
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಕೋಲಿನಿಂದ ತಲೆಗೆ ಹೊಡೆದು ಪತ್ನಿ ಮಮತಾ (45) ಅವರನ್ನು ಪತಿ ರವಿಕುಮಾರ್ (52) ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ವಿವರ
ಕೌಟುಂಬಿಕ ಕಲಹ ಹಾಗೂ ಅಕ್ರಮ ಸಂಬಂಧದ ಅನುಮಾನವೇ ಹತ್ಯೆಗೆ ಕಾರಣವೆಂದು ಆರೋಪಿ ರವಿಕುಮಾರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ತೀವ್ರ ವಾಗ್ವಾದದ ವೇಳೆ ಕೋಲಿನಿಂದ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ಮಮತಾ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಹಾಗೂ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಹಗಲು ಹೊತ್ತಿನಲ್ಲೇ ನಡೆದ ಈ ಹತ್ಯೆಯಿಂದ ಎಮ್ಮಿಗನೂರು ಗ್ರಾಮದಲ್ಲಿ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.