ಬೆಂಗಳೂರಿನಲ್ಲಿ ವಧು ತೋರಿಸುವ ನೆಪದಲ್ಲಿ ಯುವಕನಿಂದ 50 ಸಾವಿರ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ನಾಲ್ವರು ಮಹಿಳೆಯರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವೇಷ ಧರಿಸಿ ದಾಳಿ ನಡೆಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಬೆಂಗಳೂರು (ಫೆ.01): ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಜೀವನ ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ಯುವಕರು ಮದುವೆಗೆ ಹೆಣ್ಣು ಹುಡುಕುತ್ತಿರುತ್ತಾರೆ. ಆದರೆ, ಯಾರು ಬೇಕೆಂದರೆ ಅವರ ಬಳಿ ಹೆಣ್ಣು ಇದ್ದರೆ ಹುಡುಕಿಕೊಡಿ ಎಂದು ಹೇಳುವ ಮುನ್ನ ಹುಷಾರ್ ಆಗಿರಿ. ಏಕೆಂದರೆ, ಇಲ್ಲೊಬ್ಬ ಮಹಿಳೆ ನಿನಗೆ ಹೆಣ್ಣು ತೋರಿಸುವುದಾಗಿ ಹೇಳಿ ವೇಶ್ಯಾವಾಟಿಕೆಯ ಮನೆಗೆ ಕಳುಹಿಸಿ ಅವರೇ ಪೊಲೀಸ್ ವೇಷ ಧರಿಸಿಕೊಂಡು ಬಂದು ಬರೋಬ್ಬರಿ 50 ಸಾವಿರ ರೂ. ಹಣ ಸುಲಿಗೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವಧು ತೋರಿಸುವ ನೆಪದಲ್ಲಿ ಸುಲಿಗೆ ಮಾಡಲಾಗಿದೆ. ಯುವಕನೊಬ್ಬನ ಬಳಿ ನಿನಗೆ ಮದುವೆಯಾಗಲು ಹೆಣ್ಣು ತೋರಿಸುವುದಾಗಿ 50 ಸಾವಿರ ಸುಲಿಗೆ ಮಾಡಿದ್ದ ನಾಲ್ವರು ಮಹಿಳೆಯರು ಸೇರಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳು. ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಿತರಾಗಿದ್ದಳು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದು, ಮಂಜುಳಾ ಯುವಕನಿಗೆ ಹೆಣ್ಣು ಹುಡುಕಿ ಕೊಡುವುದಾಗಿ ಹೇಳಿದ್ದಳು.
ಜ.20ರಂದು ಮಂಜುಳಾ ಆ ಯುವಕನಿಗೆ ಕರೆ ಮಾಡಿ ಹುಡುಗಿ ಇದ್ದಾರೆ ಹೇಳಿ, ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ವಧು ತೋರಿಸುವುದಾಗಿ ಹೇಳಿದ್ದಾರೆ. ಆಗ ಯುವಕ ಜ.21ರಂದು ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಹೋಗಿದ್ದಾನೆ. ಆಗ ಹುಡುಗಿ ತೋರಿಸುವ ಶಾಸ್ತ್ರದ ವೇಳೆ ಯುವತಿ ಲೀಲಾವತಿ ಎಂಬಾಕೆಯನ್ನು ಯುವಕನಿಗೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಂತರ, ನೀನು ಟೀ ಮಾಡಿ ಕೊಡು ಎಂದು ಹೇಳಿದ ವಿಜಯಲಕ್ಷ್ಮೀ ಮನೆಯಿಂದ ಹೊರಗೆ ಹೋಗಿದ್ದಾಳೆ. ಆಗ ಮನೆಯಲ್ಲಿ ಯುವಕ, ಯುವತಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ಇದನ್ನೂ ಓದಿ: ಬೆಂಗಳೂರು: ಫೇಸ್‌ಬುಕ್‌ನಲ್ಲಿ ಸ್ನೇಹಿತನ ನಕಲಿ ಖಾತೆ ತೆರೆದು 1.5 ಲಕ್ಷ ಟೋಪಿ!
ಇದೇ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ, ವೆಂಕಟೇಶ ಎಂಬುವವರು ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಯುವಕ ಹೆದರಿಕೊಂಡಿದ್ದು, ಆರೋಪಿಗಳು ಕೇಳಿದ 50 ಸಾವಿರ ರೂ. ಹಣವನ್ನು ಕೊಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಇದಾದ ನಂತರ, ಮನೆಗೆ ಹೋಗಿ ಸ್ನೇಹಿತನಿಗೆ ವಿಚಾರ ಹೇಳಿಕೊಂಡಾಗ ನೀನು ಮೋಸ ಹೋಗಿದ್ದೀಯ, ಯಾರೋ ಬೇಕಂತಲೇ ನಿನಗೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಆಗ ಯುವಕ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ದೂರಿನ್ವಯ ಪೊಲೀಸರು 6 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು, ಜ.21ರ ಮಧ್ಯಾಹ್ನ ಈ ಘಟನೆ ನಡೆದಿತ್ತು. ನಂತರ, ಯುವಕ ಸಂಜೆ ಒಂದು ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡು 6 ಜನರನ್ನ ಬಂಧಿಸಲಾಗಿದೆ. ನಾಲ್ವರು ಮಹಿಳೆಯರು, ಇಬ್ಬರು ಪುರುಷರನ್ನ ಬಂಧಿಸಲಾಗಿದೆ. ಮದುವೆ ಮಾಡಿಸ್ತೀವಿ ಅಂತಾ ಆತನನ್ನ ಕರೆದೊಯ್ದು, ನಂತರ 3 ಜನ ಪೊಲೀಸರು ಎಂದು ಹೆದರಿಸಿದ್ದಾರೆ. ಇದೇ ವೇಳೆ ಆತನಿಂದ 50 ಸಾವಿರ ರೂ. ಟ್ರಾನ್ಸಫರ್ ಮಾಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಓರ್ವನನ್ನ ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಆನ್‌ಲೈನ್ ವಂಚನೆ ಆಘಾತಕಾರಿ ಪ್ರಕರಣ; 1 ಅನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
ಆತನನ್ನು ಠಾಣೆಗೆ ಕರೆತಂದು ವಿಚಾಋಣೆ ಮಾಡಿದಾಗ ಒಟ್ಟು 6 ಜನರ ಹೆಸರನ್ನು ಬಾಯಿ ಬಿಟ್ಟಿದ್ದು, ಇದೀಗ ಎಲ್ಲರನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಅರು ಕೃತ್ಯ ಎಸಗಿದ ಶೈಲಿ ನೋಡಿದರೆ, ಇದಕ್ಕಿಂತ ಮುಂಚಿತವಾಗಿಯೂ ಇದೇ ತರಹದ ಕೃತ್ಯ ಎಸಗಿದ ಅನುಮಾನ ಬರುತ್ತಿದೆ. ಆದ್ದರಿಂದ ಎಲ್ಲ ಆರೋಪಿಗಳ ಹಿನ್ನೆಲೆಯನ್ನು ಪತ್ತೆ ಮಾಡಲಾಗುತ್ತಿದೆ. ಇನ್ನು ಯಾರೇ ಆಗಲಿ ಪೊಲೀಸರ ವೇಷದಲ್ಲಿ ಬಂದು ಈ ರೀತಿ ಮಾಡುತ್ತಿದ್ದಾರೆಂದು ಅನುಮಾನ ಬಂದರೆ ಕೂಡಲೇ ಮಾಹಿತಿ ನೀಡಿ. ಪೊಲೀಸರು ಅಂತಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾಡಿದವರು ಅರೆಸ್ಟ್ ಆದಮೇಲೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದರು.