Bengaluru: ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ!

Kannadaprabha News   | Asianet News
Published : Feb 10, 2022, 03:45 AM IST
Bengaluru: ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ!

ಸಾರಾಂಶ

ನಗರದಲ್ಲಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ವಾಹನ ಟೋಯಿಂಗ್‌ ಸ್ಥಗಿತಗೊಂಡು ವಾರ ಕಳೆದ ಬೆನ್ನಲ್ಲೇ, ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗ ತೊಡಗಿದೆ. 

ಬೆಂಗಳೂರು (ಫೆ.10): ನಗರದಲ್ಲಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ (No Parking Zone) ನಿಲುಗಡೆ ಮಾಡುತ್ತಿದ್ದ ವಾಹನ ಟೋಯಿಂಗ್‌ ಸ್ಥಗಿತಗೊಂಡು ವಾರ ಕಳೆದ ಬೆನ್ನಲ್ಲೇ, ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗ ತೊಡಗಿದೆ. ಆದರೆ, ಸದ್ದಿಲ್ಲದೇ ವಾಹನಗಳ ಫೋಟೋ ಕ್ಲಿಕ್ಕಿಸುತ್ತಿರುವ ಪೊಲೀಸರು (Police), ಪ್ರಕರಣ ದಾಖಲಿಸುತ್ತಿದ್ದಾರೆ.

ಟೋಯಿಂಗ್‌ ಸ್ಥಗಿತಗೊಂಡ ಬೆನ್ನಲ್ಲೇ ನಗರದ ಬಸವನಗುಡಿ, ವಿಶ್ವೇಶ್ವರಪುರ, ಹನುಮಂತನಗರ, ಜೆ.ಸಿ.ರಸ್ತೆ, ಲಾಲ್‌ಬಾಗ್‌ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೇ ಲೇಔಟ್‌, ಇಂದಿರಾನಗರ, ಅಶೋಕನಗರ ಸೇರಿದಂತೆ ನಗರದ ಹಲವೆಡೆ ನೋ ಪಾರ್ಕಿಂಗ್‌ ಸ್ಥಳಗಳಲ್ಲೇ ಸವಾರರು ವಾಹನ ನಿಲುಗಡೆ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯಕ್ಕೆ ಟೋಯಿಂಗ್‌ ಸ್ಥಗಿತವಾಗಿರುವುದರಿಂದ ವಾಹನ ನಿಲುಗಡೆ ಮಾಡಿದರೂ ತೊಂದರೆ ಇಲ್ಲ ಎಂಬ ಭಾವನೆಯಲ್ಲಿ ಸವಾರರು ನಿಲುಗಡೆ ಮಾಡುತ್ತಿದ್ದಾರೆ.

ಫೋಟೋ ಸಮೇತ ಕೇಸ್‌: ವಾಹನಗಳ ಟೋಯಿಂಗ್‌ ವಿಚಾರದಲ್ಲಿ ಸಂಚಾರ ಪೊಲೀಸರು, ಟೋಯಿಂಗ್‌ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಜಟಾಪಟಿ ನಡೆದು ರಾಜ್ಯದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆ ಪ್ರವೇಶಿಸಿ ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್‌ ಸ್ಥಗಿತಗೊಳಿಸಲು ಸೂಚಿಸಿದ್ದರು. ಇದೀಗ ನಗರದಲ್ಲಿ ಟೋಯಿಂಗ್‌ ಸ್ಥಗಿತಗೊಂಡು ವಾರ ಕಳೆದಿದೆ. ಇದರ ಬೆನ್ನಲ್ಲೇ ಪೊಲೀಸರು ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳ ಫೋಟೋ ತೆಗೆದು ಕೇಸ್‌ ಹಾಕುತ್ತಿದ್ದಾರೆ.

Bengaluru Traffic Police: ಕಳಪೆ ಹೆಲ್ಮೆಟ್‌ ಧರಿಸಿದ್ದವನಿಂದ 100 ಪಡೆದ ಪೇದೆ ತಲೆದಂಡ

ಈ ಹಿಂದೆ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಸಂಚಾರ ಪೊಲೀಸರು ಟೋಯಿಂಗ್‌ ವಾಹನಗಳಲ್ಲೇ ಎಳೆದೊಯ್ದು ಕೇಸ್‌ ಹಾಕುತ್ತಿದ್ದರು. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಕೇಸ್‌ ಹಾಕುವುದು ಹೊಸದೇನು ಅಲ್ಲ. ಆದರೆ, ಟೋಯಿಂಗ್‌ ಸ್ಥಗಿತವಾಗಿರುವುದರಿಂದ ಪೋಟೋ ತೆಗೆದು ಕೇಸ್‌ ಹಾಕುವುದನ್ನು ಸಂಚಾರ ಪೊಲೀಸರು ಚುರುಕುಗೊಳಿಸಿದ್ದಾರೆ.

ಮತ್ತೊಂದೆಡೆ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಮೆಜೆಸ್ಟಿಕ್‌ ಪ್ರದೇಶ ಸೇರಿದಂತೆ ವಾಣಿಜ್ಯ ಚಟುವಟಿಕೆಗಳ ಪ್ರದೇಶಗಳಲ್ಲಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಲು ಸವಾರರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ನಿಲುಗಡೆ ಮಾಡಿದರೂ ಕೆಲವೇ ನಿಮಿಷಗಳಲ್ಲಿ ವಾಹನ ತೆಗೆದುಕೊಂಡು ಹೋಗುತ್ತಾರೆ. ಈ ಪ್ರದೇಶಗಳಲ್ಲಿ ಸಂಚಾರ ಪೊಲೀಸರು ಸದಾ ಗಸ್ತಿನಲ್ಲಿರುವುದರಿಂದ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಫೋಟೋ ತೆಗೆದುಕೊಂಡು ಕೇಸ್‌ ದಾಖಲಿಸುತ್ತಿದ್ದಾರೆ.

ಸವಾರರಿಗೆ ಫೋಟೊ ವಿಚಾರ ಗೊತ್ತು: ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ಸವಾರರು ವಾಹನ ನಿಲುಗಡೆ ಮಾಡಲು ಹಿಂದೇಟು ಹಾಕುತ್ತಾರೆ. ಏಕೆಂದರೆ, ಪೊಲೀಸರು ಅವರ ಪಾಡಿಗೆ ಒಂದು ಕಡೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಹೋಗುತ್ತಾರೆ. ಈ ರಸ್ತೆಯಲ್ಲಿ ಓಡಾಡುವ ಸವಾರರಿಗೆ ಈ ವಿಚಾರ ಗೊತ್ತಾಗಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಮಾಡುವುದಿಲ್ಲ. ಒಂದು ವೇಳೆ ನಿಲುಗಡೆ ಮಾಡಿದರೂ ವೇಗ ತನ್ನ ಕೆಲಸ ಮುಗಿಸಿಕೊಂಡು ಹೊರಡುತ್ತಾರೆ. ಬಹುತೇಕರು ಪಾರ್ಕಿಂಗ್‌ ಸ್ಥಳಗಳು ಅಥವಾ ಅಡ್ಡರಸ್ತೆಯ ಖಾಲಿ ಜಾಗಗಳಲ್ಲಿ ವಾಹನ ನಿಲುಗಡೆ ಮಾಡುತ್ತಾರೆ ಎಂದು ಬಸವನಗುಡಿ ಗಾಂಧಿ ಬಜಾರ್‌ನ ವ್ಯಾಪಾರಿ ಪ್ರತಾಪ್‌ ಹೇಳಿದರು.

Bengaluru: ಅಮಾನತು ಮಾಡದಂತೆ ಕೋರ್ಟ್‌ ಕೈಮುಗಿದ ಬಿಬಿಎಂಪಿ ಅಧಿಕಾರಿ..!

ಸಂಚಾರ ದಟ್ಟಣೆ ಹೆಚ್ಚಳ: ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸುಗುಮ ಸಂಚಾರಕ್ಕೆ ತೊಂದರೆಯಾಗುತ್ತದೆ. ಸದ್ಯಕ್ಕೆ ಟೋಯಿಂಗ್‌ ಸ್ಥಗಿತಗೊಂಡಿರುವುದರಿಂದ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳ ಫೋಟೋ ತೆಗೆದುಕೊಂಡು ಕೇಸ್‌ ಹಾಕಲಾಗುತ್ತಿದೆ. ಶೀಘ್ರದಲ್ಲೇ ನೂತನ ಟೋಯಿಂಗ್‌ ನೀತಿ ಜಾರಿಗೆ ಬರುವ ಸಾಧ್ಯತೆಯಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪ್ರಸ್ತುತ ಮೊಬೈಲ್‌ನಲ್ಲಿ ಫೋಟೋ ತೆಗೆದು ಕೇಸ್‌ ಹಾಕುತ್ತಿದ್ದೇವೆ ಎಂದು ಸಂಚಾರ ವಿಭಾಗದ ಕಾನ್ಸ್‌ಟೇಬಲ್‌ ಒಬ್ಬರು ತಿಳಿಸಿದರು.

PREV
Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!