ಮಂಗಳೂರಿನಲ್ಲಿ ಬಾಂಬ್ ಸ್ಫೋಟ, ಕೊಡಗಿನಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಪರಿಶೀಲನೆ

By Gowthami K  |  First Published Nov 21, 2022, 12:40 PM IST

ಮಂಗಳೂರು ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆ ಕೊಡಗಿನಲ್ಲೂ ಭಯೋತ್ಪಾದನೆ ನಿಷ್ಕ್ರಿಯ ದಳ ಹೈ ಅಲರ್ಟ್  ಆಗಿದೆ. ಕೊಡಗು ಸೂಕ್ಷ್ಮ ಜಿಲ್ಲೆಯಾಗಿರುವ  ಕಾರಣಕ್ಕೆ ಮಡಿಕೇರಿಯ ಜನನಿಬಿಡ ಸ್ಥಳಗಳಲ್ಲಿ   ಭಯೋತ್ಪಾದನೆ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ.


ಕೊಡಗು (ನ.21): ಮಂಗಳೂರಿನ  ನಾಗುರಿ ಸಮೀಪ  ನವೆಂಬರ್ 19ರಂದು ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣವು ಭಯೋತ್ಪಾದಕ ಕೃತ್ಯ ಎಂಬ ಆತಂಕಕಾರಿ ಸಂಗತಿ ದೃಢಪಟ್ಟ ಬಳಿಕ ರಾಜ್ಯಾದ್ಯಂತ ಹೈ ಅಲರ್ಟ್ ಮಾಡಲಾಗಿದೆ. ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆ  ಕೊಡಗಿನಲ್ಲೂ ಭಯೋತ್ಪಾದನೆ ನಿಷ್ಕ್ರಿಯ ದಳ ಹೈ ಅಲರ್ಟ್  ಆಗಿದೆ. ಕೊಡಗು ಸೂಕ್ಷ್ಮ ಜಿಲ್ಲೆಯಾಗಿರುವ  ಕಾರಣಕ್ಕೆ ಮಡಿಕೇರಿಯ ಜನನಿಬಿಡ ಸ್ಥಳಗಳಲ್ಲಿ   ಭಯೋತ್ಪಾದನೆ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಲಾಗಿದೆ. ಜೊತೆಗೆ ಕೋರ್ಟ್ ಸಭಾಂಗಣ, ಜಿಲ್ಲಾಧಿಕಾರಿ ಸಭಾಂಗಣ ಸೇರಿದಂತೆ ವಿವಿಧೆಡೆ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಲಾಗಿದ್ದು, ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಅಲರ್ಟ್ ಆಗಿದೆ.

 ಈ ಕುರಿತು ಮಾತನಾಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ. ಎ ಅಯ್ಯಪ್ಪ ಅವರು ಜನರಿಗೆ ಯಾವುದೇ ಅಹಿತಕರ ಘಟನೆಗಳ ಅನುಭವ ಆಗದ ರೀತಿಯಲ್ಲಿ ಪ್ರತೀ ವಾರ ಪರಿಶೀಲನೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಆದರೆ ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟ ಘಟನೆ ನಡೆದಿರುವುದರಿಂದ ಇನ್ನಷ್ಟು ಅಲರ್ಟ್ ಆಗಿ ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್, ಬಸ್ ನಿಲ್ದಾಣ ಮತ್ತು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Tap to resize

Latest Videos

undefined

ಮಂಗಳೂರಿನಲ್ಲಿ ನಡೆದಿದ್ದೇನು: ಮೈಸೂರು ಬಸ್‌ನಿಂದ ಶನಿವಾರ ಸಂಜೆ ಮಂಗಳೂರಿನ ಪಡೀಲ್‌ನಲ್ಲಿ ಬಂದಿಳಿದ್ದ ವ್ಯಕ್ತಿಯೊಬ್ಬ ನಾಗುರಿ ಎಂಬಲ್ಲಿ ರಿಕ್ಷಾ ಹತ್ತಿದ್ದ. ರಿಕ್ಷಾ ಪಡೀಲ್‌ನಿಂದ ಪಂಪ್‌ವೆಲ್‌ ಕಡೆಗೆ ಹೋಗುತ್ತಿದ್ದಾಗ 4.30ರ ವೇಳೆ ಭಾರೀ ಸ್ಫೋಟ ಸಂಭವಿಸಿದ್ದು, ಸವಾರ ಹಾಗೂ ಚಾಲಕ ಗಾಯಗೊಂಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರಿಗೆ ರಿಕ್ಷಾದಲ್ಲಿದ್ದ ಕುಕ್ಕರ್‌ನಲ್ಲಿ ವೈರ್‌ಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶ್ವಾನದಳ, ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಪ್ರಕರಣದ ಗಂಭೀರತೆ ಅರಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಅಧಿಕಾರಿಗಳೂ ಸ್ಥಳಕ್ಕಾಗಮಿಸಿದ್ದಾರೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್‌ ತಜ್ಞರ ತಂಡವೂ ಆಗಮಿಸಿ ಸ್ಥಳದ ಆಸುಪಾಸಿನಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿ ತನಿಖೆಗೆ ಇಳಿದಿದೆ. ಜತೆಗೆ ಪೊಲೀಸ್‌ ಇಲಾಖೆಯ 10 ತಂಡಗಳು ಪ್ರತ್ಯೇಕವಾಗಿ ಕಾರ್ಯೋನ್ಮುಖವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಲಾಗಿದೆ. ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆತ್ಮಾಹುತಿ ಸ್ಫೋಟಕ್ಕೂ ಇದಕ್ಕೂ ಕೆಲ ಸಾಮ್ಯತೆ ಇರುವ ಮತ್ತು ಆರೋಪಿ ಬಳಸಿರುವ ಸಿಮ್‌ ಕಾರ್ಡ್‌ ಕೊಯಮತ್ತೂರಿನ ವಿಳಾಸದಲ್ಲಿರುವ ಹಿನ್ನೆಲೆಯಲ್ಲಿ ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.

ನಕಲಿ ಆಧಾರ್‌ ಕಾರ್ಡ್‌: ಆರಂಭದಲ್ಲಿ ಗಾಯಗೊಂಡಿದ್ದ ರಿಕ್ಷಾ ಪ್ರಯಾಣಿಕ ತಾನು ಪ್ರೇಮ್‌ರಾಜ್‌ ಕೊನಗಿ ಎಂದು ಹೇಳಿಕೊಂಡಿದ್ದ. ಆತನ ಬಳಿ ಪ್ರೇಮ್‌ ರಾಜ್‌ ಹೆಸರಿನ ಆಧಾರ್‌ ಕಾರ್ಡ್‌ ಕೂಡ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಪ್ರೇಮ್‌ ರಾಜ್‌ ಹೆಸರಿನ ನಿಜವಾದ ವ್ಯಕ್ತಿ ಹುಬ್ಬಳ್ಳಿ ಮೂಲದವರಾಗಿದ್ದು, ಪ್ರಸ್ತುತ ತುಮಕೂರಿನಲ್ಲಿ ರೈಲ್ವೆ ಇಲಾಖೆ ನೌಕರನಾಗಿರುವುದು ಗೊತ್ತಾಗಿದೆ. ಆರೋಪಿ ತನ್ನ ಗುರುತು ಮರೆಮಾಚಲು ನಕಲಿ ದಾಖಲೆ ಪತ್ರ ಹೊಂದಿದ್ದ. ಇದಕ್ಕಾಗಿ ದುಷ್ಕರ್ಮಿ ಪ್ರೇಮ್‌ರಾಜ್‌ ಅವರ ಆಧಾರ್‌ ಕಾರ್ಡ್‌ನಲ್ಲಿ ತನ್ನ ಫೋಟೊ ಹಾಕಿ ವಿಳಾಸ, ಮತ್ತಿತರ ಮಾಹಿತಿಗಳನ್ನು ಹಾಗೇ ಉಳಿಸಿಕೊಂಡಿರುವುದು ಬಯಲಿಗೆ ಬಂದಿದೆ.

ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವಾಗಿ ಕುಕ್ಕರ್‌ ಬಾಂಬ್‌ ಸ್ಫೋಟ?

2 ತಿಂಗಳು ಮೈಸೂರಲ್ಲಿದ್ದ: ಸ್ಫೋಟದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ದುಷ್ಕರ್ಮಿ ಕ್ಷಣಕ್ಕೊಂದು ಹೇಳಿಕೆ ನೀಡಿ ಪೊಲೀಸರನ್ನೇ ಗೊಂದಲಕ್ಕೀಡು ಮಾಡಿದ್ದ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಾನು ಮೈಸೂರಿನಿಂದ ಬಂದಿದ್ದು, ತನ್ನ ಅಣ್ಣ ಬಾಬುರಾವ್‌ಗೆ ಕರೆ ಮಾಡುವಂತೆ ಹಿಂದಿಯಲ್ಲಿ ಹೇಳಿದ್ದ. ಆ ನಂಬರ್‌ಗೆ ಕರೆ ಮಾಡಿದಾಗ ‘ಆತ ನನ್ನ ತಮ್ಮ ಅಲ್ಲ. ಮೈಸೂರಿನಲ್ಲಿ ಬಾಡಿಗೆ ರೂಮ್‌ ಪಡೆದುಕೊಂಡಿದ್ದು ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದ’ ಎಂಬ ಉತ್ತರ ಬಂದಿದೆ. ಮತ್ತೆ ಪ್ರಶ್ನೆ ಮಾಡಿದಾಗ ಮಂಗಳೂರಿನ ದೇವಾಲಯಗಳ ಭೇಟಿಗೆ ಬಂದಿದ್ದಾಗಿ ಸುಳ್ಳು ಹೇಳಿದ್ದ. ಕ್ಷಣಕ್ಕೊಮ್ಮೆ ಹೇಳಿಕೆ ಬದಲಿಸುತ್ತಿದ್ದುದರಿಂದ ಸಂಶಯಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಆತ ಹೇಳುತ್ತಿರುವುದು ಸುಳ್ಳು ಎಂಬುದು ಬಯಲಾಗಿದೆ.

ಮಂಗಳೂರು ಬ್ಲಾಸ್ಟ್ ಪ್ರಕರಣ: ಉಗ್ರ ಕೃತ್ಯಕ್ಕೆ 'ಕೇಸರಿ ಬಣ್ಣ' ಬಳಿಯಲು ನಡೆದಿತ್ತಾ ಸಂಚು

ಶಂಕಿತ ವಾಸವಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಸರ್ಕಿಟ್‌ ಬೋರ್ಡ್‌, ಸ್ಮಾಲ್‌ ಬೋಲ್ಟ್‌, ಬ್ಯಾಟರಿ, ಮೊಬೈಲ್‌, ವುಡೆನ್‌ ಪೌಡರ್‌, ಅಲ್ಯೂಮಿನಿಯಂ, ಮಲ್ಟಿಮೀಟರ್‌, ವೈರ್‌, ಪ್ರೆಶರ್‌ ಕುಕ್ಕರ್‌ ಸೇರಿದಂತೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಇದರೊಂದಿಗೆ ಒಂದು ಮೊಬೈಲ್‌, ಎರಡು ನಕಲಿ ಆಧಾರ್‌ ಕಾರ್ಡ್‌, ಒಂದು ನಕಲಿ ಪ್ಯಾನ್‌ ಕಾರ್ಡ್‌, ಒಂದು ಫಿನೋ ಡೆಬಿಟ್‌ ಕಾರ್ಡ್‌ ಸಿಕ್ಕಿದೆ ಎಂದು ತಿಳಿದು ಬಂದಿದೆ.

click me!