ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್

By Kannadaprabha News  |  First Published Dec 5, 2020, 10:07 AM IST

ರಾಜ್ಯ ರಾಜಕೀಯದಲ್ಲಿ  ಇದೀಗ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೀಗ ಇತ್ತ ಅದೃಷ್ಟದ ಹುಡುಕಾಟದಲ್ಲಿ ರಾಜಕೀಯ ನಡೆಯುತ್ತಿದೆ.


ವರದಿ :  ಮಂಡ್ಯ ಮಂಜುನಾಥ

 ಮಂಡ್ಯ (ಡಿ.05):  ಹಳ್ಳಿ ಅಖಾಡ ದಿನೇ ದಿನೇ ರಂಗೇರುತ್ತಿದೆ. ರಾಜಕೀಯ ಪ್ರವೇಶಿಸಲಿಚ್ಚಿಸಿರುವ ಆಕಾಂಕ್ಷಿಗಳು ಸ್ಪರ್ಧೆಗೆ ಬಿರುಸಿನ ಸಿದ್ಧತೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವವರು ಅದೃಷ್ಟದ ಚಿಹ್ನೆಗಳನ್ನು ಆಯ್ಕೆ ಮಾಡುವುದರಲ್ಲಿ ತಲ್ಲೀನರಾಗಿದ್ದು, ಮತದಾರರು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ, ಹೆಚ್ಚು ಪ್ರಸಿದ್ಧಿ ಪಡೆದಿರುವ ಚಿಹ್ನೆಗಳನ್ನು ಆರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.

Tap to resize

Latest Videos

ಕಳೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ತಮ್ಮ ಗೆಲುವಿನ ಸಂಕೇತವಾಗಿ ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಚುನಾವಣೆಯಲ್ಲಿ ಸುಮಲತಾ ಗೆಲುವಿನೊಂದಿಗೆ ಆ ಚಿಹ್ನೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

ರಾಜ್ಯ ಚುನಾವಣಾ ಆಯೋಗ 194 ಮುಕ್ತ ಚಿಹ್ನೆಗಳ ಪಟ್ಟಿಪ್ರಕಟಿಸಿದೆ. ಅದರಲ್ಲಿ ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆಯೂ ಸೇರಿಕೊಂಡಿದೆ. ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರು ಈ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿಲ್ಲ. ಏಕೆಂದರೆ, ಸುಮಲತಾ ಅಂಬರೀಶ್‌ ಬೆಂಬಲಿಗರೆಂದು ಗುರುತಿಸಿಕೊಳ್ಳಬೇಕಾಗುತ್ತದೆಂಬ ಕಾರಣಕ್ಕೆ ಆ ಗುರುತಿನ ಆಯ್ಕೆಗೆ ಅಭ್ಯರ್ಥಿಗಳು ಬೆಚ್ಚುತ್ತಿದ್ದಾರೆ. ಹಾಗಾಗಿ ಸುಮಲತಾ ಅಂಬರೀಶ್‌ ಬೆಂಬಲಿಗರಾಗಿ ಅಖಾಡ ಪ್ರವೇಶಿಸುವವರು ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ.

ಸಂಸದೆ ಸುಮಲತಾಗೆ ತಿಳುವಳಿಕೆ ಇಲ್ಲವೆಂದ ಮುಖಂಡ ...

ಲೋಕಸಭಾ ಸಾರ್ವತ್ರಿಕ ಚುನಾವಣೆ ಬಳಿಕ ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆ ಜನಮಾನಸದೊಳಗೆ ಹೆಚ್ಚು ಪ್ರಚಲಿತದಲ್ಲಿದೆ. ಜನರು ಸುಲಭವಾಗಿ ಗುರುತಿಸಬಹುದಾದ ಚಿಹ್ನೆಯೂ ಆಗಿರುವುದರಿಂದ ವಿಶೇಷವಾಗಿ ಮಹಿಳೆಯರಿಗೆ ಈ ಚಿಹ್ನೆ ಹೆಚ್ಚು ಪರಿಚಯವಿರುವುದರಿಂದ ಈ ಚಿಹ್ನೆ ಆಯ್ಕೆಗೆ ಅಭ್ಯರ್ಥಿಗಳು ಹೆಚ್ಚಿನ ಒಲವು ತೋರುವರೆಂಬ ಮಾತುಗಳು ಕೇಳಿಬರುತ್ತಿವೆ.

ಮೊದಲ ಚುನಾವಣೆಯಲ್ಲಿಯೇ ಸುಮಲತಾ ಅವರಿಗೆ ಗೆಲುವಿನ ಅದೃಷ್ಟವನ್ನು ತಂದುಕೊಟ್ಟಿರುವ ಚಿಹ್ನೆಯಾಗಿರುವ ಕಹಳೆ ಊದುತ್ತಿರುವ ಮನುಷ್ಯ ತಮಗೂ ಗೆಲುವಿನ ಅದೃಷ್ಟತಂದುಕೊಡಬಹುದೆಂಬ ನಂಬಿಕೆ ಅಭ್ಯರ್ಥಿಗಳಾಗುವವರಲ್ಲಿದೆ. ಹಾಗಾಗಿ ಈ ಚಿಹ್ನೆಯಡಿ ಸ್ಪರ್ಧಿಸಲು ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ.

ಗ್ರಾಪಂ ಚುನಾವಣೆ ರಾಜಕೀಯ ಪಕ್ಷದ ಬೆಂಬಲದ ಜೊತೆಗೆ ಸ್ಥಳೀಯವಾಗಿರುವ ಸಂಬಂಧ, ನೆಂಟಸ್ಥಿಕೆ, ಜನಪರತೆ ಆಧಾರದ ಮೇಲೆ ಸೋಲು- ಗೆಲುವನ್ನು ನಿರ್ಧರಿಸುತ್ತದೆ. ಇದರೊಂದಿಗೆ ಚಿಹ್ನೆಯ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಅಭ್ಯರ್ಥಿಗಳು ಆರಿಸಿಕೊಳ್ಳುವ ಚಿಹ್ನೆ ಜನಪ್ರಿಯತೆ ಮತ್ತು ಆಕರ್ಷಕವಾಗಿದ್ದರೆ ಗೆಲುವು ಇನ್ನಷ್ಟುಸುಲಭವಾಗಲಿದೆ ಎಂಬುದರ ಮೇಲೂ ಹಲವರಿಗೆ ನಂಬಿಕೆ ಇದೆ. ಹೀಗಾಗಿ ಮುಕ್ತ ಚಿಹ್ನೆಗಳೊಳಗೆ ಸೇರಿಕೊಂಡಿರುವ ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆಯನ್ನು ಸುಲಭವಾಗಿ ಮತದಾರರಿಗೆ ನೆನಪಿಸಬಹುದು. ಆ ಚಿಹ್ನೆಯನ್ನು ತೋರಿಸಿ ಸುಮಲತಾ ಸ್ಪರ್ಧೆಯನ್ನು ನೆನಪಿಸಬಹುದು. ಮಹಿಳಾ ಮತದಾರರ ವೋಟುಗಳನ್ನು ಸುಲಭವಾಗಿ ಸೆಳೆಯಬಹುದೆಂಬ ಲೆಕ್ಕಾಚಾರವೂ ಇದರ ಹಿಂದೆ ಅಡಗಿದೆ. ಈ ಗುರುತು ವಿಜಯದ ಘೋಷದ ಸಂಕೇತವನ್ನು ಸೂಚಿಸುವುದರಿಂದ ಅಭ್ಯರ್ಥಿಗಳು ಹೆಚ್ಚು ಚಿಹ್ನೆ ಮೇಲೆ ಆಸಕ್ತರಾಗಬಹುದೆಂಬ ಭಾವನೆಯೂ ಇದೆ.

ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆಯನ್ನು ಹೊರತುಪಡಿಸಿದರೆ ಆಟೋ, ಟೀವಿ, ವಜ್ರ, ಕ್ಯಾಮೆರಾ, ಗ್ಯಾಸ್‌ ಒಲೆ, ಕರಣಿ, ಕುಕ್ಕರ್‌, ತೆಂಗಿನ ತೋಟ, ಬ್ಯಾಟರಿ, ಟೆಲಿಫೋನ್‌, ಟ್ರ್ಯಾಕ್ಟರ್‌ ಓಡಿಸುತ್ತಿರುವ ರೈತ, ಉಂಗುರ ಸೇರಿದಂತೆ ಇನ್ನು ಕೆಲವು ಗುರುತುಗಳು ಹೆಚ್ಚು ಪ್ರಚಲಿತದಲ್ಲಿವೆ. ಇವುಗಳ ಆಯ್ಕೆಗೂ ಹಲವರು ಒಲವು ತೋರಬಹುದು. ಇನ್ನು ಟ್ಯೂಬ್‌ಲೈಟ್‌, ಕತ್ತರಿಯಂತಹ ಚಿಹ್ನೆಗಳು ಬೇರೆ ಅರ್ಥ ಸೂಚಿಸುವುದರಿಂದ ಅಭ್ಯರ್ಥಿಗಳು ಇವುಗಳ ಆಯ್ಕೆಗೆ ಸಾಮಾನ್ಯವಾಗಿ ಹೆಚ್ಚು ಒಲವು ತೋರುವುದಿಲ್ಲ.

ಹಲವರಿಗೆ ನಿರಾಸೆ

ಬೇರೆ ರಾಜ್ಯಗಳಲ್ಲಿ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳು ಕಾರು, ಬೈಸಿಕಲ್‌, ಸೀಲಿಂಗ್‌ ಫ್ಯಾನ್‌, ಆನೆ, ತೆಂಗಿನಕಾಯಿ, ನೇಗಿಲು, ಬಿಲ್ಲು-ಬಾಣ, ಬಾಣ, ಕಿರೀಟ, ಏಣಿ, ತಕ್ಕಡಿ, ಉದಯಿಸುತ್ತಿರುವ ಸೂರ್ಯ, ಕೊಡೆ, ಎರಡು ಎಲೆಗಳು, ಕಾರು ಸೇರಿದಂತೆ ಹಲವು ಗುರುತುಗಳನ್ನು ಹೊಂದಿವೆ. ಇವು ಆಕರ್ಷಣೀಯ ಚುಹ್ನೆಗಳಾಗಿದ್ದರೂ ಗ್ರಾಪಂ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗುವವರಿಗೆ ನೀಡಲಾಗುವುದಿಲ್ಲ. ಇದು ಹಲವರಲ್ಲಿ ನಿರಾಸೆಯನ್ನೂ ಮೂಡಿಸಿದೆ.

ಅಭ್ಯರ್ಥಿಗಳು ಮುಕ್ತ ಚಿಹ್ನೆಗಳಲ್ಲಿರುವ ಗುರುತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯದಲ್ಲಿರುವ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ನೀಡಲಾಗಿರುವ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!