ಜೋರಾದ ಗಾಳಿಗೆ ಸಿಲುಕಿ ನೌಕೆ ನಿಯಂತ್ರಣ ಕಳೆದುಕೊಂಡು ನೀರು ಒಳನುಗ್ಗಲು ಆರಂಭಿಸಿತ್ತು. ಆಗ ನೌಕೆಯಲ್ಲಿದ್ದ ಮಂದಿ ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ನೌಕೆಯ ಕ್ಯಾಪ್ಟನ್ ಮತ್ತು ಸಿಬ್ಬಂದಿ ಜೀವ ಉಳಿಸಿಕೊಂಡಿದ್ದಾರೆ.
ಮಂಗಳೂರು(ಮಾ.21): ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ 8 ಮಂದಿ ಸಿಬ್ಬಂದಿ ಅನ್ನ ನೀರಿಲ್ಲದೆ ಸಮುದ್ರದಲ್ಲಿ ಮೂರು ದಿನ ಕಳೆದಿದ್ದು, ಅವರನ್ನು ರಕ್ಷಿಸಲಾಗಿದೆ.
ಮಂಗಳೂರು ಹಳೆ ಬಂದರಿನಿಂದ ಮಾ.12ರಂದು ತಮಿಳ್ನಾಡು ಮೂಲದ ಎಂಎಸ್‌ವಿ ವರದರಾಜ ಹೆಸರಿನ ನೌಕೆ ಜಲ್ಲಿ, ಸಿಮೆಂಟ್ ಇನ್ನಿತರ ಸಾಮಗ್ರಿ ಹೊತ್ತು ಲಕ್ಷದ್ವೀಪಕ್ಕೆ ಹೊರಟಿತು. ಮಾ.13ರಂದು ಹಡಗು ಲಕ್ಷದ್ವೀಪ ತಲುಪಿದ್ದು, ಅಲ್ಲಿನ ಆಂದ್ರೋತ್ ದ್ವೀಪದಲ್ಲಿ ಅರ್ಧದಷ್ಟು ಸಾಮಗ್ರಿ ಖಾಲಿ ಮಾಡಿ ಬಳಿಕ ಅಗತಿ ದ್ವೀಪದತ್ತ ಸಾಗಿತ್ತು. ರಾತ್ರಿ ಇಡೀ ಸಂಚಾರದ ಬಳಿಕ ಮರುದಿನ ಬೆಳಗ್ಗೆ ನೌಕೆಯ ಎಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿತ್ತು. ಕ್ಯಾಪ್ಟನ್ ಹಾಗೂ ಸಿಬ್ಬಂದಿ ದುರಸ್ತಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಜೋರಾದ ಗಾಳಿಗೆ ಸಿಲುಕಿ ನೌಕೆ ನಿಯಂತ್ರಣ ಕಳೆದುಕೊಂಡು ನೀರು ಒಳನುಗ್ಗಲು ಆರಂಭಿಸಿತ್ತು. ಆಗ ನೌಕೆಯಲ್ಲಿದ್ದ ಮಂದಿ ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ನೌಕೆಯ ಕ್ಯಾಪ್ಟನ್ ಮತ್ತು ಸಿಬ್ಬಂದಿ ಜೀವ ಉಳಿಸಿಕೊಂಡಿದ್ದಾರೆ.
ಮೋದಿ ಧರ್ಮವನ್ನು ದುರುಪಯೋಗ ಮಾಡ್ಕೊಂಡು, ದುಡ್ಡು ಕೊಟ್ಟು ಚುನಾವಣೆ ಗೆಲ್ತಾರೆ; ಪ್ರಕಾಶ್ ರಾಜ್ ಆರೋಪ
ನೌಕೆಯಲ್ಲಿದ್ದ ಕ್ಯಾಪ್ಟನ್ ಭಾಸ್ಕರನ್, ಸಿಬ್ಬಂದಿಗಳಾದ ನಾಗಲಿಂಗಂ, ನಲ್ಲಮುತ್ತು ಗೋಪಾಲ್, ಮಣಿದೇವನ್ ವೇಲು, ವಿಘ್ನೇಶ್, ಅಜಿತ್ ಕುಮಾರ್, ಕಪ್ಪು ರಾಮನ್ ಮತ್ತು ಮುರುಗನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರೆಲ್ಲ ಮೂರು ದಿನ ಸಮುದ್ರದಲ್ಲಿ ಕಳೆದಿದ್ದು, ಮಾ.18ರಂದು ಕಲ್ಬೇನಿ ದ್ವೀಪದ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಈ ಸಣ್ಣ ಬೋಟ್‌ನಲ್ಲಿದ್ದ ಮಂದಿ ರಕ್ಷಣೆಗೆ ಕೈಬೀಸಿದ್ದಾರೆ. ಕೂಡಲೇ ಆ ಬೋಟ್‌ನವರು ಇವರನ್ನು ರಕ್ಷಣೆ ಮಾಡಿ ಬಳಿಕ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ಕೋಸ್ಟ್‌ಗಾರ್ಡ್ ಅವರೆಲ್ಲರನ್ನು ಕೊಚ್ಚಿನ್‌ಗೆ ಕರೆತಂದಿದೆ. ಅಲ್ಲಿಂದ ಎಂಟು ಮಂದಿಯನ್ನು ಮಂಗಳೂರಿಗೆ ಕರೆತರಲಾಗುವುದು ಎಂದು ಮಂಗಳೂರು ಹಳೆ ಬಂದರು ಸಂಘದ ಕಾರ್ಯದರ್ಶಿ ಅಬ್ದುಲ್ ಲತೀಫ್ ತಿಳಿಸಿದ್ದಾರೆ.