
ದಕ್ಷಿಣ ಕನ್ನಡ/ಉತ್ತರ ಕನ್ನಡ (ಜು.02): ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ (Heavy Rain) ಮುಂದುವರಿದಿದೆ. ಹವಾಮಾನ ಇಲಾಖೆಯು (IMD) ನಾಳೆ ಶುಕ್ರವಾರ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' (Red Alert) ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಉತ್ತರ ಕನ್ನಡದ ಕಾರವಾರ ತಾಲೂಕಿನಲ್ಲಿ ಶಾಲೆ-ಕಾಲೇಜುಗಳಿಗೆ ರಜೆ (School College Holiday) ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಅವರು ಇಂದು ಗುರುವಾರ ರಜೆ ನೀಡಿದ್ದರು. ಮಳೆ ಕಡಿಮೆಯಾಗದ ಕಾರಣ ಮತ್ತು ನಾಳೆ ರೆಡ್ ಅಲರ್ಟ್ ಮುನ್ಸೂಚನೆ ಇರುವುದರಿಂದ ನಾಳೆಯೂ ರಜೆಯನ್ನು ಮುಂದುವರಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ (Anganwadi), ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ (Pre-University/PUC) ಕಾಲೇಜುಗಳಿಗೆ ನಾಳೆ ರಜೆ ಇರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು (Private Educational Institutions) ಜಿಲ್ಲಾಡಳಿತದ ಆದೇಶವಿದ್ದರೂ ತರಗತಿಗಳನ್ನು ನಡೆಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, 'ಸರ್ಕಾರದ ಆದೇಶ ಮೀರಿ ತರಗತಿ ನಡೆಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ (Disaster Management Act 2005) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿಯೂ ಭಾರಿ ಮಳೆಯಾಗುತ್ತಿದೆ (Monsoon Fury). ಈ ಹಿನ್ನೆಲೆಯಲ್ಲಿ ಕಾರವಾರ ತಹಶೀಲ್ದಾರ್ ನಿಚ್ಚಲ್ ನರೋನಾ (Nichal Narona) ಅವರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರವೂ ಹೆಚ್ಚಿದ್ದು, ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.
ಭಾರೀ ಮಳೆಯ ಸಮಯದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ನದಿ ತೀರ, ಜಲಪಾತ ಹಾಗೂ ಸಮುದ್ರದ ಹತ್ತಿರ ಹೋಗಬಾರದು. ತುರ್ತು ಸಂದರ್ಭದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.