ಪುಲ್ವಾಮಾ ಹುತಾತ್ಮರಿಗೆ ನಮಿಸಿ ವೆಲೆಂಟೈನ್‌ ಡೇ ಹೂವಿನ ವ್ಯಾಪಾರ

By Kannadaprabha NewsFirst Published Feb 15, 2020, 7:36 AM IST
Highlights

ಮಂಗಳೂರು ನಗರದ ಹೂವಿನ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಅಂಗಡಿಯಲ್ಲಿ ಪುಲ್ವಾಮಾ ಹುತಾತ್ಮ ಯೋಧರ ಭಾವಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬಳಿಕ ವೆಲೆಂಟೈನ್‌ ಡೇ ವ್ಯಾಪಾರ ನಡೆಸಿದ್ದಾರೆ.

ಮಂಗಳೂರು(ಫೆ.15): ಫೆ.14ರಂದು ಪ್ರೇಮಿಗಳ ದಿನಾಚರಣೆ ಬದಲು ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಭಾರತೀಯ ಯೋಧರು ಹತರಾದ ಗೌರವಾರ್ಥ ಹುತಾತ್ಮ ದಿನಾಚರಣೆ ಆಚರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿದ್ದವು. ಇದಕ್ಕೆ ಸ್ಪಂದಿಸಿದ ಮಂಗಳೂರು ನಗರದ ಹೂವಿನ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಅಂಗಡಿಯಲ್ಲಿ ಪುಲ್ವಾಮಾ ಹುತಾತ್ಮ ಯೋಧರ ಭಾವಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬಳಿಕ ವೆಲೆಂಟೈನ್‌ ಡೇ ವ್ಯಾಪಾರ ನಡೆಸಿದ್ದಾರೆ.

ಫೆ.14ರಂದು ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ. ಹೂವಿನ ಅಂಗಡಿ ಅಥವಾ ಗ್ರೀಟಿಂಗ್ಸ್‌ ಕಾರ್ಡ್‌ ಮಾರಾಟ ಮಳಿಗೆಗಳಲ್ಲಿ ಪ್ರೇಮಿಗಳ ದಿನಾಚರಣೆ ಪರವಾದ ವಸ್ತುಗಳ ಮಾರಾಟ ಮಾಡದಂತೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ತಪ್ಪಿದಲ್ಲಿ ಸ್ಥಳಕ್ಕೆ ಆಗಮಿಸಿ ಹೋರಾಟ ನಡೆಸುವುದಾಗಿ ತಿಳಿಸಿದ್ದವು.

ಪ್ರೇಮಿಗಳ ದಿನ ಆಚರಿಸದಂತೆ ಭಜರಂಗದಳ ಖಡಕ್ ಎಚ್ಚರಿಕೆ

ಇದರ ಪರಿಣಾಮವೋ ಎಂಬಂತೆ ಕರಂಗಲ್ಪಾಡಿ ಬಳಿಯ ಹೂವಿನ ಮಾರಾಟ ಮಳಿಗೆಯಲ್ಲಿ ಗುರುವಾರ ರಾತ್ರಿಯೇ ವೆಲೆಂಟೈನ್‌ ಡೇ ಆಚರಿಸಲು ಗ್ರಾಹಕರನ್ನು ಆಕರ್ಷಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು. ಅದರ ಜೊತೆಗೆ ಪುಲ್ವಾಮಾ ಹುತಾತ್ಮ ಯೋಧರ ಭಾವಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನೆರವೇರಿಸಲಾಗಿತ್ತು.

ಆದರೆ ಪ್ರೇಮಿಗಳ ದಿನಕ್ಕೆ ಮಾಡಿದ ವಿಶೇಷ ಅಲಂಕಾರವನ್ನು ತೆರವುಗೊಳಿಸುವಂತೆ ಹಿಂದೂ ಸಂಘಟನೆ ಮುಖಂಡರು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಇದ್ದ ಹೂ ಮಾರಾಟ ಮಳಿಗೆ ಎದುರಿನ ವಿಶೇಷ ಅಲಂಕಾರವನ್ನು ಅಲ್ಲಿಂದ ತೆರವುಗೊಳಿಸಿ ಹಿಂಭಾಗಕ್ಕೆ ಇರಿಸಲಾಯಿತು. ಬಳಿಕ ಅಲ್ಲಿಂದಲೂ ತೆರವು ಮಾಡಿಸಲಾಯಿತು. ಹೂವಿನ ಮಳಿಗೆಯ ಎದುರು ಪುಲ್ವಾಮಾ ಹುತಾತ್ಮರಿಗೆ ಪುಷ್ಪಾರ್ಚನೆ ನೆರವೇರಿಸುವ ಅವಕಾಶವನ್ನು ಮಳಿಗೆಯ ಮಾಲೀಕರು ಕಲ್ಪಿಸುವ ಮೂಲಕ ತಾವು ಕೂಡ ಹುತಾತ್ಮ ಯೋಧರ ಸ್ಮರಣೆಗೆ ಕೈಜೋಡಿಸಿದರು.

ಹೂ ಮಾರಾಟ ಇಳಿಮುಖ:

ಸಾಮಾನ್ಯವಾಗಿ ಪ್ರೇಮಿಗಳ ದಿನಾಚರಣೆ ವೇಳೆ ಕಂಡುಬರುತ್ತಿದ್ದ ಹೂವಿನ ಭರ್ಜರಿ ಮಾರಾಟ ಈ ಬಾರಿ ಇಳಿಮುಖವಾಗಿತ್ತು ಎನ್ನುತ್ತಾರೆ ಹೂವಿನ ವ್ಯಾಪಾರಿಗಳು. ಪ್ರೇಮಿಗಳ ದಿನಾಚರಣೆಗೆ ಪ್ರತಿ ವರ್ಷ ಹಿಂದೂ ಸಂಘಟನೆಗಳಿಂದ ಬೆದರಿಕೆ ಇರುತ್ತಿದ್ದ ಕಾರಣ ಈ ಬಾರಿ ಬಹಿರಂಗವಾಗಿ ಕಾಣಿಸಿಕೊಳ್ಳಲು ಪ್ರೇಮಿಗಳು ಹಿಂದೇಟು ಹಾಕಿದ್ದಾರೆ. ಇದರ ಬದಲು ಜಾಲತಾಣಗಳ ಮೂಲಕ ಪರಸ್ಪರ ಶುಭಾಶಯ ಕೋರಿದ್ದಾರೆ. ಮುಂಚಿತವಾಗಿಯೇ ಹೂವು ಖರೀದಿಸಿ ‘ಐ ಲವ್‌ ಯೂ’ ಎಂದಿದ್ದಾರೆ. ಗ್ರೀಟಿಂಗ್ಸ್‌ ಖರೀದಿಸುವ ಗೋಜಿಗೆ ಮುಂದಾಗದೆ, ಆನ್‌ಲೈನ್‌ ಮೂಲಕವೇ ಪ್ರೀತಿಯ ತೆರೆದಿಡುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ಗ್ರೀಟಿಂಗ್ಸ್‌ ವ್ಯಾಪಾರವೂ ಅಷ್ಟಾಗಿ ನಡೆದಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.

ಪುಲ್ವಾಮಾ ಹುತಾತ್ಮರ ಸ್ಮರಣೆ:

ಈ ಮಧ್ಯೆ ಪ್ರೇಮಿಗಳ ದಿನಾಚರಣೆ ಬಗ್ಗೆ ಕಣ್ಗಾವಲು ಇರಿಸಿರುವ ಹಿಂದೂ ಸಂಘಟನೆಗಳು ಕದ್ರಿ ಹುತಾತ್ಮ ಸ್ಮಾರಕದಲ್ಲಿ ಪುಲ್ವಾಮಾ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಪ್ರೇಮಿಗಳ ದಿನಾಚರಣೆ ವಿರುದ್ಧ ಕಾರ್ಯಾಚರಣೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಬೆದರಿಕೆ ಹಾಕಿದರೂ ಅಂತಹ ಯಾವುದೇ ಘಟನೆ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇವರಲ್ಲದೆ, ರಾಷ್ಟ್ರೀಯ ಕ್ರೈಸ್ತರ ವೇದಿಕೆ, ಮಂಗಳೂರು ಸಿಟಿ ಬ್ಲಾಕ್‌ ಕಾಂಗ್ರೆಸ್‌ ಕೂಡ ಹುತಾತ್ಮ ಯೋಧರ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದೆ.

click me!