
ಬೆಂಗಳೂರು ನಗರದ ಜಯನಗರ ಪ್ರದೇಶದಲ್ಲಿ ಸುರಿದ ಗಾಳಿ-ಮಳೆಗೆ ಸಂಭವಿಸಿದ ದುರ್ಘಟನೆಯಲ್ಲಿ ಆಟೋ ಚಾಲಕನೊಬ್ಬ ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಜಯನಗರದ ಈಸ್ಟ್ ಎಂಡ್ ಭಾಗದಲ್ಲಿ ಸಂಜೆ ವೇಳೆಗೆ ಬೃಹತ್ ಮರೊಂದು ಆಟೋ ಮೇಲೆ ಕುಸಿದು ಬಿದ್ದ ಪರಿಣಾಮ, ಆಟೋ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಚಿಕ್ಕಮಗಳೂರು ಮೂಲದ ರಶೀದ್ ಎಂಬ ಆಟೋ ಚಾಲಕ ಬೆಂಗಳೂರಿಗೆ ಜೀವನೋಪಾಯಕ್ಕಾಗಿ ಬಂದಿದ್ದು, ಇಲ್ಲಿ ಮನೆ ಇಲ್ಲದ ಕಾರಣ ದಿನವೂ ತನ್ನ ಆಟೋದಲ್ಲಿಯೇ ಮಲಗಿ ಬದುಕು ಸಾಗಿಸುತ್ತಿದ್ದನು. ನಿನ್ನೆ ರಾತ್ರಿ ಗ್ರಾಹಕರನ್ನು ಡ್ರಾಪ್ ಮಾಡಿ ಕೇವಲ 5 ರಿಂದ 10 ಸೆಕೆಂಡ್‌ಗಳೊಳಗೆ ಮರ ಕುಸಿದು ಬಿದ್ದಿದ್ದು, ಸ್ವಲ್ಪ ವಿಳಂಬವಾಗಿದ್ದರೆ ಪ್ರಾಣಾಪಾಯ ಸಂಭವಿಸಬಹುದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ರಶೀದ್ ಅವರ ಕೈಗೆ ಗಂಭೀರ ಗಾಯವಾಗಿದೆ. ಚಿಕಿತ್ಸೆ ಅಗತ್ಯವಿರುವ ಸ್ಥಿತಿಯಲ್ಲಿದ್ದರೂ, ಜೀವನದ ಅನಿವಾರ್ಯತೆಗಳಿಂದಾಗಿ ಅವರು ಮತ್ತೆ ಅದೇ ಸ್ಥಳದಲ್ಲೇ ಉಳಿದುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ. ರಾತ್ರಿ ಇಡೀ ಬೀದಿಯಲ್ಲೇ ಮಲಗಿದ ಈ ಆಟೋ ಚಾಲಕನ ಪರಿಸ್ಥಿತಿ ಮನಕಲುಕುವಂತಾಗಿದೆ.
ರಶೀದ್ ಅವರ ಜೀವನವೇ ಕಷ್ಟಗಳಿಂದ ಕೂಡಿದ್ದು, ಕೋವಿಡ್ ಅವಧಿಯಲ್ಲಿ ತಂದೆ ಹಾಗೂ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಈಗ ತಾಯಿ ಮಾತ್ರ ಉಳಿದಿದ್ದು, ಅವಳು ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾಳೆ. ಕುಟುಂಬದ ಹೊಣೆ ಹೊತ್ತಿರುವ ರಶೀದ್, ಆಟೋ ಓಡಿಸಿ ಗಳಿಸಿದ ಆದಾಯದಿಂದ ತಾಯಿಯನ್ನು ನೋಡಿಕೊಳ್ಳುತ್ತಿದ್ದನು.
ಕೆಲವೇ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರಶೀದ್, ಇಲ್ಲಿ ವಾಸಕ್ಕೆ ಮನೆ ಬಾಡಿಗೆ ಮಾಡಲು ಸಾಧ್ಯವಾಗದೆ ಆಟೋದಲ್ಲೇ ವಾಸಿಸುತ್ತಿದ್ದನು. ಆದರೆ ಈಗ ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಹಾನಿಗೊಂಡಿರುವುದರಿಂದ ಅವನ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ.
ಪ್ರಸ್ತುತ, ಘಟನೆ ನಡೆದ ಸ್ಥಳದಲ್ಲೇ ರಶೀದ್ ಉಳಿದುಕೊಂಡಿದ್ದು, ಗಾಯಗೊಂಡ ಕೈಯಿಂದಲೇ ತನ್ನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾನೆ. ಈ ದುರ್ಘಟನೆ ಆತನ ಬದುಕಿನ ಸಂಕಷ್ಟಗಳನ್ನು ಮತ್ತಷ್ಟು ಗಾಢಗೊಳಿಸಿದ್ದು, ಸಹಾಯಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.