
ಒಂದು ಕಾಲದಲ್ಲಿ ತಿಂಗಳಿಗೆ ಕೇವಲ ₹150 ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವ್ಯಕ್ತಿ, ಇಂದು ನೂರಾರು ಕೋಟಿ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಕಷ್ಟ, ಪರಿಶ್ರಮ, ಪ್ರಾಮಾಣಿಕತೆ ಮತ್ತು ನಿರಂತರ ಕಲಿಕೆಯ ಮೂಲಕ ಯಶಸ್ಸು ಸಾಧಿಸಿರುವ ಗದಗದ ಉದ್ಯಮಿ ಗಂಗಾಧರ ಸ್ವಾಮಿ ಪಂಚಾಕ್ಷರಯ್ಯ ಹಿರೇಮಠ ಅವರ ಬದುಕಿನ ಪಯಣ ನಿಜಕ್ಕೂ ಸ್ಫೂರ್ತಿದಾಯಕ.
ಗದಗದ ಲೊಕ್ಕುಂಡಿ ಹೆದ್ದಾರಿಯ ಸಂಭಾಪುರ ಸಮೀಪದಲ್ಲಿರುವ ಸ್ವಸ್ತಿಕ್ ಕೋಲ್ಡ್ ಸ್ಟೋರೇಜ್ ಇಂದು ರೈತರಿಗೆ ನೆರವಾಗುವ ಪ್ರಮುಖ ಉದ್ಯಮವಾಗಿ ಗುರುತಿಸಿಕೊಂಡಿದೆ. ಬರೋಬ್ಬರಿ 3.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕೋಲ್ಡ್ ಸ್ಟೋರೇಜ್ನಲ್ಲಿ ಸುಮಾರು 2 ಲಕ್ಷ ಕ್ವಿಂಟಲ್ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದಾಗ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಿಟ್ಟು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅವಕಾಶವಿದೆ.
ಗಂಗಾಧರ ಹಿರೇಮಠ ಅವರ ಯಶಸ್ಸಿನ ಹಿಂದೆ ಅಣ್ಣಿಗೇರಿ ಮಾಸ್ತರ್ ಅವರ ಮಾರ್ಗದರ್ಶನ ಮತ್ತು ಶಿಕ್ಷಣದ ಪ್ರಭಾವ ದೊಡ್ಡದಿದೆ. ಗದಗದಲ್ಲಿ ಬಾಲ್ಯ ಕಳೆದ ಅವರು, ತೊಂಡದಾರಿ ಮಠದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಮಾಡೆಲ್ ಹೈಸ್ಕೂಲ್ನಲ್ಲಿ ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದರು.
ಡಿಪ್ಲೊಮಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಗಂಗಾಧರ ಅವರು ಕೆಲಸ ಹುಡುಕಿಕೊಂಡು ಗೋವಾ, ಪುಣೆ, ದೆಹಲಿ ಸೇರಿದಂತೆ ಹಲವು ನಗರಗಳಿಗೆ ತೆರಳಿದರು. ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದಿದ್ದರೂ ಸಿಕ್ಕ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸಿದರು. ಅವರ ಮೊದಲ ಸಂಬಳ ತಿಂಗಳಿಗೆ ಕೇವಲ ₹150 ಆಗಿತ್ತು. 2003ರಲ್ಲಿ ಮತ್ತೆ ಗದಗಕ್ಕೆ ಮರಳಿದ ಅವರು, 2005ರಲ್ಲಿ ವಿವಾಹವಾದರು. ಆರಂಭದಲ್ಲಿ ಟಾಟಾ ಮೋಟಾರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಅವರು, 2008ರಲ್ಲಿ ಆ ಕೆಲಸವನ್ನು ಬಿಟ್ಟು ಕುಟುಂಬದ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಅವರ ತಂದೆ ಎಪಿಎಂಸಿಯಲ್ಲಿ ಸ್ವಸ್ತಿಕ್ ಟ್ರೇಡರ್ಸ್ ಹೆಸರಿನಲ್ಲಿ ಒಣಮೆಣಸಿನಕಾಯಿ ವ್ಯಾಪಾರ ನಡೆಸುತ್ತಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ಗಂಗಾಧರ ಅವರು ಸ್ವಂತ ಉದ್ಯಮ ಬೆಳೆಸುವ ಕನಸು ಕಂಡರು.
ಆರಂಭದಲ್ಲಿ ಮೆಣಸಿನಕಾಯಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರ ಹೆಸರುಕಾಳು ಪಾಲಿಷ್ ಮಿಲ್ ಖರೀದಿಸಿ ಉದ್ಯಮವನ್ನು ವಿಸ್ತರಿಸಿದರು. ಯಂತ್ರೋಪಕರಣಗಳನ್ನು ಅಳವಡಿಸಿ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ಇಂದು ಅವರ ಘಟಕದಲ್ಲಿ ದಿನಕ್ಕೆ ಸುಮಾರು 300ರಿಂದ 400 ಕ್ವಿಂಟಲ್ ಉತ್ಪನ್ನ ಸಿದ್ಧವಾಗುತ್ತದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಗುಜರಾತ್, ದೆಹಲಿ ಮತ್ತು ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಗೂ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.
ಹೆಸರುಕಾಳು ಪಾಲಿಷ್ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಕಾಳುಗಳಿಗೆ ಅಂಟಿಕೊಂಡಿರುವ ಮಣ್ಣು, ಧೂಳು ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕಿ, ಗಾತ್ರದ ಆಧಾರದಲ್ಲಿ ವಿಂಗಡಿಸಿ ಪಾಲಿಷ್ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಗಂಗಾಧರ ಅವರ ತಂದೆ ವ್ಯಾಪಾರದಲ್ಲಿ ಪಾಲಿಸಬೇಕಾದ ಪ್ರಮುಖ ತತ್ವವೊಂದನ್ನು ಹೇಳಿಕೊಟ್ಟಿದ್ದರು. ಯಾರಿಗಾದರೂ ಒಂದು ರೂಪಾಯಿ ಕೊಡಬೇಕಿದ್ದರೂ ತಕ್ಷಣ ಕೊಡು, ನಿನಗೆ ಬರಬೇಕಾದ ಒಂದು ರೂಪಾಯಿ ಇದ್ದರೂ ಕೇಳಿ ಪಡೆದುಕೊ ಎಂಬುದು ಅವರ ತಂದೆಯ ಮಾತು. ವ್ಯಾಪಾರದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ಅನ್ಯಾಯದ ಮಾರ್ಗದಲ್ಲಿ ಹಣ ಗಳಿಸುವ ಪ್ರಯತ್ನ ಮಾಡಬಾರದು ಎಂಬುದನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ.
ಮೆಣಸಿನಕಾಯಿ ಮತ್ತು ಹೆಸರುಕಾಳು ವ್ಯಾಪಾರದಲ್ಲಿ ಅನುಭವ ಪಡೆದ ಬಳಿಕ ರೈತರಿಗೆ ನೆರವಾಗುವ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಆಲೋಚನೆ ಮೂಡಿತು. ಈ ಯೋಜನೆಯಲ್ಲಿ ಗಂಗಾಧರ ಅವರೊಂದಿಗೆ ಶ್ರವಣ್ ಬಾಗ್ಮಾರ್, ಶಂಭು ಪಟಕಲ್ ಸೇರಿದಂತೆ ಪಾಲುದಾರರು ಕೈಜೋಡಿಸಿದರು. 2021ರಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಕೇವಲ ಎಂಟು ತಿಂಗಳು 15 ದಿನಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, 2022ರ ಮೇ 18ರಂದು ಉದ್ಘಾಟಿಸಲಾಯಿತು ಎಂದು ಗಂಗಾಧರ ಹಿರೇಮಠ ತಿಳಿಸಿದ್ದಾರೆ.
ಸಾಮಾನ್ಯವಾಗಿ ರೈತರು ಬೆಳೆದ ಬೆಳೆ ಮಾರುಕಟ್ಟೆಗೆ ಬಂದಾಗ ಬೆಲೆ ಕಡಿಮೆ ಇದ್ದರೆ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ಉತ್ಪನ್ನಗಳನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಿಡಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಅವಕಾಶ ಸಿಗುತ್ತದೆ. ಇದರಿಂದ ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡುವ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಇದೇ ಉದ್ದೇಶದಿಂದ ಸ್ವಸ್ತಿಕ್ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗಿದೆ ಎಂದು ಗಂಗಾಧರ ತಿಳಿಸಿದ್ದಾರೆ.
ಗಂಗಾಧರ ಅವರ ಉದ್ಯಮ ಜೀವನದಲ್ಲಿ ಮತ್ತೊಂದು ವಿಶೇಷ ಸಂಗತಿಯಿದೆ. ಸ್ವಸ್ತಿಕ್ ಟ್ರೇಡರ್ಸ್ ಆರಂಭದ ದಿನಗಳಲ್ಲಿ ಪಾಲುದಾರರಾಗಿದ್ದ ಬಿಎಸ್ ಕನ್ನೂರು ಅವರು, 2005ರಲ್ಲಿ ಪಾಲುದಾರಿಕೆ ಬೇರ್ಪಟ್ಟ ಸಂದರ್ಭದಲ್ಲಿ ವ್ಯಾಪಾರವನ್ನು ಮುಂದುವರಿಸಲು ಗಂಗಾಧರ ಅವರ ಕುಟುಂಬಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲದೆ, ಆರು ಲಕ್ಷ ರೂಪಾಯಿ ನೀಡಿ ಉದ್ಯಮ ಮುಂದುವರಿಸಲು ಸಹಾಯ ಮಾಡಿದ್ದರು ಎಂದು ಗಂಗಾಧರ ಸ್ಮರಿಸಿದ್ದಾರೆ.