ಮಂಗಳೂರು ಬೆಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಮಣ್ಣು ಕುಸಿದು ಬಿದ್ದಿದ್ದು, ಮೂರನೇ ದಿನವೂ ಸಂಚಾರ ಸ್ಥಗಿತವಾಗಿದೆ. ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣ-ಸಕಲೇಶಪುರ ನಡುವಿನ ಸಿರಿಬಾಗಿಲು ಪರಿಸರದಲ್ಲಿ ಮತ್ತೆ ಎರಡು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ.ಇದರಿಂದಾಗಿ ಮಂಗಳೂರು- ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ.
ಮಂಗಳೂರು(ಆ.09): ಸುಬ್ರಹ್ಮಣ್ಯ ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಗುರುವಾರವೂ ಗುಡ್ಡ ಕುಸಿದು ಬಿದ್ದಿದೆ.
ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣ-ಸಕಲೇಶಪುರ ನಡುವಿನ ಸಿರಿಬಾಗಿಲು ಪರಿಸರದಲ್ಲಿ ಮತ್ತೆ ಎರಡು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ.ಇದರಿಂದಾಗಿ ಮಂಗಳೂರು- ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ. ನೆಟ್ಟಣ ರೈಲು ನಿಲ್ದಾಣದ ಸಮೀಪದ ಕಾಪಾರು ಎಂಬಲ್ಲಿ ಹಾಗೂ ಎಡಕಮರಿ ಸಮೀಪ ಗುರುವಾರ ಹಳಿಯ ಮೇಲೆ ಗುಡ್ಡಕುಸಿಯಿತು.
ಇದರಿಂದಾಗಿ ಗುರುವಾರ ಕೂಡಾ ಈ ಮಾರ್ಗದಲ್ಲಿ ಹಗಲು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಎಡಕಮರಿ ಸಮೀಪ ಹಳಿಯ ಕೆಳ ಅಂಚಿನಲ್ಲಿ ನೀರಿನ ರಭಸದಿಂದಾಗಿ ಮಣ್ಣು ಕುಸಿದಿದೆ.
ಸಂಚಾರ ಸ್ಥಗಿತ:
ಗುರುವಾರ ನೆಟ್ಟಣ ರೈಲು ನಿಲ್ದಾಣದ ಸಮೀಪದ ಕಾಪಾರು ಎಂಬಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿತ್ತು.ಇದನ್ನು ಕಾಯಾಚರಣೆ ಮೂಲಕ ತೆರವುಗೊಳಿಸಲಾಯಿತು.ಆದರೆ ವಿಪರೀತ ಮಳೆಯ ಕಾರಣ ಎಡಕುಮೇರಿ ರೈಲು ನಿಲ್ದಾಣದ ಸಮೀಪ ದೂರ ಸಂಖ್ಯೆ 66/600-700,67ರಲ್ಲಿ ಮತ್ತೆ ಎರಡು ಕಡೆ ಗುಡ್ಡವು ಕುಸಿದು ಬೃಹತ್ ಪ್ರಮಾಣದ ಮಣ್ಣು ಹಳಿಯ ಮೇಲೆ ಬಿದ್ದಿದೆ.
ಸಿರಿಬಾಗಿಲು ಸಮೀಪದ 86ರಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ.ಅಲ್ಲದೆ ಎಡಕುಮೇರಿ ಸಮೀಪ ಹಳಿಯ ಕೆಳ ಅಂಚಿನಲ್ಲಿ ನೀರಿನ ರಭಸದಿಂದಾಗಿ ಮಣ್ಣು ಕುಸಿದಿದೆ. ಹೀಗಾಗಿ ಸತತ ಮೂರನೇ ದಿನ ರೈಲು ಸಂಚಾರ ಸ್ಥಗಿತಗೊಂಡಿತು. ಈ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತಷ್ಟುಕಡೆ ಮಣ್ಣು ಕುಸಿಯುವ ಆತಂಕವಿದೆ.
ತೆರವು ಕಾರ್ಯಾಚರಣೆ:
ಈ ಘಟನೆ ತಿಳಿದ ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆಯು ತಕ್ಷಣ ತೆರವು ಕಾರ್ಯ ಆರಂಭಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಸಂಖ್ಯೆ 86/100 ಮತ್ತು 83ರ ಆಸುಪಾಸಿನಲ್ಲಿ ಮೂರು ಕಡೆ, ದೂರ ಸಂಖ್ಯೆ 90/900 ಮತ್ತು 90/00ಯ ಎರಡು ಕಡೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಅಧಿಕ ಮಳೆ ಮತ್ತು ಆಗಾಗ ಮಣ್ಣುಗಳು ಹಳಿಯ ಮೇಲೆ ಬೀಳುತ್ತಿರುವುದು ಕಾರ್ಮಿಕರ ಕೆಲಸಕ್ಕೆ ಅಡ್ಡಿಯಾಗುತ್ತಿದೆ.