ಅಭಿವೃದ್ಧಿ ಮರೆತ ಬಿಜೆಪಿ ಸರ್ಕಾರ| ಮೋದಿ ದೇಶದ ಜನತೆಗೆ ನೀಡಿದ ಆಶ್ವಾಸನೆ ಈಡೇರಿಸಲು ಸಂಪೂರ್ಣವಾಗಿ ವಿಫಲ| ಬಿಜೆಪಿ ಸರ್ಕಾರ ಕೊರೋನಾ ನೆಪ ಹೇಳಿ ಜನರಿಗೆ ಮೋಸ ಮಾಡುತ್ತಿದೆ| ಪ್ರಧಾನಿ ಹಾಗೂ ಬಿಎಸ್‌ವೈ ಜನಪರ ಯೋಜನೆಗಳನ್ನು ಜನರ ಬಾಗಿಲಿಗೆ ತಲುಪಿಸುವಲ್ಲಿ ವಿಫಲ|
ಕೊಪ್ಪಳ(ಫೆ.25): ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂಪೂರ್ಣ ಮೈಮರೆತಿದೆ. ಅಭಿವೃದ್ಧಿಯತ್ತ ಚಿತ್ತ ಹರಿಸುತ್ತಿಲ್ಲ. ಕೊರೋನಾ ನೆಪ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದ್ದಾರೆ.
ತಾಲೂಕಿನ ಬಂಡಿಹರ್ಲಾಪುರ ಜಿಪಂ ವ್ಯಾಪ್ತಿಯ ಗ್ರಾಮಗಳಾದ ಅಗಳಕೇರಾ, ಬಂಡಿ ಹರ್ಲಾಪುರ, ಹಳೇ ಬಂಡಿಹರ್ಲಾಪುರ, ಶಿವಪುರ, ಬಸಾಪುರ, ನಾರಾಯಣ ಪೇಟೆ ಹಾಗೂ ಅಯೋಧ್ಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಆಶ್ವಾಸನೆ ಈಡೇರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ದಿನನಿತ್ಯ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬಡ ಜನ, ರೈತರು, ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿ ಹಾಗೂ ಬಿಎಸ್‌ವೈ ಜನಪರ ಯೋಜನೆಗಳನ್ನು ಜನರ ಬಾಗಿಲಿಗೆ ತಲುಪಿಸುವಲ್ಲಿ ವಿಫಲವಾಗಿದ್ದಾರೆ. ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆದ್ಯತೆ ನೀಡದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ದೂರಿದರು.
ಸರ್ಕಾರದ ಯಡವಟ್ಟಿನಿಂದ ಸಿಗದ ಬಸ್ ಪಾಸ್: ಸಂಕಷ್ಟದಲ್ಲಿ ವಿದ್ಯಾರ್ಥಿಗಳು..!
ರಾಜ್ಯ ಸರ್ಕಾರ ಕೋವಿಡ್-19ಗೆ 5 ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಳುತ್ತಿದೆ ಹೊರತು ಲೆಕ್ಕ ನೀಡುತ್ತಿಲ್ಲ. ಕೇಂದ್ರ ಹಣಕಾಸು ಸಚಿವರು 20 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅದನ್ನು ಯಾವ ಇಲಾಖೆಗೆ ಬಳಸಿದ್ದಾರೆಂದು ಹೇಳುತ್ತಿಲ್ಲ. ಕಲ್ಯಾಣ ಕರ್ನಾಟಕದ ಶಾಸಕರ ಪ್ರದೇಶಾಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಸಹ ಸ್ಥಗಿತಗೊಳಿಸಿದೆ. ಇದರಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ದೇಶವನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿರುವ ಪ್ರಧಾನಿ ನಡೆ ನಿಜಕ್ಕೂ ದೇಶಕ್ಕೆ ಮಾರಕವಾಗಲಿದೆ ಎಂದರು.
ತಾಪಂ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಪಂ ಅಧ್ಯಕ್ಷ ಚನ್ನಕೃಷ್ಣ ಗೊಲ್ಲರ, ಗ್ರಾಪಂ ಅಧ್ಯಕ್ಷ ರೇಖಾ ಬಸವರಾಜ, ಮಾಜಿ ಕೆಎಂಎಫ್ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ನಗರಸಭೆ ಸದಸ್ಯ ಅಕ್ಬರ್‌ಪಾಷ ಪಲ್ಟನ್, ವೆಂಕಟೇಶ ಕಂಪಸಾಗರ, ಕೃಷ್ಣರೆಡ್ಡಿ ಗಲಿಬಿ, ವಾಣಿಜ್ಯೋದ್ಯಮಿ ಚಂದ್ರಶೇಖರ, ದೇವಣ್ಣ ಮ್ಯಾಕಳ್ಳಿ, ವೆಂಕಟೇಶ ಅಗಳಕೇರಾ, ಅಬ್ಬುಗಾಲೆಪ್ಪ, ಯಮನೂರಪ್ಪ, ರೇಣುಕಮ್ಮ ಕಟಗಿ, ಟಿಡಿಬಿ ವೆಂಕಟೇಶ, ನಾಗರಾಜ ಪಟುವಾರಿ, ಮೊಹಮ್ಮದ್ ಸಾಬ, ಬಿಇಒ ಉಮಾದೇವಿ ಸೊನ್ನದ ಪಾಲ್ಗೊಂಡಿದ್ದರು.