ಪತಿಯ ಸಾವಿನ ನಡುವೆ ಅವಳಿ ಮಕ್ಕಳಿಗೆ ಜನ್ಮ

Kannadaprabha News   | Asianet News
Published : Oct 06, 2020, 11:55 AM IST
ಪತಿಯ ಸಾವಿನ ನಡುವೆ ಅವಳಿ ಮಕ್ಕಳಿಗೆ ಜನ್ಮ

ಸಾರಾಂಶ

ಪತಿಯ ಸಾವಿನ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳು ಜನಿಸಿದ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ದುಃಖದಲ್ಲಿ ಮುಳುಗಿದೆ.

ಪಾಂಡವಪುರ (ಅ.06):  ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಪತಿ ಶವವಾಗಿ ವಾಪಸ್‌ ಬಂದರೆ, ನಂತರದ ಒಂದು ಗಂಟೆಯಲ್ಲೇ ಮೃತನ ಪತ್ನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಸಂಭ್ರಮದಲ್ಲಿ ತೇಲಾಡಬೇಕಿದ್ದ ಕುಟುಂಬ ಮನೆಯ ಯಜಮಾನನ್ನು ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದ್ದು ವಿಧಿಯ ವಿಪರ್ಯಾಸ.

ತಾಲೂಕಿನ ಅರಳಕುಪ್ಪೆಯ ಸೋಮಶೇಖರ್‌ (28) ಮೃತರು. ಇವರು ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ಶುಕ್ರವಾರ (ಮೂರು ದಿನಗಳ ಹಿಂದೆ) ಸಂಜೆ ಗ್ರಾಮದ ಹೊರವಲಯದ ಪ್ರದೇಶಕ್ಕೆ ತೆರಳಿ ವಿಸಿ ನಾಲೆಯ ಹತ್ತಿರ ಹೋಗಿದ್ದಾರೆ. ನಾಲೆಯಲ್ಲಿ ಈಜುವ ವೇಳೆ ಸೋಮಶೇಖರ್‌ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಈತನ ಸಾವಿನ ಬಳಿಕ ಸ್ನೇಹಿತರು ತಲೆಮರೆಸಿಕೊಂಡಿದ್ದರು. ಶನಿವಾರ ಬೆಳಗ್ಗೆ ಸೋಮಶೇಖರ್‌ ಮೃತದೇಹ ಪತ್ತೆಯಾಗಿದ್ದು, ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು.

ಗಂಡು ಮಗುಗಾಗಿ ಪತ್ನಿ ಹೊಟ್ಟೆ ಸೀಳಿದ್ದ ಪ್ರಕರಣ: ಗರ್ಭದಲ್ಲಿತ್ತು ಗಂಡು! ..

ಸೋಮಶೇಖರ್‌ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಗಾಗಿ ಅದೇ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿಯ ಸಾವಿನ ವಿಷಯ ಬರಸಿಡಿಲಿನಂತೆ ಬಡಿಯಿತು. ಹೆರಿಗೆ ನೋವಿನ ನಡುವೆಯೂ ಪತಿಯ ಶವ ನೋಡಬೇಕು ಎಂದು ಹಠ ಹಿಡಿದು ಅಂತಿಮ ದರ್ಶನ ಪಡೆದಳು. ಪತಿಯ ಮುಖ ನೋಡಿದ ಒಂದು ಗಂಟೆಯೊಳಗೆ ಆಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಅವಳಿ ಮಕ್ಕಳ ಹುಟ್ಟಿನಿಂದ ಖುಷಿಯಲ್ಲಿರಬೇಕಿದ್ದ ಕುಟುಂಬವನ್ನು ದುಃಖ ಆವರಿಸಿತ್ತು.

ಸೋಮಶೇಖರ್‌ ಸಾವಿನ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!