
ಬಳ್ಳಾರಿ/ವಿಜಯನಗರ (ಫೆ.01): ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಲಿನಾಡು ಎಂದೇ ಖ್ಯಾತಿಯಾಗಿರುವ ಬಳ್ಳಾರಿಯಲ್ಲಿ ಬಿಸಿಲನ ಆರ್ಭಟ ಶುರುವಾಗಿದೆ. ಹೀಗಾಗಿ, ಕೆಲವೆಡೆ ಮೇವು ಬಣವೆಳು, ಗುಡಿಸಲು ಹಾಗೂ ಇತರೆ ಒಣ ವಸ್ತುಗಳ ಶೆಡ್‌ಗಳಿಗೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗುವ ಘಟನೆಗಳು ವರದಿ ಆಗುತ್ತಿವೆ. ಇದೀಗ 40 ಕುರಿಗಳಿದ್ದ ಹಟ್ಟಿ (ಕುರಿಗಳ ಶೆಡ್‌ಗೆ) ಬೆಂಕಿ ಬಿದ್ದಿದ್ದು, ಎಲ್ಲ ಕುರಿಗಳೂ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಬೆಂಕಿಯ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ. ಇದೀಗ ಕುರಿಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ನಲವತ್ತಕ್ಕೂ ಹೆಚ್ಚು ಕುರಿಗಳು ಬೆಂಕಿಗಾಹುತಿಯಾಗಿರೋ ಘಟನೆ ಕೂಡ್ಲಿಗಿ ತಾಲೂಕು ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಕುರಿ ಹಟ್ಟಿಯನ್ನು ಕಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದು, ಸಂಪೂರ್ಣವಾಗಿ ಒಣಗಿತ್ತು. ಗಡಿಸಲಿನ ರೀತಿ ಇದ್ದ ಕುರಿ ಶೆಡ್‌ಗೆ ಹೇಗೆ ಬೆಂಕಿ ತಾಗಿದೆಯೋ ಗೊತ್ತಿಲ್ಲ. ಆದರೆ, ಎಲ್ಲಾ ಕುರಿಗಳು ಕೂಡ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಒಂದೇ ಒಂದು ಕೂಡ ಬದುಕಿಲ್ಲ. ಇದರಿಂದ ಕುರಿಗಾಹಿ ವ್ಯಕ್ತಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ನೋವಾಗಿದೆ ಆದ್ರೆ ಪಕ್ಷ ಬಿಡೋಲ್ಲ, 2028ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ಗುರಿ: ಶ್ರೀರಾಮುಲು
ಇನ್ನು ಅಗಸರ ಶೇಖರಪ್ಪ ಎನ್ನುವವರಿಗೆ ಸೇರಿದ ಧವಸ ಧಾನ್ಯ ಒಕ್ಕಣೆ ಮಾಡುವ ಹಾಗೂ ಮೇವು ಸಂಗ್ರಹಣೆ ಮಾಡುವ ಕಣಕ್ಕೆ ಬೆಂಕಿ ತಗುಲಿದೆ. ಇದೇ ಕಣದ ಪಕ್ಕದಲ್ಲಿ ಕುರಿ ಹಟ್ಟಿಯನ್ನೂ ನಿರ್ಮಾಣ ಮಾಡಿ ಅದರಲ್ಲಿ 40 ಕುರಿಗಳನ್ನು ಬಿಡಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಈ ಕಣದಲ್ಲಿ ಯಾರೂ ಇಲ್ಲದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಪಕ್ಕದಲ್ಲಿದ್ದ ಕುರಿಗಳನ್ನು ಕಟ್ಟಿ ಹಾಕಿದ್ದ ಹಟ್ಟಿಗೂ ಬೆಂಕಿ ವ್ಯಾಪಿಸಿದೆ. ಯಾರು ಇಲ್ಲದೇ ಇರುವಾಗ ನಡೆದ ಘಟನೆ ಹಿನ್ನೆಲೆ ಎಲ್ಲಾ 40 ಕುರಿಗಳು ಸುಟ್ಟು ಹೋಗಿವೆ. 4 ಲಕ್ಷಕ್ಕೂ ಹೆಚ್ಚು ಬೆಲೆ ಬಾಳು ಕುರಿಗಳು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರಾದರೂ ಯಾವೊಂದು ಕುರಿಗಳು ಉಳಿದಿಲ್ಲ.