುತ್ತಲೇ ಇವೆ. ಕಲಬುರಗಿ ಮಂದಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿವೆ.
 

click me!