ಬ್ಯಾಡಗಿ: ನಟ ದೇವರಾಜ ಕುಟುಂಬದಿಂದ ತಡಸ ಗ್ರಾಮದ ಸರ್ಕಾರಿ ಶಾಲೆ ದತ್ತು

By Kannadaprabha News  |  First Published Feb 17, 2020, 9:25 AM IST

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಡಸ ಶಾಲೆಗೆ ದೇವರಾಜ ಕುಟುಂಬ ಭೇಟಿ| ಶಾಲಾ ಮಕ್ಕಳಿಗೆ ನೋಟ್‌ಬುಕ್‌, ಕುಡಿಯುವ ನೀರಿನ ಲೋಟ ವಿತರಣೆ|ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿರುವ ಮನಸ್ಥಿತಿ ಬದಲಾಗಬೇಕು| ಅಂದಾಗ ಮಾತ್ರ ಶಾಲೆಗಳು ಉಳಿಯಲು ಸಾಧ್ಯ|


ಬ್ಯಾಡಗಿ(ಫೆ.17): ಸರ್ಕಾರಿ ಶಾಲೆ ಹಾಗೂ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಚಿತ್ರ ನಟರ ಸಾಲಿಗೆ ಇದೀಗ ನಟ ದೇವರಾಜ ಕುಟುಂಬ ಸೇರ್ಪಡೆಯಾಗಿದೆ.

ಈಗಾಗಲೇ ನಟ ಯಶ್‌ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ ಸಫಲರಾಗಿದ್ದರೆ, ನಟಿ ಪ್ರಣೀತಾ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇನ್ನೂ ಹಲವು ಸಂಘಟನೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸುಣ್ಣ ಬಣ್ಣ ಬಳಿದು ಆಧುನಿಕ ಸ್ಪರ್ಶ ನೀಡುತ್ತಿವೆ. ಇದರೊಂದಿಗೆ ನಟ ದೇವರಾಜ ಪುತ್ರ ಪ್ರಜ್ವಲ್‌ ಕೂಡ ಬ್ಯಾಡಗಿ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದಾರೆ. ಇದರ ಅಂಗವಾಗಿ ಶನಿವಾರ ಕುಟುಂಬ ಸಮೇತ ಶಾಲೆಗೆ ಭೇಟಿ ನೀಡಿದ ದೇವರಾಜ್‌, ಪ್ರಜ್ವಲ್‌ ದೇವರಾಜ್‌, ಪ್ರಣವ ದೇವರಾಜ್‌, ಚಂದ್ರಕಲಾ ದೇವರಾಜ್‌ ಮಕ್ಕಳಿಗೆ ನೋಟ್‌ಬುಕ್‌ ಹಾಗೂ ಕುಡಿಯುವ ನೀರಿನ ಲೋಟ ವಿತರಿಸಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಮಾತನಾಡಿದ ನಟ ಪ್ರಜ್ವಲ್‌ ದೇವರಾಜ್‌, ಸರ್ಕಾರಿ ಶಾಲೆಗಳ ರಕ್ಷಣೆ ಹಾಗೂ ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ. ಖಾಸಗಿ ಶಾಲೆಯ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೂ ಸಿಗಬೇಕು. ಆದರೆ, ಜನರು ಮನಸ್ಸು ಮಾಡದ ಕಾರಣ ಸರ್ಕಾರಿ ಶಾಲೆಗಳ ದಾಖಲಾತಿ ಕುಂಠಿತವಾಗುತ್ತಿವೆ. ಇದನ್ನು ಮನಗಂಡು ಶಾಲೆ ದತ್ತು ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ಅರಾಮಿದಿರೇನ್ರಪ್ಪ ಎಂದು ಉತ್ತರ ಕರ್ನಾಟಕ ಮಾದರಿಯಲ್ಲಿ ಮಾತು ಆರಂಭಿಸಿದ ನಟ ದೇವರಾಜ್‌, ಪ್ರಜ್ವಲ್‌ ಸ್ನೇಹಿತ ಅಭಿಲಾಷ್‌ ಬೆಟಗೇರಿ ಜತೆಗೂಡಿ ಶಾಲೆ ದತ್ತು ಪಡೆದಿದ್ದೇನೆ ಎಂದು ಹೇಳಿದಾಗ ಸಂತೋಷವಾಯಿತು. ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದು, ಅದರಲ್ಲಿ ಮುಂದುವರಿ ಎಂದು ಹಾರೈಸಿದ್ದೆ. ಅವನಿಗೆ ಸಹಕಾರವೂ ಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಪ್ರಣವ ದೇವರಾಜ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿರುವ ಮನಸ್ಥಿತಿ ಬದಲಾಗಬೇಕು. ಅಂದಾಗ ಮಾತ್ರ ಶಾಲೆಗಳು ಉಳಿಯಲು ಸಾಧ್ಯ. ಕೈಲಾದಷ್ಟುಸಹಾಯ ಮಾಡುವ ಮೂಲಕ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಈ ವೇಳೆ ಅಭಿಲಾಷ ಬೆಟಗೇರಿ, ಶೈಲಾ ಬೆಟಗೇರಿ, ತಾಪಂ ಆಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸಮನ್ವ ಯಾಧಿಕಾರಿ ಎಂ.ಎಫ್‌. ಬಾರ್ಕಿ ಗ್ರಾಪಂ ಅಧ್ಯಕ್ಷೆ, ಸದಸ್ಯರು ಉಪಸ್ಥಿತರಿದ್ದರು.
 

click me!