BJP ಕಾರ್ಯಕರ್ತೆಯರು ಮಾಸ್ಕ್ ತಯಾರಿಕೆಯಲ್ಲಿ ಫುಲ್ ಬ್ಯುಸಿ

By Kannadaprabha NewsFirst Published Apr 12, 2020, 10:06 AM IST
Highlights

ಲಾಕ್‌ಡೌನ್‌ ಮುಕ್ತಾಯ ಬಳಿಕ ಜನತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಹಾಕಿಕೊಂಡೇ ಸಂಚರಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಾಸ್ಕ್‌ ತಯಾರಿಸುವ ಕೆಲಸ ಆರಂಭಿಸಿದೆ.

ಮಂಗಳೂರು(ಏ.12): ಲಾಕ್‌ಡೌನ್‌ ಮುಕ್ತಾಯ ಬಳಿಕ ಜನತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಹಾಕಿಕೊಂಡೇ ಸಂಚರಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಾಸ್ಕ್‌ ತಯಾರಿಸುವ ಕೆಲಸ ಆರಂಭಿಸಿದೆ.

ಸಭೆ, ಸಮಾರಂಭ, ಪಕ್ಷ ಸಂಘಟನೆ ಎಂದು ಸುತ್ತಾಡುತ್ತಿದ್ದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಈಗ ಲಾಕ್‌ಡೌನ್‌ ಅವಧಿಯಲ್ಲಿ ಮಾಸ್ಕ್‌ ತಯಾರಿಯಲ್ಲಿ ಬ್ಯೂಸಿ ಆಗಿದ್ದಾರೆ. ಹೊಲಿಗೆ ಯಂತ್ರ ಇರುವ ಕಾರ್ಯಕರ್ತೆಯರು ತಮ್ಮ ಮನೆಗಳಲ್ಲೇ ಮಾಸ್ಕ್‌ ತಯಾರಿಸಿದರೆ, ಉಳಿದವರು ವೃತ್ತಿಪರ ಟೈಲರ್‌ಗಳಿಂದ ಮಾಸ್ಕ್‌ ಸಿದ್ಧಪಡಿಸುತ್ತಿದ್ದಾರೆ.

ಈಗ ಲಾಕ್‌ಡೌನ್ ನಡುವೆಯೂ ಮೀನು ಸವಿಯಬಹುದು..!

1 ಮೀಟರ್‌ ಬಟ್ಟೆಯಲ್ಲಿ 12 ಮಾಸ್ಕ್‌: ಒಂದು ಮೀಟರ್‌ ಬಟ್ಟೆಯಲ್ಲಿ ಗರಿಷ್ಠ 12 ಮಾಸ್ಕ್‌$ತಯಾರಿಸುತ್ತಿದ್ದಾರೆ. ಮೆಡಿಕಲ್‌ಗಳಲ್ಲಿ ಸಿಗುವ ಮಾಸ್ಕ್‌ನಂತೆಯೇ ಈ ಮಾಸ್ಕ್‌ನ್ನು ತಯಾರಿಸಲಾಗಿದೆ. ಈಗಾಗಲೇ ಏಳು ಸಾವಿರ ಮಾಸ್ಕ್‌ಗಳನ್ನು ಸಿದ್ಧಪಡಿಸಿ ಹಂಚಿಕೆ ಮಾಡಲಾಗಿದೆ. ಇನ್ನೂ 10 ಸಾವಿರಕ್ಕೂ ಮಾಸ್ಕ್‌ಗಳನ್ನು ತಯಾರಿಸಿ ಎಲ್ಲ ಮನೆಗಳಿಗೆ ಹಂಚಲು ಮಹಿಳಾ ಮೋರ್ಚಾ ತೀರ್ಮಾನಿಸಿದೆ. ಮನೆಯಲ್ಲಿರುವ ಶುಭ್ರ ಬಟ್ಟೆಯಿಂದ ಅಥವಾ ಅಂಗಡಿಯಿಂದ ತರಿಸಿದ ಹೊಸ ಬಟ್ಟೆಯನ್ನು ಮಾಸ್ಕ್‌ ತಯಾರಿಗೆ ಬಳಸುತ್ತಾರೆ. ಸುಮಾರು 700ಕ್ಕೂ ಅಧಿಕ ಮಹಿಳೆಯರು ಈಗ ಮಾಸ್ಕ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿದ್ಧಪಡಿಸಿದ ಈ ಮಾಸ್ಕ್‌ಗಳನ್ನು ಪ್ರತಿ ಕುಟುಂಬಕ್ಕೂ ಉಚಿತವಾಗಿ ಕಾರ್ಯಕರ್ತರೇ ಹಂಚುತ್ತಿದ್ದಾರೆ. ಸಾಮಾಜಿಕ ಅಂತರಕ್ಕೆ ಭಂಗ ಬಾರದಂತೆ ಹಾಗೂ ಲಾಕ್‌ಡೌನ್‌ ನಿಯಮ ಮೀರದಂತೆ ಹಂಚಿಕೆ ಕಾರ್ಯ ನಡೆಸುತ್ತಿದ್ದಾರೆ. ಇದು ಬಟ್ಟೆಯಲ್ಲಿ ಮಾಡಿರುವ ತ್ರಿಸ್ತರದ ಮಾಸ್ಕ್‌ ಆಗಿರುವುದರಿಂದ ತೊಳೆದು ಮತ್ತೆ ಉಪಯೋಗಿಸಲು ಸಾಧ್ಯವಾಗುತ್ತದೆ.

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..!

ವಿಡಿಯೋ ಪಾಠ: ಮಾಸ್ಕ್‌ ತಯಾರಿಸಲು ಮಹಿಳೆಯರಿಗೆ ನೆರವಾದದ್ದು ವಿಡಿಯೋ ಪಾಠ. ಮಾಸ್ಕ್‌ ತಯಾರಿಕೆಯ ಉಸ್ತುವಾರಿ ವಹಿಸಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಗಳೂರಿನ ಪೂಜಾ ಪೈ ಅವರು ಲಾಕ್‌ಡೌನ್‌ ಕಾರಣ, ಮನೆಯಿಂದಲೇ ವಿಡಿಯೋ ಮೂಲಕ ಮಾಸ್ಕ್‌ ತಯಾರಿಸುವ ವಿಧಾನವನ್ನು ಎಲ್ಲರಿಗೆ ಕಳುಹಿಸಿದ್ದರು. ಅದನ್ನೇ ನೋಡಿಕೊಂಡು ಮಹಿಳಾ ಕಾರ್ಯಕರ್ತೆಯರು ಮಾಸ್ಕ್‌ ತಯಾರು ಮಾಡುತ್ತಿದ್ದಾರೆ.

ಮಾಸ್ಕ್‌ ತಯಾರಿಗೆ ಈಗ ಬಟ್ಟೆಕೊರತೆ

ಜಿಲ್ಲೆಯ ಎಲ್ಲ ಮಹಿಳಾ ಕಾರ್ಯಕರ್ತೆಯರ ಮನೆಗಳಲ್ಲಿ ಮಾಸ್ಕ್‌ ತಯಾರಿ ಆರಂಭವಾಗಿರುವುದರಿಂದ ಈಗ ಬಟ್ಟೆಯ ಕೊರತೆ ತಲೆದೋರಿದೆ. ಮನೆಯಲ್ಲಿದ್ದ ಹೊಸ ಬಟ್ಟೆ, ಶುಭ್ರ ಬಟ್ಟೆ, ಅಳಿದುಳಿದ ದಾಸ್ತಾನು ಬಟ್ಟೆಗಳೆಲ್ಲ ಖಾಲಿಯಾಗುತ್ತಾ ಬರುತ್ತಿವೆ. ಹೊಸ ಬಟ್ಟೆಯನ್ನು ಖರೀದಿಸಲು ಅಂಗಡಿಗಳನ್ನು ತೆರೆಯುವಂತಿಲ್ಲ. ಹಾಗಾಗಿ ಲಾಕ್‌ನ್‌ ಮುಗಿದ ಮೇಲೆ ಇನ್ನಷ್ಟುಮಾಸ್ಕ್‌ಗಳನ್ನು ಸಿದ್ಧಪಡಿಸಲು ಸಾಧ್ಯ. ಹೊಸ ಬಟ್ಟೆಗಳನ್ನು ಖರೀದಿಸಿ ಕೊಡಲು ಅನೇಕರು ಮುಂದೆ ಬಂದಿದ್ದರೂ ಲಾಕ್‌ಡೌನ್‌ ನಿಯಮ ಅಡ್ಡಿಯಾಗಿದೆ.

2ನೇ ಹಂತದ ಲಾಕ್‌ಡೌನ್ ವಿಭಿನ್ನ: ಕರ್ನಾಟಕದಲ್ಲಿ ಹೇಗಿರಲಿದೆ..?

ಪ್ರಧಾನಿಯರ ಆಶಯದಂತೆ ಮಹಿಳಾ ಕಾರ್ಯಕರ್ತೆಯರು ಮಾಸ್ಕ್‌ ಸಿದ್ಧಪಡಿಸುವ ಕಾಯಕಕ್ಕೆ ಇಳಿದಿದ್ದೇವೆ. ನಾವು ಸಿದ್ಧಪಡಿಸಿದ ಎಲ್ಲ ಮಾಸ್ಕ್‌ಗಳನ್ನು ಜಿಲ್ಲೆಯ ಜನತೆಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದನ್ನು ಎಲ್ಲ ಮನೆಗಳಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಶಾಸಕರು ಕೂಡ ನಮ್ಮ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಕಾರ್ಯದರ್ಶಿ ಪೂಜಾ ಪೈ ತಿಳಿಸಿದ್ದಾರೆ.

-ಆತ್ಮಭೂಷಣ್‌

click me!