ಸಚಿವ ಹಾಲಪ್ಪ ಭೇಟಿ ಮಾಡಿದ ಸಂಸದೆ ಸುಮಲತಾ : ದೂರು

By Kannadaprabha NewsFirst Published Sep 5, 2021, 9:36 AM IST
Highlights
  • ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸಂಸದೆ ಸುಮಲತಾ  
  • ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಆಪತ್ತು ಎಂಬ ಆತಂಕ ಹಿನ್ನೆಲೆ
  • ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಉಪಸ್ಥಿತಿ

 ಬೆಂಗಳೂರು (ಸೆ.05): ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸಂಬಂಧ ಸಂಸದೆ ಸುಮಲತಾ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿ, ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಹಾಲಪ್ಪ ಆಚಾರ್‌ ಅವರನ್ನು ಭೇಟಿ ಮಾಡಿದ ಸುಮಲತಾ, ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಆಪತ್ತು ಎಂಬ ಆತಂಕ ಹಿನ್ನೆಲೆಯಲ್ಲಿ ಸಮಾಲೋಚನೆ ನಡೆಸಿದರು. ಈ ವೇಳೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಉಪಸ್ಥಿತರಿದ್ದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಸಿಂಹ ಸವಾಲು!

ಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಸಚಿವರ ಜತೆ ಚರ್ಚಿಸಲಾಗಿದೆ. ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮಂಡ್ಯದಲ್ಲಿ ಗಣಿ ಟಾಸ್ಕ್‌ಫೋರ್ಸ್‌ ತಂಡದ ಜತೆ ಪರಿಶೀಲನೆ ನಡೆದಿದೆ. ಬೇಬಿ ಬೆಟ್ಟ, ಕೆಆರ್‌ಎಸ್‌ ಸಂಬಂಧ ಸಭೆ ನಡೆಸಲು ಸಮಯ ಕೇಳಿದ್ದೇನೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೋರಾಟ ನಡೆಯುತ್ತಿದ್ದು, ಕದ್ದು ಮುಚ್ಚಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದರು.

ಅಭಿಷೇಕ್‌ ರಾಜಕೀಯ ಪ್ರವೇಶ ನೋಡೋಣ:  ನಟ ಅಭಿಷೇಕ್‌ ರಾಜಕೀಯ ಪ್ರವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಭಿಷೇಕ್‌ ಈಗ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನಕೊಟ್ಟಿದ್ದಾರೆ. ವಿಧಾನಸಭೆ ಚುನಾವಣೆಗೆ 20 ತಿಂಗಳು ಇದೆ. ಆಗ ನೋಡೋಣ ಏನಾಗಲಿದೆಯೋ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ, ಸದ್ಯಕ್ಕಂತೂ ಸಿನಿಮಾಗಳ ಕಡೆ ಗಮನಹರಿಸಿದ್ದಾರೆ ಎಂದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆಯೂ ಸಚಿವರ ಜತೆ ಚರ್ಚಿಸಲಾಗಿದೆ ಎಂದರು.

click me!