ಮಂಗಳೂರು ವಿಮಾನ ನಿಲ್ದಾಣ ಗಮನಾರ್ಹ ಸಾಧನೆ, ಬರೋಬ್ಬರಿ 3 ಚಿನ್ನದ ಪದಕ!

Published : May 02, 2026, 03:03 PM IST
mangaluru international airport

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣವು, ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಅಪ್‌ಡೇಟರ್ ಸರ್ವೀಸಸ್ ಲಿಮಿಟೆಡ್ (ಯುಡಿಎಸ್) ಸಹಯೋಗದೊಂದಿಗೆ, ಕಾರ್ಯಾಚರಣೆಯಲ್ಲಿ ಮಾನವ ದೋಷಗಳನ್ನು ಕಡಿಮೆ ಮಾಡುವ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ 'ಪೋಕಾ ಯೋಕ್' ಪರಿಹಾರಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ.

ಮಂಗಳೂರು: ಕೈಗಾರಿಕಾ ಗುಣಮಟ್ಟ ಹಾಗೂ ಪ್ರಕ್ರಿಯಾ ಸುಧಾರಣೆಗೆ ಸಂಬಂಧಿಸಿದಂತೆ ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ, ಬೆಂಗಳೂರು ಚಾಪ್ಟರ್ ಆಯೋಜಿಸಿದ್ದ ‘ಪೋಕಾ ಯೋಕ್’, ‘ಜಿಡೋಕಾ’ ಮತ್ತು ‘ಎಸ್‌ಎಂಇಡಿ’ ಕುರಿತ 9ನೇ ಸಮ್ಮೇಳನದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಮಂಗಳೂರು ವಿಮಾನ ನಿಲ್ದಾಣವು ಅಪ್‌ಡೇಟರ್ ಸರ್ವೀಸಸ್ ಲಿಮಿಟೆಡ್ (ಯುಡಿಎಸ್) ಸಂಸ್ಥೆಯೊಂದಿಗೆ ಕೈಜೋಡಿಸಿ ಈ ಸಾಧನೆಯನ್ನು ಸಾಧಿಸಿದೆ. ಈ ಸಾಧನೆ, ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಅಳವಡಿಸಿರುವ ನವೀನ ತಂತ್ರಜ್ಞಾನ ಮತ್ತು ದೋಷರಹಿತ ವಿಧಾನಗಳ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.

‘ಪೋಕಾ ಯೋಕ್’ ಪರಿಹಾರ

ಯುಡಿಎಸ್ ತಂಡದ ಸಜಿತ್ ಇ.ವಿ. ಮತ್ತು ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ, ಹೈ-ಮಾಸ್ಟ್ ನಿರ್ವಹಣೆಗೆ ಬಳಸುವ ರಿಮೋಟ್ ನಿಯಂತ್ರಿತ ಅಪಾಯ ತಡೆಗಟ್ಟುವ ಸಾಧನದ ಮೂಲಕ ‘ಪೋಕಾ ಯೋಕ್’ ಪರಿಹಾರವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ಪರಿಹಾರವು ಮಾನವ ದೋಷಗಳನ್ನು ಕಡಿಮೆ ಮಾಡಿ, ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಇನ್ನೊಂದು ಯುಡಿಎಸ್ ತಂಡ, ಕಿರಣ್ ಕುಮಾರ್ ಮತ್ತು ಮಂಜುನಾಥ ಅವರ ನೇತೃತ್ವದಲ್ಲಿ, ಪಿಎಲ್‌ಸಿ ಆಧಾರಿತ ನೀರಿನ ಮಟ್ಟದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಸ್ತುತಪಡಿಸಿತು. ಈ ವ್ಯವಸ್ಥೆ ನೀರಿನ ಬಳಕೆ ಮತ್ತು ನಿರ್ವಹಣೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಚಿನ್ನದ ಪದಕ ಪಡೆಯಲು ಕಾರಣ ಇದು

ಅದೇ ವೇಳೆ, ವಿಮಾನ ನಿಲ್ದಾಣದ ಇಂಜಿನಿಯರಿಂಗ್ ಮತ್ತು ನಿರ್ವಹಣಾ (E&M) ವಿಭಾಗದ ಇಪ್ಸಿತಾ ಚೌಧರಿ ಮತ್ತು ಸಿದ್ಧಾರ್ಥ್ ಓಝಾ ಅವರು ಪ್ರತಿನಿಧಿಸಿದ ತಂಡವು, ಕಾರ್ಯಾಚರಣೆಗಳಲ್ಲಿ ಮಾನವ ದೋಷಗಳನ್ನು ತಡೆಗಟ್ಟುವ ಮತ್ತು ವಿಮಾನ ನಿಲ್ದಾಣದ ದಟ್ಟಣೆ ಹಾಗೂ ಡೌನ್‌ಟೈಮ್ ಅನ್ನು ಕಡಿಮೆ ಮಾಡುವ ಉದ್ದೇಶದಿಂದ ಅಭಿವೃದ್ಧಿಪಡಿಸಿದ ‘ಪೋಕಾ ಯೋಕ್’ ಆಧಾರಿತ ಪರಿಹಾರಗಳಿಗಾಗಿ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

ಈ ಸಾಧನೆಯ ಮೂಲಕ ಮಂಗಳೂರು ವಿಮಾನ ನಿಲ್ದಾಣವು ತಂತ್ರಜ್ಞಾನ ಆಧಾರಿತ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ಗುಣಮಟ್ಟದ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

PREV
Read more Articles on
click me!

Recommended Stories

ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ
ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ: ಶಿರಸಿಯ 8 ವರ್ಷದ ಬಾಲಕನಿಗೆ ಒಲಿದ ಅಂತರಾಷ್ಟ್ರೀಯ ಪ್ರಶಸ್ತಿ