ವಿಜೃಂಭಣೆಯಿಂದ ಜರುಗಿದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ| ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾದ ಮಾರುತೇಶ್ವರ ದೇವಸ್ಥಾನ| ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದ ಸಹಸ್ರಾರು ಭಕ್ತರು|
ಯಲಬುರ್ಗಾ(ಫೆ.17):ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ಸಹಸ್ರಾರು ಭಕ್ತರ ನಡುವೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಶ್ರೀ ಮಾರುತೇಶ್ವರನಿಗೆ ವಿಶೇಷ ಧಾರ್ಮಿಕ ಪೂಜೆ ನೆರವೇರಿತು. ಹುಲಿಹೈದರದ ತಿರುಪತಿ ಆಚಾರ್ಯ ರಾಜಪುರೋಹಿತರಿಂದ ರಥಾಂಗಹೋಮ ನಡೆಯಿತು. ಸಹಸ್ರಾರು ಭಕ್ತರು ಬೇಡಿಕೊಂಡ ಹರಕೆ, ದೀಡ್ ನಮಸ್ಕಾರ ಹಾಕಿ ಸೇವೆ ಸಲ್ಲಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಡೆ ನೈವೇದ್ಯ, ಕಾಯಿ ಕರ್ಪೂರ ಸೇವೆ ಮಾಡಿದರು. ಆಂಜನೇಯನ ದರ್ಶನ ಪಡೆದು ಪುನೀತರಾದರು. ರಥೋತ್ಸವಕ್ಕೂ ಮುಂಚೆ ಗೊಲ್ಲರ ಸಮುದಾಯದವರು ಹಾಲು ಓಕುಳಿ ಆಡಿದರು. ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಕಡೆಯಿಂದ ಭಕ್ತರು ಆಗಮಿಸಿ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ನಂತರ ಶ್ರದ್ಧಾ ಭಕ್ತಿಯಿಂದ ರಥೋತ್ಸವ ಜರುಗಿತು. ಜಾತ್ರಾ ನಿಮಿತ್ತ ಕೊಪ್ಪಳ, ಕುಷ್ಟಗಿ, ಗಂಗಾವತಿ, ಯಲಬುರ್ಗಾ ಸೇರಿದಂತೆ ಪುಟಗಮರಿ, ಗಾಣದಾಳ, ಸೂಳಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ದಾಸೋಹಕ್ಕೆ ವಿವಿಧ ದವಸ ಧಾನ್ಯ ಅರ್ಪಿಸಿದರು.