
ಬೆಂಗಳೂರು (ಫೆ.10): ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯ ನಿರತ ಪೊಲೀಸ್ (Police) ಸಿಬ್ಬಂದಿಗೆ ಅಳವಡಿಸಲು ಖರೀದಿಸಿರುವ ‘ಬಾಡಿ ವೋರ್ನ್ ಕ್ಯಾಮೆರಾ’ಗಳನ್ನು (Body Cameras) ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ (High Court) ನಿರ್ದೇಶಿಸಿದೆ. ನಗರದ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಒಟ್ಟು 2,680 ಬಾಡಿ ವೋರ್ನ್ ಕ್ಯಾಮೆರಾಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲಾಗಿದ್ದು, 3 ಪ್ರತ್ಯೇಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ 1,097 ಕ್ಯಾಮೆರಾಗಳನ್ನು ಕಂಪನಿಗಳು ಪೂರೈಸಿವೆ. ಉಳಿದ ಕ್ಯಾಮೆರಾಗಳನ್ನು ಖರೀದಿಸಿದ ನಂತರ, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಅವುಗಳ ಬಳಕೆ ಮಾಡಲಾಗುವುದು ಎಂದು ತಿಳಿಸಿ, ಕಾರ್ಯಾದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಹಿಂದೆಯೂ ಸರ್ಕಾರ 75 ಲಕ್ಷ ರು.ವೆಚ್ಚ ಮಾಡಿ 50 ಬಾಡಿ ವೋರ್ನ್ ಕ್ಯಾಮೆರಾಗಳನ್ನು ಖರೀದಿಸಿತ್ತು. ಆದರೆ, ಅವುಗಳನ್ನು ಬಳಕೆ ಮಾಡಿರಲಿಲ್ಲ. ಆದ್ದರಿಂದ, ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿ, ಅವುಗಳನ್ನು ಬಳಕೆ ಮಾಡಲು ಹಾಗೂ ಹೆಚ್ಚುವರಿ ಕ್ಯಾಮೆರಾಗಳನ್ನು ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಲಾಗಿತ್ತು. ಈಗ ಖರೀದಿಸುವ ಕ್ಯಾಮೆರಾಗಳನ್ನೂ ಹಿಂದಿನಂತೆಯೇ ಬಳಕೆ ಮಾಡದಂತೆ ಇಡಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಬೇಕು ಎಂದು ಕೋರಿದರು.
Hijab row : ಸಂವಿಧಾನ ಹೇಳಿದಂತೆ ನಡೆಯುತ್ತೇವೆ, ನಮಗೆ ಸಂವಿಧಾನವೇ ಭಗವದ್ಗೀತೆ ಎಂದ ಹೈಕೋರ್ಟ್!
ವಾದ ಆಲಿಸಿದ ಪೀಠ, ಸರ್ಕಾರ ಈಗಾಗಲೇ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. ಸ್ಮಾರ್ಟ್ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ ಜಾರಿಗಾಗಿ ಆ ಕ್ಯಾಮೆರಾಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಕರ್ತವ್ಯ ನಿರ್ವಹಣೆ ವೇಳೆ, ಕ್ಯಾಮೆರಾಗಳನ್ನು ಧರಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಹೈಕೋರ್ಟ್ ನ್ಯಾಯಪೀಠಗಳ ಕಲಾಪ ಯೂಟ್ಯೂಬ್‌ನಲ್ಲಿ ನೇರಪ್ರಸಾರ: ಕಲಾಪ ನೇರ ಪ್ರಸಾರ ನಿಯಮಗಳು ರಚನೆಯಾದ ಬಳಿಕ ಹೈಕೋರ್ಟ್ (High Court) ನ್ಯಾಯಪೀಠಗಳ ಕಲಾಪವನ್ನು ಮೊದಲ ಬಾರಿಗೆ ‘ಯೂಟ್ಯೂಬ್’ನಲ್ಲಿ (Youtube) ಸೋಮವಾರ ನೇರಪ್ರಸಾರ ಮಾಡಲಾಯಿತು. ಸೋಮವಾರ ಬೆಂಗಳೂರು ಹೈಕೋರ್ಟ್ ಪ್ರಧಾನ ನ್ಯಾಯಪೀಠದ ಕೋರ್ಟ್ ಹಾಲ್ ಒಂದು ಮತ್ತು ಮೂರರ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.
‘ಹೈಕೋರ್ಟ್ ಆಫ್ ಕರ್ನಾಟಕ ಅಫಿಶಿಯಲ್’ (High Court of Karnataka Official) ಎಂಬ ಚಾನಲ್‌ನಲ್ಲಿ ಈ ಕಲಾಪ ಪ್ರಸಾರವಾಯಿತು. ಈ ಚಾನಲ್‌ಗೆ 16 ಸಾವಿರ ಮಂದಿ ವೀಕ್ಷಕರಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಒಂದೂವರೆ ಗಂಟೆಯ ಕಲಾಪವನ್ನು ನೇರ ಪ್ರಸಾರ ಮಾಡಲಾಗಿದ್ದು ಸುಮಾರು 2,400 ಜನ ವೀಕ್ಷಣೆ ಮಾಡಿದ್ದಾರೆ. ಅದೇ ರೀತಿ ನ್ಯಾಯಮೂರ್ತಿ ಎಸ್.ಸುಜಾತ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಒಂದೂಕಾಲು ಗಂಟೆಗೂ ಅಧಿಕ ಸಮಯದ ಕಲಾಪವನ್ನು ಒಂದೂವರೆ ಸಾವಿರ ಜನ ವೀಕ್ಷಿಸಿದ್ದಾರೆ.
Karnataka High Court: 'ಒಮ್ಮೆ ಕೋರ್ಟ್‌ಗೆ ಹಾಜರಾಗಿ ಬಳಿಕ ಗೈರಾದರೆ ನಿರೀಕ್ಷಣಾ ಜಾಮೀನಿಲ್ಲ'
ಕೋರ್ಟ್ ಹಾಲ್ ಎರಡು ಮತ್ತು ನಾಲ್ಕರ ಕಲಾಪವನ್ನು ನೇರ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಹೈಕೋರ್ಟ್‌ನ ಕಲಬುರಗಿ ಹಾಗೂ ಧಾರವಾಡ ಪೀಠದ ಕಲಾಪವನ್ನು ನೇರ ಪ್ರಸಾರ ಮಾಡಿಲ್ಲ ಎಂದು ಹೈಕೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.