ಮಂಡ್ಯ: ನಡುರಸ್ತೆಯಲ್ಲೇ ಲಾರಿ ಚಾಲಕನ ಮೇಲೆ ಪ್ರಭಾವಿಯ ಪುತ್ರ ಮತ್ತು ಗ್ಯಾಂಗ್‌ನಿಂದ ಗುಂಡಿನ ದಾಳಿ, ದರೋಡೆ ಯತ್ನ!

Published : Jul 03, 2026, 08:48 AM IST
Highway

ಸಾರಾಂಶ

ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ಪ್ರಭಾವಿ ಉದ್ಯಮಿಯೊಬ್ಬನ ಪುತ್ರ ಮತ್ತು ಆತನ ಗ್ಯಾಂಗ್ ಔಷಧ ಸಾಗಿಸುತ್ತಿದ್ದ ಕಂಟೇನರ್ ಲಾರಿ ಚಾಲಕನ ಮೇಲೆ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಅಕ್ರಮ ಗನ್ ಬಳಸಿದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮಂಡ್ಯ: ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುವಂತಹ ಘಟನೆಯೊಂದು ನಡೆದಿದೆ. ಮಂಡ್ಯದ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀಮಂತಿಕೆಯ ಅಮಲಿನಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬನ ಪುತ್ರ ಹಾಗೂ ಆತನ ಗ್ಯಾಂಗ್, ಔಷಧ ತುಂಬಿದ ಕಂಟೇನರ್ ಲಾರಿ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮುಂಜಾನೆ 4 ಗಂಟೆಗೆ ಹೈವೆಯಲ್ಲಿ ನಡೆದಿದ್ದೇನು?

ನಿನ್ನೆ ಮುಂಜಾನೆ ಸುಮಾರು 4 ಗಂಟೆಯ ಅವಧಿಯಲ್ಲಿ ಈ ದರೋಡೆ ಯತ್ನ ನಡೆದಿದೆ. ಬೆಂಗಳೂರಿನಿಂದ ಮೆಡಿಸಿನ್ (ಔಷಧ) ಲೋಡ್ ಮಾಡಿಕೊಂಡು ಮಂಡ್ಯದ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಯನ್ನು ಐಷಾರಾಮಿ ಕಾರಿನಲ್ಲಿ ಬಂದ ಐದು ಮಂದಿ ಯುವಕರ ತಂಡ ಅಡ್ಡಗಟ್ಟಲು ಯತ್ನಿಸಿದೆ. ಕಂಟೇನರ್‌ನಲ್ಲಿ ಮೈಸೂರು ಮೂಲದ ಚಾಲಕನೊಬ್ಬನೇ ಇದ್ದು, ಮುಂಜಾನೆಯ ನಿರ್ಜನ ರಸ್ತೆಯಲ್ಲಿ ಕಾರಿನಲ್ಲಿದ್ದವರ ವರ್ತನೆ ಕಂಡು ಆತ ಲಾರಿ ನಿಲ್ಲಿಸದೆ ಮುಂದೆ ಚಲಾಯಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಐಷಾರಾಮಿ ಕಾರಿನಲ್ಲಿದ್ದ ಪ್ರಭಾವಿ ಉದ್ಯಮಿಯ ಪುತ್ರ, ತನ್ನ ಬಳಿಯಿದ್ದ ಗನ್‌ನಿಂದ ನೇರವಾಗಿ ಚಾಲಕನತ್ತ ಗುಂಡು ಹಾರಿಸಿ ತನ್ನ ಕ್ರೌರ್ಯ ಮೆರೆದಿದ್ದಾನೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತೀವ್ರ ಭಯಭೀತರಾದ ಚಾಲಕ, ಪ್ರಾಣಭಯದಿಂದ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದ ಎನ್ನಲಾಗಿದೆ.

ಬಾಯಿಂದ ಬಾಯಿಗೆ ಹರಡಿದ ಸುದ್ದಿ: ಎಚ್ಚೆತ್ತ ಪೊಲೀಸರು

ಘಟನೆ ನಡೆದು ಕೆಲ ಗಂಟೆಗಳ ಕಾಲ ಯಾರಿಗೂ ತಿಳಿಯದಿದ್ದರೂ, ನಂತರ ಸಾರ್ವಜನಿಕ ವಲಯದಲ್ಲಿ ಈ ವಿಷಯ ಬಾಯಿಂದ ಬಾಯಿಗೆ ಹರಡತೊಡಗಿತು. ವಿಷಯದ ಗಂಭೀರತೆಯನ್ನು ಅರಿತು ಎಚ್ಚೆತ್ತ ಮಂಡ್ಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ಮುಖ್ಯ ಸೂತ್ರಧಾರ ಎನ್ನಲಾದ ಮಂಡ್ಯದ ಪ್ರಭಾವಿ ಉದ್ಯಮಿಯನ್ನು ಜೊತೆಗೆ ಆತನ ಪುಂಡ ಪುತ್ರನನ್ನು ತಡರಾತ್ರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಂಡ್ಯ ಡಿವೈಎಸ್ಪಿ (DYSP) ಕಚೇರಿಯಲ್ಲಿ ಆರೋಪಿಯ ತೀವ್ರ ವಿಚಾರಣೆ ನಡೆದಿದೆ ಎಂದು ವರದಿ ತಿಳಿಸಿದೆ.

ಲೈಸೆನ್ಸ್ ಇಲ್ಲದ ಅಕ್ರಮ ಗನ್: ಪೊಲೀಸರಿಗೇ ಸವಾಲು!

ಈ ಇಡೀ ಪ್ರಕರಣದಲ್ಲಿ ಅತ್ಯಂತ ಆತಂಕಕಾರಿ ವಿಷಯವೆಂದರೆ ಆರೋಪಿ ಬಳಸಿರುವ ಅಕ್ರಮ ಮಾರಕಾಸ್ತ್ರ. ಬಂಧಿತ ಉದ್ಯಮಿ ಪುತ್ರನ ಬಳಿ ಯಾವುದೇ ಅಧಿಕೃತ ಗನ್ ಲೈಸೆನ್ಸ್ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಿದ್ದಲ್ಲಿ, ಆತನಿಗೆ ಈ ಮಾರಕ ಗನ್ ಸಿಕ್ಕಿದ್ದಾದರೂ ಎಲ್ಲಿಂದ? ಮಂಡ್ಯದ ಯುವಕರಿಗೆ ಇಷ್ಟೊಂದು ಸುಲಭವಾಗಿ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿವೆಯೇ? ಮುಂಜಾನೆ 4 ಗಂಟೆಗೆ ಆ ಐಷಾರಾಮಿ ಕಾರಿನಲ್ಲಿ ಉದ್ಯಮಿ ಪುತ್ರ ಮತ್ತು ಗ್ಯಾಂಗ್ ಹೆದ್ದಾರಿಯಲ್ಲಿ ಹೊಂಚು ಹಾಕಿ ನಿಂತಿದ್ದರ ಅಸಲಿ ಉದ್ದೇಶವೇನು? ಎಂಬ ಹತ್ತಾರು ಪ್ರಶ್ನೆಗಳು ಈಗ ತನಿಖಾಧಿಕಾರಿಗಳ ಮುಂದಿವೆ.

ಮಂಡ್ಯ ಪುಡಾರಿಗಳ ತಾಣವಾಗುತ್ತಿದೆಯೇ?

ಇತ್ತೀಚಿನ ದಿನಗಳಲ್ಲಿ ಮಂಡ್ಯದಲ್ಲಿ ರಾಜಕೀಯ ಹಾಗೂ ಹಣದ ಪ್ರಭಾವ ಇರುವ ಯುವಕರ ಪುಂಡಾಟಿಕೆ ಮಿತಿಮೀರುತ್ತಿದೆ. "ನಮ್ಮನ್ನು ಕೇಳುವವರೇ ಇಲ್ಲ" ಎಂಬಂತೆ ವರ್ತಿಸುತ್ತಿರುವ ಪುಡಿ ರೌಡಿಗಳು ಮತ್ತು ಶ್ರೀಮಂತರ ಮಕ್ಕಳು ಮಂಡ್ಯ ಪೊಲೀಸರಿಗೇ 'ಡೋಂಟ್ ಕೇರ್' ಎನ್ನುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಈಗ ನಡೆದಿರುವ ಉದ್ಯಮಿ ಪುತ್ರನ ದರೋಡೆ ಯತ್ನ ಮತ್ತು ಗುಂಡಿನ ದಾಳಿ ಯತ್ನದ ಪ್ರಕರಣ ಇದಕ್ಕೆ ಜೀವಂತ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ರಾಜ್ಯದ ಎಲ್ಲ ಶಾಲಾ ಆಡಳಿತ ಮಂಡಳಿವರೇ ಗಮನಿಸಿ: ಮಗುವಿನ ರಕ್ಷಣೆ ಯಾರದ್ದು? ಹೈಕೋರ್ಟ್ ಮಹತ್ವದ ಅಭಿಪ್ರಾಯ! ಏನಿದು ಪ್ರಕರಣ?
ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆಹಾಕಲೇಬೇಡಿ: ರಾಜ್ಯದ ರೈತರಿಗೆ ಸಿಎಂ ಕಿವಿಮಾತು