10 ಎಕರೆ ಜಮೀನು ಖರೀದಿಸಿ ನೀಡುತ್ತೇನೆ ಇಲ್ಲಿ ಬಂದು ಮಂದಿರ ನಿರ್ಮಾಣ ಮಾಡಿ ಶಾಸಕರೋರ್ವರು ಮಾಜಿ ಸಿಎಂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ.
ಗುಬ್ಬಿ (ಫೆ.25): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಮಂದಿರ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ತುರುವೇಕೆರೆಯಲ್ಲಿ ನಿರ್ಮಿಸುವುದಾದರೆ 10 ಎಕರೆ ಜಮೀನು ಖರೀದಿಸಿ ಅವರಿಗೆ ಕೊಡುತ್ತೇನೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಆಹ್ವಾನ ನೀಡಿದ್ದಾರೆ.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಮತ್ತಿಕೆರೆ ಮತ್ತು ಸಿ.ಕೊಡಗೀಹಳ್ಳಿ ಗ್ರಾಮದಲ್ಲಿ 1.75 ಕೋಟಿ ರು. ವಿವಿಧ ಯೋಜನೆಯ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬಿಜೆಪಿಗೆ ಒಲಿದ ಪಟ್ಟ : ಅಲ್ಲಿ ಕನಸು ಭಗ್ನವಾಗಿ ಇಲ್ಲಿ ಫಲಿಸಿದ ತಂತ್ರ ..
ಸಿದ್ದರಾಮಯ್ಯ ಅವರು ತಮ್ಮೂರಿನಲ್ಲಿ ರಾಮಮಂದಿರ ಕಟ್ಟುವುದಾಗಿ ಹೇಳಿಕೊಂಡಿದ್ದರು. ಅವರಲ್ಲಿ ಹಿಂದುತ್ವ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಅವರ ಗ್ರಾಮದಲ್ಲಿ ಸಾಧ್ಯವಾಗದಿದ್ದರೆ ತುರುವೇಕೆರೆಗೆ ಬಂದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿ ಸ್ಥಳವಾಕಾಶ ನೀಡುತ್ತೇವೆ. ಇಲ್ಲಿಗೆ ಬಂದು ಮಂದಿರ ಕಟ್ಟಲಿ ಎಂದು ಟಾಂಗ್ ನೀಡಿದರು.
ಈ ಬಾರಿಯ ಬಜೆಟ್‌ನಲ್ಲಿ ತುರುವೇಕೆರೆ ಕ್ಷೇತ್ರಕ್ಕೆ ತೆಂಗು ಪಾರ್ಕ್ ನೀಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ತುರುವೇಕೆರೆ ಭಾಗದಲ್ಲಿ ಮೂವತ್ತು ಎಕರೆಯಷ್ಟುಜಾಗವನ್ನು ಎಚ್‌ಎಎಲ್ ಘಟಕದ ಹಿಂಬದಿಯಲ್ಲೇ ತುರುವೇಕೆರೆ ಕ್ಷೇತ್ರದ ಗಡಿಭಾಗದಲ್ಲಿ 30 ಎಕರೆ ಪ್ರದೇಶ ಒದಗಿಸಲು ಒಪ್ಪಿದ್ದೇವೆ. ಈ ಉದ್ದಿಮೆಯಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಹಿಂಬದಿಯ ಕೊಪ್ಪ ರಸ್ತೆಗೆ 4.5 ಕೋಟಿ ರು. ಮಂಜೂರು ಮಾಡಲಾಗಿದೆ. ಜತೆಗೆ ಹರುಳುಗೆರೆ ಸೀಗೇಹಳ್ಳಿ ಸಂಪರ್ಕ ರಸ್ತೆಗೆ 60 ಲಕ್ಷ ರು.ನೀಡಲಾಗಿದೆ. ತುರುವೇಕೆರೆ ಕ್ಷೇತ್ರದಲ್ಲಿ 98 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿ ಹಣ ಮಂಜೂರು ಮಾಡಲು ಸಮ್ಮತಿ ನೀಡಿದ್ದಾರೆ. ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿಯಲ್ಲಿ ಬಜೆಟ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಆದ್ಯತೆ ನೀಡಲು ಮನವಿ ಮಾಡಿದ್ದೇವೆ ಎಂದರು.
ಮತ್ತಿಕೆರೆ ಗ್ರಾಮದಲ್ಲಿ 50 ಲಕ್ಷ ರು. ಕೆಲಸ ಮಾಡಿದ್ದಲ್ಲಿ ಈ ಗ್ರಾಮದ ಬಹುತೇಕ ಅಭಿವೃದ್ದಿ ಕೆಲಸ ಪೂರ್ಣಗೊಳ್ಳಲಿದೆ. ಈ ಜತೆಗೆ ವಿಶೇಷ ಅನುದಾನವನ್ನು ಕಾವೇರಿ ಜಲಾನಯನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. 50 ಲಕ್ಷ ರು. ಸಿ.ಕೊಡಗೀಹಳ್ಳಿ ರಸ್ತೆಗೆ ಅಭಿವೃದ್ದಿಯಾಗಲಿದೆ ಎಂದರು.
ಸಿ.ಎಸ್.ಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು, ಗ್ರಾಪಂ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಮಂಜುಳಾ ರಘು, ಮುಖಂಡರಾದ ದಯಾನಂದ್, ಕುಮಾರ್ ಇತರರು ಇದ್ದರು.