
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸುಮಾರು 16 ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳಿಗೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗದ ಹಿನ್ನೆಲೆಯಲ್ಲಿ ಅವುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಮಂಗಳೂರು ವಿವಿಯಲ್ಲಿ ಶೈಕ್ಷಣಿಕ ಮಂಡಳಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಸ್ನಾತಕೋತ್ತರ ಕೋರ್ಸ್ ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳಿರಬೇಕು. ಅದರಂತೆ ಅಷ್ಟು ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ ಅನಾಲಿಟಿಕಲ್ ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಸೈಬರ್ ಸೆಕ್ಯುರಿಟಿ, ಎಂ.ಎಡ್, ಸಮಾಜಶಾಸ್ತ್ರ (ಸೋಶಿಯಾಲಜಿ), ಎಂ.ಕಾಂ (ಎಚ್‌ಆರ್‌ಡಿ), ಬಯೋಸೈನ್ಸ್, ಎಂಸಿಜೆ (ಪತ್ರಿಕೋದ್ಯಮ), ತುಳು, ಕೊಂಕಣಿ, ಹಿಂದಿ, ಸಂಸ್ಕೃತ, ಸಂಖ್ಯಾಶಾಸ್ತ್ರ (ಸ್ಟಾಟಿಸ್ಟಿಕ್ಸ್), ಪರಿಸರ ವಿಜ್ಞಾನ, ಮೆಟೀರಿಯಲ್ ಸೈನ್ಸ್ ಮತ್ತು ಜಿಯೋಇನ್ಫರ್ಮ್ಯಾಟಿಕ್ಸ್ ಪಿಜಿ ಕೋರ್ಸ್‌ಗಳನ್ನು ಸ್ಥಗಿತ ಮಾಡಲಾಗಿದೆ ಎಂದರು.
ಈ ಹಲವು ಪಿಜಿ ಕೋರ್ಸ್‌ಗಳು ಬೋಧಕ ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದು, ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ. ಕೇವಲ ಇಬ್ಬರು ಅಥವಾ ಮೂವರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ನಾವು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಇದು ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧ ಎಂದರು.
ಹಿರಿಯ ಬೋಧಕ ಸಿಬ್ಬಂದಿಯ ಕೊರತೆಯನ್ನು ನಿವಾರಿಸಲು ಮತ್ತು ಸ್ನಾತಕೋತ್ತರ ವಿಭಾಗಗಳ ಕಾರ್ಯವೈಖರಿಯನ್ನು ಸುಧಾರಿಸಲು, ವಿಶ್ವವಿದ್ಯಾನಿಲಯ ಸಂಬಂಧಿತ ವಿಭಾಗಗಳನ್ನು ವಿವಿಧ ‘ಸ್ಕೂಲ್ ಆಫ್ ಸ್ಟಡೀಸ್’ (ಅಧ್ಯಯನ ಶಾಲೆಗಳು) ಅಡಿಯಲ್ಲಿ ತರಲು ಯೋಜಿಸುತ್ತಿದೆ. ಈ ಪ್ರಸ್ತಾವಿತ ವ್ಯವಸ್ಥೆಯಡಿ ಬಯೋಸೈನ್ಸ್, ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಆಹಾರ ವಿಜ್ಞಾನ ಮತ್ತು ಮೈಕ್ರೋಬಯಾಲಜಿ ವಿಭಾಗಗಳನ್ನು ಒಂದೇ ಶಾಲೆಯ ಅಡಿಯಲ್ಲಿ ತರಲಾಗಿದೆ. ಮೆರೀನ್ ಜಿಯಾಲಜಿ ಮತ್ತು ಭೂಗೋಳಶಾಸ್ತ್ರವನ್ನು ಮತ್ತೊಂದು ಶಾಲೆಯ ಅಡಿಯಲ್ಲಿ ಗುಂಪು ಮಾಡಲಾಗುತ್ತದೆ ಎಂದರು.
ಅಂಬಿಕಾ ಮಹಾವಿದ್ಯಾಲಯ (ಪುತ್ತೂರು), ಅಂಜುಮನ್ ಫಸ್ಟ್ ಗ್ರೇಡ್ ಕಾಲೇಜ್ (ಜೋಕಟ್ಟೆ), ಪ್ರೇರಣಾ ಕಾಲೇಜು ಮತ್ತು ಭಾರತಿ ಕಾಲೇಜು ಈ 4 ಕಾಲೇಜುಗಳು 2026-27ನೇ ಶೈಕ್ಷಣಿಕ ಸಾಲಿಗೆ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರು.
ನೆಲ್ಯಾಡಿ ಮತ್ತು ಬನ್ನಡ್ಕದಲ್ಲಿರುವ ಘಟಕ ಕಾಲೇಜುಗಳ ಪ್ರವೇಶಾತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಲೇಜುಗಳಿಗೆ ಹೊಸ ಬ್ಯಾಚ್‌ನ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿಲ್ಲ. ಈ ಕಾಲೇಜುಗಳನ್ನು ಹತ್ತಿರದ ಸರ್ಕಾರಿ ಕಾಲೇಜುಗಳಿಗೆ ವಿಲೀನಗೊಳಿಸುವ ಕುರಿತು ಸಂಪುಟ ಸಭೆ ತೀರ್ಮಾನಿಸಲಿದೆ ಎಂದರು.
ತುಳು ಎಂಎ ಕೋರ್ಸ್ ನಿಯಮ ಬಾಹಿರ ಸ್ಥಳದಲ್ಲಿ ನಡೆಸಲು ಅವಕಾಶ ನೀಡುವುದಿಲ್ಲ. ಅದಕ್ಕಾಗಿ ವಿವಿಗೆ ಸ್ಥಳಾಂತರಿಸಲಾಗಿದೆ. 15 ಮಕ್ಕಳು ದಾಖಲಾದರೆ ಕೋರ್ಸ್ ಆರಂಭಿಸಲಾಗುವುದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ಬೋಧಕ ಸಿಬ್ಬಂದಿಯ ಕೊರತೆಯಿಂದಾಗಿ ಎದುರಾಗಿರುವ ಪಿಎಚ್.ಡಿ ಮಾರ್ಗದರ್ಶಕರ ಅಭಾವ ನೀಗಿಸಲು, ವಿಶ್ವವಿದ್ಯಾನಿಲಯ ಸಂಯೋಜಿತ ಸರ್ಕಾರಿ ಕಾಲೇಜುಗಳ ಅರ್ಹ ಬೋಧಕ ಸಿಬ್ಬಂದಿಯನ್ನು ಪಿಎಚ್.ಡಿ ಮಾರ್ಗದರ್ಶಕರಾಗಿ (ಗೈಡ್) ಗುರುತಿಸಲು ಯೋಜನೆ ರೂಪಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಭೌತಿಕ (ಫಿಸಿಕಲ್) ಅಂಕಪಟ್ಟಿಗಳನ್ನು ನೀಡುವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡಿದೆ. ಅದರಂತೆ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ನ ಭೌತಿಕ ಅಂಕಪಟ್ಟಿ ಹಾಗೂ ಕೋರ್ಸ್ ಮುಕ್ತಾಯದಲ್ಲಿ ಕ್ರೋಢೀಕೃತ (ಕನ್ಸಾಲಿಡೇಟೆಡ್) ಅಂಕಪಟ್ಟಿ ನೀಡಲಾಗುವುದು. ಹಿಂದಿನ ವರ್ಷಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕ್ರೋಢೀಕೃತ ಅಂಕಪಟ್ಟಿ ನೀಡುವುದು ಮುಂದುವರಿಯುತ್ತದೆ ಎಂದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ರಚಿಸಿದ್ದ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಂಡು ಪಿಎಚ್‌ಡಿ ಪದವಿ ಪ್ರದಾನಕ್ಕೆ ಸಂಬಂಧಿಸಿದ ಪರಿಷ್ಕೃತ ನಿಯಮಾವಳಿಗಳಿಗೆ ಅನುಮೋದನೆ ನೀಡಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಭಾಂಗಣದಲ್ಲಿ ಸಭೆ ನಡೆಯಿತು.
ಈ ಪರಿಷ್ಕೃತ ನಿಯಮಾವಳಿಗಳನ್ನು ಸಿದ್ಧಪಡಿಸಿದ ಏಕೈಕ ವಿಶ್ವವಿದ್ಯಾನಿಲಯ ಮಂಗಳೂರು ವಿಶ್ವವಿದ್ಯಾನಿಲಯವಾಗಿದ್ದು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇದನ್ನು ರಾಜ್ಯದ ಇತರ ಸರ್ಕಾರಿ ವಿಶ್ವವಿದ್ಯಾನಿಲಯಗಳಿಗೆ ಹಂಚಿಕೊಂಡಿದೆ ಎಂದು ಪ್ರೊ.ಧರ್ಮ ತಿಳಿಸಿದರು.
ರೀಟೇಲ್ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಆಡ್-ಆನ್ ಕೋರ್ಸ್‌ನ ಪರಿಷ್ಕೃತ ಪಠ್ಯಕ್ರಮ ಹಾಗೂ ಬಿಕಾಂ (ಹ್ಯೂಮನ್ ರಿಸೋರ್ಸಸ್ ಆಪರೇಷನ್ಸ್) ಎಇಡಿಪಿ ಕಾರ್ಯಕ್ರಮದ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್‌ಗಳ ಪಠ್ಯಕ್ರಮಕ್ಕೂ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ. ಬಿಎ ಗ್ರಾಮೀಣ ಅಭಿವೃದ್ಧಿ ಕೋರ್ ಕೋರ್ಸ್‌ನ 5ನೇ ಮತ್ತು 6ನೇ ಸೆಮಿಸ್ಟರ್‌ಗಳ ಪಠ್ಯಕ್ರಮವನ್ನೂ ಅನುಮೋದಿಸಲಾಗಿದೆ.
ಪ್ರೆಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್ನೋವೇಶನ್‌ಗೆ ಬಿಬಿಎ ಇನ್ ಲಾಜಿಸ್ಟಿಕ್ಸ್, ಬಿಸಿಎ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ಹಾಗೂ ಬಿಸಿಎ ಇನ್ ಡೇಟಾ ಅನಾಲಿಟಿಕ್ಸ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಹೊಸ ಸಂಯೋಜನೆ (ಅಫಿಲಿಯೇಷನ್) ನೀಡಲಾಗಿದೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಕೋರ್ಸ್‌ಗಳಲ್ಲಿ ತುಳು ಮತ್ತು ಫ್ರೆಂಚ್ ಭಾಷೆಗಳನ್ನು ಐಚ್ಛಿಕ ವಿಷಯಗಳಾಗಿ ಬೋಧಿಸಲು ಮಂಡಳಿ ಅನುಮೋದನೆ ನೀಡಿದೆ. ಅದೇ ಕಾಲೇಜಿನಲ್ಲಿ ಎಂಬಿಎ ಇನ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಎಂಸಿಎ ಕಾರ್ಯಕ್ರಮಗಳಿಗೂ ಅನುಮೋದನೆ ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸಂತೋಷ್ ಜಗಳಾಸರ್, ಕುಲಸಚಿವ (ಮೌಲ್ಯಮಾಪನ) ಡಾ.ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಎಸ್.ಪಂಚಲಿಂಗಸ್ವಾಮಿ ಇದ್ದರು.