
ಮಂಡ್ಯ (ಜ.27): ಸ್ವಂತ ಹಿತಾಸಕ್ತಿಯಿಂದ ಕಟ್ಟಿದ ಅದೆಷ್ಟೋ ಪ್ರಾದೇಶಿಕ ಪಕ್ಷಗಳು ನೆಲ ಕಚ್ಚಿವೆ. ಆದರೆ, ಜೆಡಿಎಸ್ ಪಕ್ಷ ಕಾರ್ಯಕರ್ತರೇ ಕಟ್ಟಿದ ಪಕ್ಷವಾದ್ದರಿಂದ ಜನಮಾನಸದಲ್ಲಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಮಂಡ್ಯದ ಮಣ್ಣಿನಿಂದ ನನ್ನ ರಾಜಕೀಯ ಪ್ರವೇಶವಾಗಿದೆ. ಚುನಾವಣೆ ಸೋಲು ಬದುಕಿನ ಪರಿಪಕ್ವತೆಗೆ ಕಾರಣವಾಗಿದೆ. ಚುನಾವಣೆ, ಅಧಿಕಾರ ದೊಡ್ಡದ್ದಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲೆ ಮಡುವಿನಕೋಡಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, 'ಅದೆಷ್ಟೋ ಪ್ರಾದೇಶಿಕ ಪಕ್ಷಗಳು ಸ್ವಂತ ಹಿತಾಸಕ್ತಿಗಾಗಿ ಹುಟ್ಟಿ ನೆಲಕಚ್ಚಿವೆ. ಆದರೆ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಅಡಿಪಾಯ. ಮಂಡ್ಯದ ಮಣ್ಣಿನಿಂದಲೇ ನನ್ನ ರಾಜಕೀಯ ಪಯಣ ಆರಂಭವಾಗಿದೆ. ಕಳೆದ ಚುನಾವಣೆಗಳಲ್ಲಿನ ಸೋಲು ನನಗೆ ಬದುಕಿನ ಪರಿಪಕ್ವತೆಯನ್ನು ಕಲಿಸಿದೆ. ಅಧಿಕಾರ ಎಂಬುದು ಕಾಲಚಕ್ರ, ಅದು ಶಾಶ್ವತವಲ್ಲ. ಆದರೆ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಷ್ಟೇ ಏರಿಳಿತಗಳಾದರೂ ಜನರ ಸೇವೆ ಮಾಡಲು ನಾನು ಸದಾ ಸಿದ್ಧ' ಎಂದು ಭಾವನಾತ್ಮಕವಾಗಿ ನುಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಪ್ರಸ್ತುತ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ನೀಡಲು ಅಧಿಕಾರಿಗಳು ಲಂಚ ಪಡೆಯುತ್ತಿರುವುದು ಬಹಿರಂಗವಾಗಿದೆ. ಸಚಿವ ಚಲುವರಾಯಸ್ವಾಮಿ ಅವರು ಜೆಡಿಎಸ್ ಅನ್ನು ಕಿತ್ತೊಗೆಯುವ ಮಾತನಾಡುತ್ತಾರೆ. ಆದರೆ ನಾವು ಎಂದಿಗೂ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿದವರಲ್ಲ. ಅಧಿಕಾರಿಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿರುವ ನೀವು ಇನ್ನೂ ಎರಡೂವರೆ ವರ್ಷ ಕಾಯಿರಿ, ಜನರೇ ಉತ್ತರ ನೀಡಲಿದ್ದಾರೆ' ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷವು ಶಕ್ತಿಶಾಲಿ ನಾಯಕರನ್ನು ಸೃಷ್ಟಿಸುವ ಕಾರ್ಖಾನೆಯಿದ್ದಂತೆ ಎಂದ ನಿಖಿಲ್, 'ಇಂದು ಸಚಿವರಾಗಿರುವವರು ಮಾತ್ರವಲ್ಲ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಬೆಳೆದವರೇ. ಪಕ್ಷದಲ್ಲಿ ಬೆಳೆದು, ಉಂಡು ಹೋದವರು ಇಂದು ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದರು. ಮುಂಬರುವ ದಿನಗಳಲ್ಲಿ ಮಂಡ್ಯ ಮತ್ತೆ ಜೆಡಿಎಸ್ ಭದ್ರಕೋಟೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಮಾವೇಶಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ಕೋರಿದರು. ಕ್ರೇನ್ ಮೂಲಕ ಬೃಹತ್ ಗಾತ್ರದ ಹಾರಗಳನ್ನು ಅರ್ಪಿಸಲಾಯಿತು. ಮಂಡ್ಯದ ಸಾಂಪ್ರದಾಯಿಕ ಸೊಗಡಿನಂತೆ ಕೊಬ್ಬರಿ ಹಾಗೂ ಬೆಲ್ಲದ ಹಾರಗಳನ್ನು ಹಾಕಿ ಅಭಿಮಾನಿಗಳು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಕೃಷ್ಣಾರೆಡ್ಡಿ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.