ಮಂಗಳೂರು: ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು..?

By Kannadaprabha NewsFirst Published Sep 9, 2019, 8:32 AM IST
Highlights

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ IAS ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಜಿಲ್ಲಾ ಲಾರಿ ಮಾಲೀಕರ ಸಂಘ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಬಗ್ಗೆ ತಯಾರಿ ನಡೆಸಿದೆ. ಸೆಂಥಿಲ್‌ ಡಿಸಿಯಾಗಿದ್ದಾಗ ಮರಳುಗಾರಿಕೆಯಲ್ಲಿ ಹಲವು ಅಕ್ರಮಗಳನ್ನು ಎಸಗಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎನ್‌. ಜೈರಾಜ್‌ ಶೆಟ್ಟಿಹೇಳಿದ್ದಾರೆ.

ಮಂಗಳೂರು(ಸೆ.09): ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದು, ಐಎಎಸ್‌ ಸೇವೆಗೆ ರಾಜೀನಾಮೆ ನೀಡಿರುವ ದಕ್ಷ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರ ಮೇಲೆ ಜಿಲ್ಲಾ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಇದೀಗ ರಾಜೀನಾಮೆಯ ಬಳಿಕ ಅವ್ಯವಹಾರದ ಆರೋಪ ಹೊರಿಸಿದೆ.

ಸಸಿಕಾಂತ್‌ ಸೆಂಥಿಲ್‌ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಮರಳುಗಾರಿಕೆಯಲ್ಲಿ ಹಲವು ಅಕ್ರಮಗಳನ್ನು ಎಸಗಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಒಕ್ಕೂಟದ ಅಧ್ಯಕ್ಷ ಎನ್‌. ಜೈರಾಜ್‌ ಶೆಟ್ಟಿಹೇಳಿದ್ದಾರೆ.

ಟೆಂಡರ್‌ನಲ್ಲಿ ಅಕ್ರಮ:

ದ.ಕ. ಜಿಲ್ಲೆಯಲ್ಲಿ ಮರಳು ಸಾಗಾಟ ಮಾಡುವ ಲಾರಿಗಳಿಗೆ ಜಿಪಿಎಸ್‌ ಅಳವಡಿಸುವ ಟೆಂಡರ್‌ನ್ನು ಉಡುಪಿ ಜಿಲ್ಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿದ ಬೆಂಗಳೂರಿನ ಟಿ4ಯು ಸರ್ವಿಸ್‌ ಪ್ರೈ.ಲಿ. ಸಂಸ್ಥೆಗೆ 2017ರಲ್ಲಿ ನೀಡಿದ್ದಾರೆ. ಇದರ ಟೆಂಡರ್‌ ಪಾರದರ್ಶಕವಾಗಿ ನಡೆದಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ 1999ರ ಸ್ಪಷ್ಟಉಲ್ಲಂಘನೆ ಇದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸ್ಯಾಂಡ್‌ ಬಜಾರ್‌ ಕಾನೂನು ಬಾಹಿರ:

ಸರ್ಕಾರದ ಅಧಿಕೃತ ಆದೇಶವಿಲ್ಲದೆ ಜಿಲ್ಲೆಯಲ್ಲಿ ಮರಳು ಸರಬರಾಜು ಮತ್ತು ನಿಯಂತ್ರಣಕ್ಕೆ ‘ಸ್ಯಾಂಡ್‌ ಬಜಾರ್‌’ ಎನ್ನುವ ಆ್ಯಪ್‌ ಅಳವಡಿಸಿದ್ದು ಕಾನೂನು ಬಾಹಿರ. ಈ ಆ್ಯಪ್‌ ದುರುಪಯೋಗವಾಗುತ್ತಿದೆ. ದುಬಾರಿ ಬೆಲೆಯಲ್ಲಿ ಮರಳು ಮಾರಾಟವಾಗುತ್ತಿದ್ದು, ಮತ್ತೆ ಅಭಾವ ಸೃಷ್ಟಿಯಾಗಿದೆ. ಮರಳು ಜಿಲ್ಲಾ ಸಮಿತಿ ನಿಗದಿಪಡಿಸಿದ ದರದಲ್ಲಿ ದೊರೆಯದಂತಾಗಿದೆ. ಆ್ಯಪ್‌ ಅಳವಡಿಕೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಬಗ್ಗೆ ತನಿಖೆಯಾಗಬೇಕು ಎಂದು ಜೈರಾಜ್‌ ಆಗ್ರಹಿಸಿದರು.

ಹೂಳೆತ್ತುವಲ್ಲಿ ಅಕ್ರಮ:

ತುಂಬೆ ಡ್ಯಾಮ್‌ ಹೂಳೆತ್ತುವ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿದೆ. ಜಂಟಿ ಉದ್ಯಮಕ್ಕೆ ಅವಕಾಶ ನೀಡಿರುವುದು, ನಿಗದಿಪಡಿಸಿದ ಯಂತ್ರೋಪಕರಣಗಳ ದಾಖಲೆ ಇಲ್ಲದಿರುವುದು, ಕಾಮಗಾರಿ ಪೂರ್ಣಗೊಳಿಸಿದ ದೃಢೀಕರಣ ದಾಖಲೆ ಇಲ್ಲದಿರುವುದರಿಂದ ಈ ಟೆಂಡರ್‌ ಲೋಪದೋಷಗಳಿಂದ ಕೂಡಿದೆ ಎಂದರು.

ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ: ಸೆಂಥಿಲ್

ಸಸಿಹಿತ್ಲುನಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕ್ಕಾಗಿ ಹೂಳೆತ್ತಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಮೆಟ್ರಿಕ್‌ ಟನ್‌ ಮರಳನ್ನು 2017ರ ಜುಲೈ 16ರಂದು ಟೆಂಡರ್‌ ಪ್ರಕಟಿಸಿ ಮರುದಿನ ಜು.17ರಂದು ಕೊನೆಯ ದಿನ ಎಂದು ಘೋಷಿಸಿ ಪಾರದರ್ಶಕತೆ ಉಲ್ಲಂಘಿಸಿದ್ದಾರೆ. ಮರಳು ವಿಲೇವಾರಿಗೆ ನಿರ್ದೇಶನ ನೀಡಿ ಒಂದೇ ವಾರದಲ್ಲಿ ಮರಳು ರವಾನಿಸಲು ಅವಕಾಶ ನೀಡಿರುವುದು ಅಕ್ರಮ ಎಂದು ಜೈರಾಜ್‌ ಆರೋಪಿಸಿದರು.

ಸೆಂಥಿಲ್‌ ಅವರ ನಿರ್ಧಾರಗಳಿಂದಾಗಿ 2,500 ರಿಂದ 3 ಸಾವಿರ ರು.ಗೆ ದೊರಕುತ್ತಿದ್ದ ಮರಳು 8ರಿಂದ 14 ಸಾವಿರ ರು.ಗೆ ಏರಿಕೆಯಾಗಿ ಬಿಲ್ಡರ್‌ಗಳು, ಕಾರ್ಮಿಕರು, ನಾಗರಿಕರು ಪರಿತಪಿಸುವವಂತಾಗಿದೆ. ಈ ಎಲ್ಲ ಹಗರಣಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಲೋಕಾಯುಕ್ತ ಮತ್ತು ಸಂಬಂಧಪಟ್ಟಪ್ರಾಧಿಕಾರಕ್ಕೂ ದೂರು ನೀಡಲಾಗುವುದು ಎಂದರು.

ಮಂಗಳೂರು: ಸೆಂಥಿಲ್ ಭೇಟಿಗೆ ಅಧಿಕಾರಿ, ಸಿಬ್ಬಂದಿ ದಂಡು..!

ಒಕ್ಕೂಟದ ಪ್ರಮುಖರಾದ ಸುರೇಂದ್ರ ಕಂಬಳಿ, ಗೋಪಾಲಕೃಷ್ಣ ಭಟ್‌, ಹಲ್ಯಾರ್‌ ಇಕ್ಬಾಲ್‌, ಸುನಿಲ್‌ ಫರ್ನಾಂಡಿಸ್‌, ಯೂಸುಫ್‌ ಉಳಾಯಿಬೆಟ್ಟು, ಬಿ.ಎಸ್‌. ಚಂದ್ರು ಇದ್ದರು.

click me!