
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಸಂಭವಿಸಬಹುದಾಗಿದ್ದ ಭಾರಿ ವಿಮಾನ ದುರಂತವೊಂದು ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವು ಟೇಕ್-ಆಫ್ ಆಗುವ ಕೊನೆಯ ಕ್ಷಣದಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣವೇ ಎಚ್ಚೆತ್ತ ಪೈಲಟ್ ಹಾರಾಟವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಸಂಜೆ ಸುಮಾರು 6.05ರ ವೇಳೆಗೆ ಬೆಂಗಳೂರಿಗೆ ತೆರಳಲು ವಿಮಾನವು ಸಿದ್ಧವಾಗಿತ್ತು. ವಾಯು ಸಂಚಾರ ನಿಯಂತ್ರಣ ವಿಭಾಗದಿಂದ ಕ್ಲಿಯರೆನ್ಸ್ ಪಡೆದ ಬಳಿಕ ವಿಮಾನವು ರನ್‌ವೇಯಲ್ಲಿ ವೇಗವಾಗಿ ಚಲಿಸಲು ಆರಂಭಿಸಿತು. ಇನ್ನೇನು ವಿಮಾನವು ಆಗಸಕ್ಕೆ ಜಿಗಿಯಬೇಕು ಎನ್ನುವಷ್ಟರಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಪೈಲಟ್ ಗಮನಿಸಿದ್ದಾರೆ. ಒಂದೇ ಒಂದು ಕ್ಷಣವೂ ತಡಮಾಡದ ಪೈಲಟ್, ತಕ್ಷಣವೇ ತುರ್ತು ಬ್ರೇಕ್ ಹಾಕಿ ಟೇಕ್-ಆಫ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣವು ಅತ್ಯಂತ ಸೂಕ್ಷ್ಮವಾದ 'ಟೇಬಲ್‌ಟಾಪ್ ರನ್‌ವೇ' ಹೊಂದಿರುವುದರಿಂದ, ತುರ್ತು ಬ್ರೇಕ್ ಹಾಕಿದರೂ ವಿಮಾನವು ವೇಗದ ಕಾರಣದಿಂದ ಸ್ವಲ್ಪ ದೂರ ಮುಂದಕ್ಕೆ ಚಲಿಸಿದೆ. ಅಂತಿಮವಾಗಿ ರನ್‌ವೇಯ ತುದಿಯಲ್ಲಿ ವಿಮಾನವು ಸುರಕ್ಷಿತವಾಗಿ ನಿಂತಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ವಿಮಾನವು ಇನ್ನೂ ನೆಲದ ಮೇಲೆಯೇ ಇತ್ತು, ಗಾಳಿಯಲ್ಲಿ ಹಾರಾಟ ಆರಂಭಿಸಿರಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.
ಘಟನೆಯ ಬೆನ್ನಲ್ಲೇ ರನ್‌ವೇಯಿಂದ ಸುರಕ್ಷಿತವಾಗಿ ಪಾರ್ಕಿಂಗ್ ಬೇ ಗೆ ವಿಮಾನವನ್ನು ವಾಪಸ್ ತರಲಾಯಿತು. ಬಳಿಕ ಎಲ್ಲಾ 229 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಇಂಡಿಗೋ ಸಂಸ್ಥೆಯ ಎಂಜಿನಿಯರಿಂಗ್ ತಂಡವು ವಿಮಾನವನ್ನು ಕೂಲಂಕಷವಾಗಿ ತಾಂತ್ರಿಕ ತಪಾಸಣೆಗೆ ಒಳಪಡಿಸಿದ್ದು, ಹಾರಾಟಕ್ಕೆ ಯೋಗ್ಯವಲ್ಲದ ಕಾರಣ 'ಏರ್‌ಕ್ರಾಫ್ಟ್ ಆನ್ ಗ್ರೌಂಡ್' ಎಂದು ಘೋಷಿಸಿದೆ.
ವಿಮಾನ ಹಾರಾಟ ರದ್ದಾದ ಕಾರಣ ಆತಂಕಕ್ಕೊಳಗಾಗಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಹಾಗೂ ಇಂಡಿಗೋ ಸಿಬ್ಬಂದಿ ಅಗತ್ಯ ನೆರವು ನೀಡಿ, ಅವರ ಗೊಂದಲಗಳನ್ನು ಬಗೆಹರಿಸಿದರು. ಪ್ರಯಾಣಿಕರನ್ನು ಬೆಂಗಳೂರಿಗೆ ತಲುಪಿಸಲು ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ವಿಶೇಷ ಖಾಲಿ ವಿಮಾನವನ್ನು ಮಂಗಳೂರಿಗೆ ಕರೆಸಿಕೊಂಡಿತು. ಬಳಿಕ ಮಂಗಳವಾರ ಮಧ್ಯರಾತ್ರಿ 12.10ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಪರ್ಯಾಯ ಪರಿಹಾರ ವಿಮಾನದಲ್ಲಿ ಮೂಲ 229 ಪ್ರಯಾಣಿಕರ ಪೈಕಿ 34 ಮಂದಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು ಎಂದು ಮೂಲಗಳು ತಿಳಿಸಿವೆ. ಉಳಿದ ಪ್ರಯಾಣಿಕರಿಗೂ ಸಂಸ್ಥೆಯ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು.
ಗಮನಾರ್ಹ ಸಂಗತಿಯೆಂದರೆ, ರಾಜ್ಯದಲ್ಲಿ ಒಂದೇ ದಿನ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಎರಡನೇ ಪ್ರಕರಣ ಇದಾಗಿದೆ. ಸೋಮವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹಾರಾಟಕ್ಕೂ ಮುನ್ನ ಸಮಸ್ಯೆ ಕಾಣಿಸಿತು. ಬಳಿಕ ಹಾರಾಟ ಸ್ಥಗಿತಗೊಳಿಸಲಾಯ್ತು.