ನಿದ್ರೆಯಲ್ಲಿದ್ದರೂ ತಾಲಿಬಾನ್‌ ಬಾಂಬ್‌ನಿಂದ ರಕ್ಷಣೆಗೆ ಬಂಕರ್‌ಗೆ ಓಡಬೇಕು!

By Kannadaprabha News  |  First Published Aug 26, 2021, 3:52 PM IST
  • ರಾತ್ರಿ ತಾಲಿಬಾನಿಗಳು ಬಾಂಬ್‌ ದಾಳಿ ನಡೆಸುತ್ತಿದ್ದರು
  • ನಿದ್ರೆಯಲ್ಲಿದ್ದರೂ ಎಚ್ಚೆತ್ತು ಓಡಿ ಹೋಗಿ ಬಂಕರ್‌ಗಳಲ್ಲಿ ರಕ್ಷಣೆ ಪಡೆಯಬೇಕಿತ್ತು
  • ತಾಲಿಬಾನ್‌ನಿಂದ ವಾಪಸಾದ ಕನ್ನಡಿಗ ವಿಜಯ್ ಕುಮಾರ್

 ಮಂಗಳೂರು (ಆ.26):  ‘ನಾನು 2 ವರ್ಷ ಕಾಲ ಆಷ್ಘಾನಿಸ್ತಾನದ ಬಾಗ್ರಾಂ, ಡಿ-ಶಿಪ್‌ ಹಾಗೂ ಶಾಂಕ್‌ ಹೆಸರಿನ ನ್ಯಾಟೋ ಕ್ಯಾಂಪ್‌ಗಳಲ್ಲಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೆ. ನಮಗೆ ಹೊರಗೆ ಹೋಗಬೇಕಾದರೆ ಮಿಲಿಟರಿ ವಾಹನದಲ್ಲೇ ಅವಕಾಶ. ಸೇನಾ ಕ್ಯಾಂಪ್‌ ವಠಾರದಲ್ಲೇ ರಾತ್ರಿ ವಾಸ್ತವ್ಯ. ಆದರೆ ಹೆಚ್ಚಿನ ದಿನಗಳಲ್ಲಿ ರಾತ್ರಿ ತಾಲಿಬಾನಿಗಳು ಬಾಂಬ್‌ ದಾಳಿ ನಡೆಸುತ್ತಿದ್ದರು. ಕೆಲವು ನಿಮಿಷಗಳ ಮೊದಲೇ ನ್ಯಾಟೋ ಪಡೆಗಳು ನಮಗೆ ಅಲರ್ಟ್‌ ನೀಡುತ್ತಿದ್ದರು. ಆಗ ನಾವು ನಿದ್ರೆಯಲ್ಲಿದ್ದರೂ ಎಚ್ಚೆತ್ತು ಓಡಿ ಹೋಗಿ ಬಂಕರ್‌ಗಳಲ್ಲಿ ರಕ್ಷಣೆ ಪಡೆಯಬೇಕಿತ್ತು. ಯಾವ ಸಂದರ್ಭದಲ್ಲಿ ಎಲ್ಲಿ ತಾಲಿಬಾನಿಗಳ ಬಾಂಬ್‌ ಬೀಳಬಹುದು ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಜೀವ ಭೀತಿಯಿಂದಲೇ ಕೆಲಸ ಮಾಡಬೇಕಾಗಿತ್ತು. ಈಗ ಅದಕ್ಕಿಂತಲೂ ಪರಿಸ್ಥಿತಿ ಹೆಚ್ಚೇನೂ ಭಿನ್ನವಾಗಿರಲಿಲ್ಲ’

ಹೀಗೆನ್ನುತ್ತಾರೆ ಮಂಗಳೂರು ಕುಲಶೇಖರ ನಿವಾಸಿ ವಿಜಯ ಕುಮಾರ್‌. ಪ್ರಸ್ತುತ ಇವರು ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. 2011 ಮತ್ತು 2012ರಲ್ಲಿ 2 ವರ್ಷ ಕಾಲ ಇವರು ಆಷ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿಯ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Latest Videos

undefined

ಐ ಲವ್ ಯು ತಾಲಿಬಾನ್: ಫೇಸ್‌ಬುಕ್‌ನಲ್ಲಿ ಉಗ್ರರ ಪರ ಪೋಸ್ಟ್‌ ಮಾಡಿದ ಜಮಖಂಡಿ ಯುವಕ

20 ಮೀಟರ್‌ಗೊಂದು ಬಂಕರ್‌: ನ್ಯಾಟೋ ಸೈನಿಕರಿಗೆ ಮಾತ್ರವಲ್ಲ ಆಷ್ಘಾನ್‌ ನಾಗರಿಕರ ಕುಂದುಕೊರತೆಗೆ ಸೈನಿಕರ ಮೂಲಕ ಸ್ಪಂದಿಸುವುದು ಆಡಳಿತ ವಿಭಾಗದಲ್ಲಿ ನಮ್ಮ ಜವಾಬ್ದಾರಿಯಾಗಿತ್ತು. ನನ್ನ ಜೊತೆ ನಾಲ್ಕೈದು ಮಂದಿ ಮಂಗಳೂರಿಗರು ಕೆಲಸ ಮಾಡುತ್ತಿದ್ದರು. ತಾಲಿಬಾನಿಗಳ ಹಠಾತ್‌ ಬಾಂಬ್‌ ದಾಳಿ ನ್ಯಾಟೋ ಬೇಸ್‌ನ ಮೇಲೇ ನಡೆಯುತ್ತಿತ್ತು. ಆದರೆ ನಾವು ಕೆಲಸ ಮಾಡುವ ಕ್ಯಾಂಪ್‌ನಲ್ಲಿ 15-20 ಮೀಟರ್‌ ಅಂತರದಲ್ಲಿ ಸಾಕಷ್ಟುಬಂಕರ್‌ಗಳು ಇರುತ್ತಿತ್ತು. ಬಾಂಬ್‌ ದಾಳಿಗೂ ಮುನ್ನವೇ ಸೈರನ್‌ ಮೊಳಗಿಸಿ ಬಂಕರ್‌ಗೆ ತೆರಳುವಂತೆ ಸೈನಿಕರು ಅಲರ್ಟ್‌ ಮಾಡುತ್ತಾರೆ. ಆ ಕೂಡಲೇ ಎಲ್ಲವನ್ನೂ ಬಿಟ್ಟು ಬಂಕರ್‌ಗೆ ಹೋಗಿ ಅವಿತುಕೊಳ್ಳುತ್ತೇವೆ. ಬಂಕರ್‌ ಹೊರಗೆ ಸತತ ಬಾಂಬ್‌ ದಾಳಿ ನಡೆದರೆ ನಾಲ್ಕೈದು ಗಂಟೆ ಕಾಲ ಹೊರಗೆ ಬರುವಂತಿಲ್ಲ. ಒಂದು ಬಂಕರ್‌ನಲ್ಲಿ ಕನಿಷ್ಠ 50 ಮಂದಿ ಇರಬಹುದು. ರಾತ್ರಿ ಮಲಗಿದಾಗ ಅಪಾಯದ ಕರೆ ಬಾರಿಸಿದರೆ, ಉಳಿದವರು ಪರಸ್ಪರ ಎಚ್ಚರಿಸಿಕೊಂಡು ಬಂಕರ್‌ಗೆ ದೌಡಾಯಿಸುತ್ತೇವೆ. ಸುತ್ತಮುತ್ತ ಗುಡ್ಡ, ಆರು ತಿಂಗಳಿಗೊಮ್ಮೆ ಹಿಮಚ್ಛಾದಿತ ಪ್ರದೇಶ ಆವೃತ್ತವಾಗಿರುವ ಸೈನಿಕರ ಕ್ಯಾಂಪಿನಲ್ಲೂ ಜೀವ ಕೈಯಲ್ಲಿ ಇರಿಸಿಕೊಂಡೇ ಕೆಲಸ ಮಾಡಬೇಕಾಗುತ್ತಿತ್ತು ಎನ್ನುತ್ತಾರೆ ಅವರು.

ಆಂಡ್ರಾಯ್ಡ್‌ ಮೊಬೈಲ್‌ ಬಳಕೆ ಇಲ್ಲ

2011ರಲ್ಲೇ ನ್ಯಾಟೋ ಕ್ಯಾಂಪ್‌ಗಳಲ್ಲಿ ಕೆಲಸ ಮಾಡಬೇಕಾದರೆ ಆಂಡ್ರಾಯ್ಡ್‌ ಮೊಬೈಲ್‌ ಬಳಕೆಗೆ ಅವಕಾಶ ಇರಲಿಲ್ಲ. ಡಾಲರ್‌ ಮಾದರಿಯ ಕಾಯಿನ್‌ ಬಳಸಿ ಊರಿಗೆ ಕರೆ ಮಾಡಬೇಕಾಗುತ್ತಿತ್ತು. ಮೊಬೈಲ್‌ ಇದ್ದರೂ ಕಚೇರಿ ಒಳಗೆ ಬಳಕೆಗೆ ಮಾತ್ರ ಇತ್ತು. ಫೇಸ್‌ಬುಕ್‌ ಕೂಡ ಬಳಸುವಂತಿರಲಿಲ್ಲ. ಕಚೇರಿಯಲ್ಲಿ ಕರೆ ಮಾಡಲು ಬೇಸಿಕ್‌ ಮೊಬೈಲ್‌ ಸೆಟ್‌ನ್ನು ಬಳಸಬೇಕಾಗುತ್ತಿತ್ತು. ಇ-ಮೇಲ್‌ ಮಾತ್ರ ಬಳಸಲು ಅವಕಾಶ ಇತ್ತು ಎನ್ನುತ್ತಾರೆ ವಿಜಯ ಕುಮಾರ್‌.

click me!