87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಹೊಸತನಗಳು: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Dec 19, 2024, 5:19 PM IST

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮೂರನೇ ಬಾರಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿ ಇತಿಹಾಸ ಸೃಷ್ಟಿಸಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು. 


ಮಂಡ್ಯ (ಡಿ.19): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮೂರನೇ ಬಾರಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿ ಇತಿಹಾಸ ಸೃಷ್ಟಿಸಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ವೇದಿಕೆಗಳ ಸಿದ್ಧತೆ ಕಾರ್ಯಗಳ ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, 20, 21, 22 ಮೂರು ದಿನಗಳ ಸಮ್ಮೇಳನಕ್ಕೆ 70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ, 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

55 ವಸ್ತುಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆ , 450 ಪುಸ್ತಕ ಮಳಿಗೆಗಳು ಕೂಡ ತಲೆಎತ್ತಿವೆ. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್‌ಗಳನ್ನು ತೆರೆಯಲಾಗಿದೆ. ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ. ನೀರಿನ ಪರೀಕ್ಷೆ, ಆಹಾರದ ಗುಣಮಟ್ಟ ಪರೀಕ್ಷೆ ಮಾಡಿ ವರದಿ ಪಡೆಯಲಾಗುತ್ತದೆ ಎಂದು ಹೇಳಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ 250 ಸಿಬ್ಬಂದಿಯನ್ನು ನೇಮಿಸಲಾಗಿದೆ. 150ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ. 6 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರಷ್‌, ಪೇಸ್ಟ್, ಸೋಪು, ಬೆಡ್ ಶಿಟ್ ಒಳಗೊಂಡ ಲೇದರ್ ಬ್ಯಾಗ್‌ನಲ್ಲಿ ವಸತಿ ಮತ್ತು ಸಮ್ಮೇಳನದ ಕಿಟ್ ನೀಡಲಾಗುವುದು ಎಂದರು.

Tap to resize

Latest Videos

undefined

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಸರಾ ಮಾದರಿ ‘ಪೊಲೀಸ್‌ ಬ್ಯಾಂಡ್‌’ ಮೆರುಗು

ಸಮ್ಮೇಳನಕ್ಕೆ ಆಗಮಿಸುವ 7 ತಾಲೂಕು ಕೇಂದ್ರಗಳಿಂದ 15 ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಂಡ್ಯ ನಗರದಿಂದ ಕೂಡ ಬಸ್‌ಗಳು ಸಮ್ಮೇಳನದ ಸ್ಥಳಕ್ಕೆ ಉಚಿತವಾಗಿ ಕರೆತರಲಿವೆ. ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕೂಡ ಉಚಿತ ಸಾರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಬೆಂಗಳೂರಿನಿಂದ 30 ನಿಮಿಷಕ್ಕೆ ಒಂದು ವಿಶೇಷ ಬಸ್ ಸಂಚರಿಸಲಿದೆ ಎಂದರು. ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುವುದು. ಡಿ. 20ರ ಶುಕ್ರವಾರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಸುಗ್ಗಿಕುಣಿತ, ಕೋಲಾಟ ಒಳಗೊಂಡಂತೆ ಪೂರ್ಣಕುಂಭ ಹೊತ್ತ 300 ಮಹಿಳೆಯರು ಹಾಗೂ 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆಗೆ ಮೈಸೂರು ಅರಮನೆ ರಾಜವಂಶಸ್ಥರಾದ ಶ್ರೀಮತಿ ಪ್ರಮೋದಾದೇವಿ ಅವರು ಚಾಲನೆ ನೀಡಲಿದ್ದಾರೆ ಎಂದರು.ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದವೂ ಸೇರಿದಂತೆ ‌11 ಗೋಷ್ಠಿಗಳು, 2 ಸಮಾನಾಂತರ ವೇದಿಕೆಗಳಲ್ಲಿ 20 ಗೋಷ್ಠಿಗಳು ಆಯೋಜನೆಗೊಂಡಿವೆ. ಸಮ್ಮೇಳನದ ಅಂಗವಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶೇಷ ರಥ!

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ‌ ನಾಡೋಜ ಮಹೇಶ್ ಜೋಶಿ ಮಾತನಾಡಿ, ಈ ಸಮ್ಮೇಳನದಲ್ಲಿ ಸಂಪೂರ್ಣ ತಂತ್ರಜ್ಞಾನ ಉಪಯೋಗಿಸಿ ಸಿದ್ಧತೆ ನಡೆಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಮೂರು ವೇದಿಕೆಗಳಿಗೆ ಸಮಾನ ಗೌರವ, ಘನತೆ ನೀಡಲಾಗಿದೆ. ಮೂರು ವೇದಿಕೆಗೆ ಅಷ್ಟೇ ಮಹತ್ವವಿದೆ ಎಂದರು. ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರೇ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿರುವ ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ, ಕನ್ನಡದಿಂದ ಇಟಲಿಯನ್ ಗೆ ಅನುವಾದಗೊಂಡಿರುವ ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರ ಶರಪಂಚರ ಕಾದಂಬರಿ ಸಮ್ಮೇಳನದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಿದರು.ಸುದ್ಧಿಗೋಷ್ಠಿಯಲ್ಲಿ ಸಮ್ಮೇಳನದ ವಿವಿಧ ಸಮಿತಿ ಅಧ್ಯಕ್ಷರು, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್ , ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಕ್ಕ ಸಂಸ್ಥಾಪಕ ಅಮರ್ ನಾಥ್ ಸೇರಿದಂತೆ ಹಲವರು ಇದ್ದರು.

click me!