ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳದಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ಬಳಿಕ ಮಗನೂ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಂಡ್ಯ (ಫೆ.01): ಮೈಕ್ರೋ ಫೈನಾನ್ಸ್ ಸಾಲದಿಂದ ಮನೆಯನ್ನು ಜಪ್ತಿ ಮಾಡಿಕೊಂಡು ಮನೆಯಲ್ಲಿದ್ದವರನ್ನೆಲ್ಲಾ ಹೊರಗೆ ಹಾಕಿದ್ದರು. ಹೀಗಾಗಿ, ಕಳೆದ ನಾಲ್ಕೈದು ದಿನಗಳ ಹಿಂದೆ ತಾಯಿ ಪ್ರೇಮಾ ಎನ್ನುವವರು ವಿಷದ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಇದೀಗ ಅವರ ಮಗನೂ ಕೂಡ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ಹಿನ್ನೆಲೆಯಲ್ಲಿ ತಾಯಿ-ಮಗ ಇಬ್ಬರೂ ಸಾವಿಗೆ ಶರಣಾಗಿದ್ದಾರೆ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ತಾಯಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಬೆನ್ನಲ್ಲಿಯೇ ತೀವ್ರ ಮನನೊಂದಿದ್ದ ಮಗ ಮನೆಬಿಟ್ಟು ಹೋಗಿದ್ದನು. ಎಲ್ಲಿಗೆ ಹೋಗಿದ್ದಾನೆಂದು ತಿಳಿಯದೇ ಮನೆಯವರು ತಲೆ ಕೆಡಿಸಿಕೊಂಡಿದ್ದರು. ಆದರೆ, ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಳೆದ ನಾಲ್ಕು ದಿನದ ಹಿಂದೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮ ಸಾವನ್ನಪ್ಪಿದ್ದರು. ತಾಯಿ ಸಾವಿನ ಸುದ್ದಿ ತಿಳಿದು ಪುತ್ರ ಕೂಡ ತೀವ್ರವಾಗಿ ಮನನೊಂದಿದ್ದನು. ಇದರಿಂದ ರಂಜಿತ್ (31) ಹಲಗೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂರ್ನಾಲ್ಕು ದಿನದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದೆ. ಹಲಗೂರು ಕೆರೆಯಲ್ಲಿ ರಂಜಿತ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಯಿ ಪ್ರೇಮ ಆತ್ಮಹತ್ಯೆ ಮಾಡಿಕೊಂಡ ದಿನವೇ ರಂಜಿತ್ ಸಾವನ್ನಪ್ಪಿರುವ ಶಂಕೆಯಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅಂಗನವಾಡಿ ಸಹಾಯಕಿ ಬಲಿ!
ಮೈಕ್ರೋ ಫೈನಾನ್ಸ್ ಕಂಪನಿಗಳು ಮನೆ ಸೀಜ್ ಮಾಡಿದ್ದಕ್ಕೆ ಪ್ರೇಮ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ತಾಯಿಯ ಸಾವಿನ ಆಘಾತದಿಂದ ಮನನೊಂದಿದ್ದ ರಂಜಿತ್ ಅನಾರೋಗ್ಯದಿಂದ ಬಳಲುತ್ತಿದ್ದನು. ತನಗೆ ತಾಯಿ ಇದ್ದರೆ ಆರೋಗ್ಯ ಕಾಳಜಿ ಮಾಡುತ್ತಿದ್ದರು, ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದು ತನ್ನನ್ನು ಯಾರು ನೋಡಿಕೊಳ್ಳುತ್ತಾರೆ? ನಾನು ಯಾರಿಗೂ ಹೊರೆ ಆಗಬಾರದು. ಮುಂದಿನ ಜೀವನ ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಪ್ರೇಮ ಹಾಗೂ ರಂಜಿತ್ ಆತ್ಮಹತ್ಯೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ರಂಜಿತ್ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಮಹಿಳೆಯಿಂದ ಆತ್ಮಹತ್ಯೆ ಯತ್ನ
ಬೀದಿಗೆ ಬಿದ್ದ ಅನಾರೋಗ್ಯ ಪೀಡಿತ ಗಂಡ: ಇನ್ನು ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪ್ರೇಮಾ ಸಾಲ-ಸೋಲ ಮಾಡಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಗಂಡ ಹಾಗೂ ಅಂಗವಿಕಲ ಮಗನನ್ನು ಸಾಕುತ್ತಿದ್ದರು. ಆದರೆ, ಮೈಕ್ರೋ ಫೈನಾನ್ಸ್ ಕಂಪನಿಯರಿಂದ ಪಡೆದ 6 ಲಕ್ಷ ರೂ. ಸಾಲವನ್ನು ಪಾವತಿ ಮಾಡಿದರೂ, ಬಡ್ಡಿ ಎಲ್ಲವೂ ಸೇರಿ ಇನ್ನೂ 6 ಲಕ್ಷ ರೂ. ಕೊಡಿ ಎಂದು ಕಿರುಕುಳ ನೀಡುತ್ತಿದ್ದರು. ಕಳೆದ 3 ತಿಂಗಳಿಂದ ಸಾಲದ ಕಂತು ಕೊಡದ ಹಿನ್ನೆಲೆಯಲ್ಲಿ ಮನೆಯನ್ನು ಸೀಜ್ ಮಾಡಿ, ಎಲ್ಲರನ್ನೂ ಮನೆಯಿಂದ ಹೊರಗೆ ಹಾಕಿದ್ದರು. ನೆಂಟರಿಷ್ಟರ ಮನೆಯಲ್ಲಿದ್ದ ಪ್ರೇಮಾ ವಿಷದ ಮಾತ್ರೆ ಸೇವನೆ ಮಾಡಿದರೆ, ಇದೇ ವಿಚಾರ ತಿಳಿದ ಮಗ ಕೆರೆಗೆ ಹಾರಿ ಇಬ್ಬರೂ ಸಾವಿಗೀಡಾಗಿದ್ದಾರೆ. ಇದೀಗ ಅನಾರೋಗ್ಯಪೀಡಿತ ಗಂಡ ಮಾತ್ರ ಬೀದಿಗೆ ಬಿದ್ದಿದ್ದಾನೆ. ಪ್ರೇಮಾಗೆ ಒಬ್ಬ ಮಗಳಿದ್ದು, ಆಕೆ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.