ಕಳೆದ ವಾರವಷ್ಟೇ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಅವರು ಹೆಮ್ಮೆಯ ಬೀಟ್ ಡ್ಯೂಟಿ ಅನ್ನೋ ಹೊಸ ಕಾನ್ಸೆಪ್ಟ್ ತಂದಿದ್ದು, ಇದೀಗ ಬೀಟ್ ಸಿಬ್ಬಂದಿ ಜೊತೆ ಸ್ವತ: ನಡೆದುಕೊಂಡು ಹೋಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಚ್ಚರಿ ಎಂದರೆ ಈ ಬೀಟ್ ಸಂದರ್ಭ ಪೊಲೀಸ್ ಇಲಾಖೆ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ.
ಮಂಗಳೂರು(ಆ.17): ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು ಶುಕ್ರವಾರ ತಮ್ಮದೇ ಕಲ್ಪನೆಯ ‘ನನ್ನ ಬೀಟ್-ನನ್ನ ಹೆಮ್ಮೆ’ ಹೊಸ ಬೀಟ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ನಡೆಸಿದ ಬೀಟ್‌ನಲ್ಲಿ ದೂರುಗಳನ್ನು ಆಲಿಸಿದರು. ಅಚ್ಚರಿಯ ಸಂಗತಿ ಎಂದರೆ, ಸುಮಾರು ಎರಡು ಗಂಟೆ ಕಾಲ ಬೀಟ್ ಸಿಬ್ಬಂದಿ ಜೊತೆಗೆ ಕಾಲ್ನಡಿಗೆಯಲ್ಲೇ ಬೀಟ್ ನಡೆಸಿದ ಕಮಿಷನರ್‌ಗೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರು ಕೇಳಿ ಬಂದಿಲ್ಲ!
ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಗರದ ಕಂಡತ್‌ಪಳ್ಳಿ ಭಾಗದಿಂದ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ನಂ.8ರ ಬೀಟ್ ಸಿಬ್ಬಂದಿ ಈಶಪ್ರಸಾದ್ ಜೊತೆಗೆ ಕಮಿಷನರ್ ಡಾ.ಹರ್ಷ ಕೂಡ ಬೀಟ್ ನಡೆಸಿದರು. ಈ ಸಂದರ್ಭ ಮಳೆ ಬಂದು ರಸ್ತೆ ಹಾಳಾಗಿದೆ, ಅಲ್ಲಲ್ಲಿ ಕಸದ ರಾಶಿ ಇದ್ದು, ಅದರ ಸೂಕ್ತ ವಿಲೇವಾರಿ ಮಾಡಿಸಿ ಎಂದು ಜನ ಕೇಳಿಕೊಂಡರು.
undefined
ಬೀಟ್ ವೇಳೆ 8-10 ಮನೆಗಳು, ಅಂಗಡಿಮುಂಗಟ್ಟು, ಮಸೀದಿ, ಚಚ್‌ರ್ ಹಾಗೂ ಕೊನೆಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬೀಟ್‌ನ ಉದ್ದಕ್ಕೂ ಬೀಟ್ ಸಿಬ್ಬಂದಿಗೆ ಜೊತೆಯಾಗಿ ಕಮಿಷನರ್ ಡಾ.ಹರ್ಷ ಸಂಚರಿಸಿದರು.
Beat is the most basic unit of policing.. will bridge all gaps between citizenry and police..got an overwhelming support from public during my beat duty at beat no8 north ps with beat pc isha prasad.. at your service pic.twitter.com/4Kqqsafrgv
— Harsha IPS CP Mangaluru City (@compolmlr)ಇವರಿಬ್ಬರು ಭೇಟಿ ನೀಡಿದ ಕಡೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಭವಿಸಿದ ರಸ್ತೆ ಹಾನಿ, ಕಸದ ರಾಶಿ, ತ್ಯಾಜ್ಯ ವಿಲೇವಾರಿ ಇತ್ಯಾದಿ ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಪಡದ ವಿಚಾರಗಳ ಬಗ್ಗೆ ನಾಗರಿಕರಿಂದ ದೂರು ವ್ಯಕ್ತಗೊಂಡಿತು. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವ ಭರವಸೆ ದೊರೆಯಿತು. ಆದರೆ ಸಂಚಾರ ಹಾಗೂ ಕಾನೂನು, ಸುವ್ಯವಸ್ಥೆ ಅಥವಾ ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ನೇರ ದೂರು ವ್ಯಕ್ತಗೊಂಡಿಲ್ಲ ಎಂದು ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಕಮಿಷನರ್ ಬೀಟ್‌ಗೆ ಶಹಭಾಸ್‌ಗಿರಿ
‘ನನ್ನ ಬೀಟ್-ನನ್ನ ಹೆಮ್ಮೆ’ ಹೊಸ ಬೀಟ್ ವ್ಯವಸ್ಥೆಗೆ ಚಾಲನೆ ನೀಡಿದ ದಿನವೇ ಸ್ವತಃ ಕಮಿಷನರ್ ಅವರು ಪೊಲೀಸ್ ಸಿಬ್ಬಂದಿ ಜೊತೆಗೆ ಬೀಟ್ ನಡೆಸಿರುವುದು ನಾಗರಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಡತ್‌ಪಳ್ಳಿಯಿಂದ ಮಿಷನ್ ಕಂಪೌಂಡ್ ವರೆಗೆ ಬೀಟ್ ನಡೆಸಿದ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು, ನಾಗರಿಕರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಮನವರಿಕೆ ಮಾಡುವ ಹಾಗೂ ಧೈರ್ಯ ತುಂಬುವ ಕೆಲಸ ಮಾಡಿದರು. ಯಾವುದೇ ಕುಂದುಕೊರತೆ ಇದ್ದರೆ ನೇರವಾಗಿ ಬೀಟ್ ಪೊಲೀಸ್ ಸಿಬ್ಬಂದಿಯ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಬಹುದು. ಇಲ್ಲವೇ ಕರೆ ಮಾಡಿ ತಿಳಿಸಬಹುದು. ನಿಮ್ಮ ಪ್ರದೇಶಕ್ಕೆ ಬೀಟ್ ಸಿಬ್ಬಂದಿಯೇ ಅಧಿಕಾರಿ ಇದ್ದಂತೆ ಎಂದು ಮನವರಿಕೆ ಮಾಡಿದರು.
ಮಂಗಳೂರಿನಲ್ಲಿನ್ನು 'ಹೆಮ್ಮೆಯ ಬೀಟ್ ಡ್ಯೂಟಿ'
ಈ ಸಂದರ್ಭ ಹಿರಿಯ ನಾಗರಿಕರ ಭದ್ರತೆಗೆ ಭರವಸೆ ನೀಡಿದ ಕಮಿಷನರ್ ಅವರು, ರಾತ್ರಿ ಬೀಟ್‌ನಲ್ಲಿ ವಿಶೇಷ ನಿಗಾ ಇರಿಸಲಾಗುವುದು ಎಂದರು. ಈ ಹೊಸ ಬೀಟ್ ವ್ಯವಸ್ಥೆ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಬಹಳ ಪರಿಣಾಮಕಾರಿಯಾಗಿದ್ದು, ನಾಗರಿಕರ ಜೊತೆಗೆ ಪೊಲೀಸ್ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವ ವಿಶ್ವಾಸ ವ್ಯಕ್ತಪಡಿಸಿದರು.