
ವಿದೇಶದಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಜೀವನಶೈಲಿ, ಕೆಲಸದ ಸಂಸ್ಕೃತಿ ಹಾಗೂ ವ್ಯವಸ್ಥೆಗಳ ಬಗ್ಗೆ ಹಂಚಿಕೊಳ್ಳುವ ಅನುಭವಗಳು ಆಗಾಗ್ಗೆ ಗಮನ ಸೆಳೆಯುತ್ತವೆ. ಅದರಲ್ಲೂ ಯುರೋಪ್ನ ಬಾಲ್ಟಿಕ್ ಪ್ರದೇಶದ ದೇಶವೊಂದರಲ್ಲಿ ವಾಸಿಸುತ್ತಿರುವ ಕನ್ನಡಿಗರೊಬ್ಬರು ಅಲ್ಲಿನ ಕಟ್ಟುನಿಟ್ಟಿನ ನಿಯಮಗಳು, ಸ್ವಚ್ಛತೆ, ಪರಿಸರ ಕಾಳಜಿ, ಸಂಚಾರ ವ್ಯವಸ್ಥೆ ಹಾಗೂ ಉದ್ಯೋಗಿಗಳ ಕುರಿತ ಕಾಳಜಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಕಲಾಮಾಧ್ಯಮದಲ್ಲಿ. ಭಾರತದ ವ್ಯವಸ್ಥೆಗೂ ಅಲ್ಲಿನ ಬದುಕಿಗೂ ಇರುವ ವ್ಯತ್ಯಾಸಗಳನ್ನು ವಿವರಿಸಿರುವ ಅವರ ಮಾತುಗಳು ಇದೀಗ ಕುತೂಹಲ ಮೂಡಿಸಿವೆ.
ಅಲ್ಲಿನ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ರಸ್ತೆಯಲ್ಲಿ ಸಣ್ಣ ಕಾಗದದ ತುಂಡು ಕೂಡ ಕಾಣಿಸುವುದು ಅಪರೂಪವಂತೆ. ಇದಕ್ಕೆ ಕಾರಣ ಅಲ್ಲಿನ ಕಟ್ಟುನಿಟ್ಟಿನ ಕಾನೂನುಗಳು ಮತ್ತು ಜನರ ಜವಾಬ್ದಾರಿಯುತ ನಡವಳಿಕೆ. ಮೂರು ಕಟ್ಟಡಗಳಿಗೆ ಸೇರಿ ಒಂದೇ ಕಸದ ಸಂಗ್ರಹಣಾ ವ್ಯವಸ್ಥೆ ಇರುತ್ತದೆ. ಆದರೆ ಕಸವನ್ನು ಮನಬಂದಂತೆ ಎಸೆಯುವಂತಿಲ್ಲ. ಹಸಿ ಕಸ, ಒಣ ಕಸ, ಹಣ್ಣು-ತರಕಾರಿ ತ್ಯಾಜ್ಯ ಮತ್ತು ಕಾರ್ಡ್ಬೋರ್ಡ್ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಹಾಕಬೇಕು.
ಒಂದು ವೇಳೆ ಯಾರಾದರೂ ಕಾರ್ಡ್ಬೋರ್ಡ್ ಹಾಕುವ ತೊಟ್ಟಿಯಲ್ಲಿ ಚಿಕನ್ ಮೂಳೆ ಅಥವಾ ಬೇರೆ ಕಸ ಹಾಕಿದರೆ, ಅದನ್ನು ಹಾಕಿದ ವ್ಯಕ್ತಿಯನ್ನು ಪ್ರತ್ಯೇಕವಾಗಿ ಪತ್ತೆಹಚ್ಚುವ ಬದಲು ಆ ಮೂರು ಕಟ್ಟಡಗಳ ನಿವಾಸಿಗಳಿಗೂ ಒಟ್ಟಾಗಿ ದಂಡ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇನ್ನು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವ ಪರಿಸ್ಥಿತಿಯೇ ಇಲ್ಲ. ಬಾಟಲಿಗಳನ್ನು ಮರುಬಳಕೆ ಯಂತ್ರಕ್ಕೆ ಹಾಕಿದರೆ ಪ್ರತಿ ಬಾಟಲಿಗೆ 10 ಸೆಂಟ್ ಹಣ ವಾಪಸ್ ಸಿಗುತ್ತದೆ.
ಅಲ್ಲಿನ ಮೂಲಸೌಕರ್ಯ ವ್ಯವಸ್ಥೆಯೂ ವಿಶೇಷವಾಗಿದೆ. ಕಟ್ಟಡಗಳ ಮೇಲೆ ಸಾಮಾನ್ಯವಾಗಿ ಕಾಣಸಿಗುವ ಓವರ್ಹೆಡ್ ನೀರಿನ ಟ್ಯಾಂಕ್ಗಳು ಇಲ್ಲಿ ಕಾಣಿಸುವುದಿಲ್ಲವಂತೆ. ಮುನ್ಸಿಪಾಲಿಟಿಯಿಂದ ನೇರವಾಗಿ ದಿನದ 24 ಗಂಟೆಯೂ ಸಂಸ್ಕರಿಸಿದ ನೀರು ಪೂರೈಕೆಯಾಗುತ್ತದೆ. ಮನೆಯ ನಲ್ಲಿಯಲ್ಲಿಯೇ ತಣ್ಣೀರು ಮತ್ತು ಬಿಸಿನೀರಿನ ವ್ಯವಸ್ಥೆ ಇದೆ. ನಲ್ಲಿಯನ್ನು ಬಲಕ್ಕೆ ತಿರುಗಿಸಿದರೆ ತಣ್ಣೀರು, ಎಡಕ್ಕೆ ತಿರುಗಿಸಿದರೆ ಬಿಸಿನೀರು ಬರುತ್ತದೆ. ಪೂರೈಕೆಯಾಗುವ ನೀರನ್ನು ನೇರವಾಗಿ ಕುಡಿಯಲೂ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಕೆಲವು ಪಾರ್ಕಿಂಗ್ ಸ್ಥಳಗಳಲ್ಲಿ ಸಂಜೆ 6ರಿಂದ ಬೆಳಗ್ಗೆ 8ರವರೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಸಮಯದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಅಲ್ಲಿ ನಿಲ್ಲಿಸಿದರೆ ದಂಡ ಕಟ್ಟಬೇಕಾಗುತ್ತದೆ.
ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ತೆಗೆದು ಮುನ್ಸಿಪಾಲಿಟಿಗೆ ಕಳುಹಿಸುವ ವ್ಯವಸ್ಥೆಯೂ ಇದೆ. ಈ ರೀತಿ ದೂರು ಸಲ್ಲಿಕೆಯಾದರೆ ಸುಮಾರು 15 ಯೂರೋ, ಅಂದರೆ 1,700 ರೂಪಾಯಿಗೂ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದು ಕನ್ನಡಿಗರು ತಿಳಿಸಿದ್ದಾರೆ. ಸಂಚಾರ ನಿಯಮಗಳ ವಿಚಾರದಲ್ಲಿಯೂ ಅಲ್ಲಿನ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ಪೊಲೀಸರು ಅನಗತ್ಯವಾಗಿ ವಾಹನಗಳನ್ನು ತಡೆದು ತಪಾಸಣೆ ನಡೆಸುವುದಿಲ್ಲ. ಕುಡಿದು ವಾಹನ ಚಲಾಯಿಸುವವರನ್ನು ಪತ್ತೆಹಚ್ಚಲು ವಿಶೇಷ ನಿಗಾ ಇರುತ್ತದೆ. ಉಳಿದಂತೆ ಸ್ಪೀಡ್ ಕ್ಯಾಮೆರಾಗಳು ವಾಹನಗಳ ವೇಗದ ಮೇಲೆ ಕಣ್ಣಿಟ್ಟಿರುತ್ತವೆ. ಹೆದ್ದಾರಿಗಳಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅವಕಾಶವಿದ್ದು, ಒಂದೂವರೆ ಗಂಟೆಯಿಂದ ಮೂರು ಗಂಟೆಗಳ ಪ್ರಯಾಣದಲ್ಲಿಯೇ ನೆರೆಯ ದೇಶಗಳನ್ನು ತಲುಪಬಹುದು.
ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಗೆ ಈ ದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪೈನ್ ಮರಗಳು ಮತ್ತು ಅಂಬರ್ಗೆ ಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಸುಲಭದ ಕೆಲಸವಲ್ಲ. ಅಪಾರ್ಟ್ಮೆಂಟ್ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ಮರ ಕಡಿಯಬೇಕಾದರೆ ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಅನಿವಾರ್ಯವಾಗಿ ಒಂದು ಮರ ಕಡಿಯಲು ಅನುಮತಿ ದೊರೆತರೆ, ಸರ್ಕಾರ ನಿಗದಿಪಡಿಸಿದ ಅರಣ್ಯ ಪ್ರದೇಶದಲ್ಲಿ 10 ಹೊಸ ಸಸಿಗಳನ್ನು ನೆಡಬೇಕು. ಅಷ್ಟೇ ಅಲ್ಲ, ಸಸಿಗಳನ್ನು ನೆಟ್ಟಿರುವುದಕ್ಕೆ ಸೂಕ್ತ ಸಾಕ್ಷ್ಯವನ್ನೂ ನೀಡಬೇಕು.
ಅಲ್ಲಿನ ಕೆಲಸದ ಸಂಸ್ಕೃತಿ ಭಾರತೀಯ ಉದ್ಯೋಗಿಗಳಿಗೆ ಅಚ್ಚರಿ ಮೂಡಿಸುವಂತಿದೆ. ವಿಶೇಷವಾಗಿ ಐಟಿ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸದ ಒತ್ತಡ ಎದುರಿಸುವವರಿಗೆ ಅಲ್ಲಿನ ವರ್ಕ್ ಕಲ್ಚರ್ ಒಂದು ಮಾದರಿಯಂತೆ ಕಾಣುತ್ತದೆ. ಸಾಮಾನ್ಯವಾಗಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಕೆಲಸದ ಸಮಯ ನಿಗದಿಯಾಗಿರುತ್ತದೆ. ಒಂದು ಗಂಟೆಯ ಊಟದ ವಿರಾಮ ಸೇರಿ ಒಟ್ಟು ಎಂಟು ಗಂಟೆಗಳ ಕೆಲಸ. ಸಂಜೆ 5 ಗಂಟೆಯ ನಂತರ ಮ್ಯಾನೇಜರ್ ಆಗಲಿ, ಸಹೋದ್ಯೋಗಿಗಳಾಗಲಿ ಕೆಲಸದ ವಿಚಾರವಾಗಿ ಕರೆ ಮಾಡುವುದಿಲ್ಲವಂತೆ. ವೈಯಕ್ತಿಕ ಫೋನ್ ನಂಬರ್ಗಳನ್ನು ಹಂಚಿಕೊಳ್ಳುವ ಸಂಪ್ರದಾಯವೂ ಇಲ್ಲ.
ಅಲ್ಲಿನ ಕಚೇರಿಗಳಲ್ಲಿ ಬಾಸ್ ಮತ್ತು ಉದ್ಯೋಗಿಗಳ ನಡುವೆ ದೊಡ್ಡ ಅಂತರ ಇರುವುದಿಲ್ಲ. ಕಂಪನಿಯ ಮಾಲೀಕರನ್ನೂ 'ಸರ್' ಅಥವಾ 'ಮೇಡಂ' ಎಂದು ಕರೆಯುವ ಬದಲು ಅವರ ಹೆಸರಿನಿಂದಲೇ ಕರೆಯಲಾಗುತ್ತದೆ. ಪ್ರತಿ ವಾರ ಉದ್ಯೋಗಿಗಳೊಂದಿಗೆ ಒನ್-ಟು-ಒನ್ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಕೇವಲ ಕೆಲಸದ ಪ್ರಗತಿಯ ಬಗ್ಗೆ ಮಾತ್ರವಲ್ಲದೆ, ಉದ್ಯೋಗಿಗಳ ಆರೋಗ್ಯ, ಮಾನಸಿಕ ಒತ್ತಡ ಮತ್ತು ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿಯ ಬಗ್ಗೆಯೂ ವಿಚಾರಿಸಲಾಗುತ್ತದೆ. ಕಚೇರಿಯಲ್ಲಿ ಉದ್ಯೋಗಿಯೊಬ್ಬರು ಬೇಸರದಿಂದ ಅಥವಾ ಒತ್ತಡದಲ್ಲಿರುವಂತೆ ಕಂಡುಬಂದರೂ ಮ್ಯಾನೇಜರ್ಗಳು ತಕ್ಷಣ ಅವರ ಬಳಿ ಬಂದು ವಿಚಾರಿಸುತ್ತಾರೆ. ಅಗತ್ಯವಿದ್ದರೆ ಸ್ವಲ್ಪ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ.