ಮಂಡ್ಯ: ಜಿಲ್ಲೆಯಲ್ಲಿ 7 ಅಡಿಯಷ್ಟು ಅಂತರ್ಜಲ ಕುಸಿತ

By Kannadaprabha NewsFirst Published May 1, 2024, 6:34 AM IST
Highlights

 ರಣ ಬಿಸಿಲಿಗೆ ಭೂಮಿ ಕಾದು ಕೆಂಡವಾಗಿದೆ. ಕೆರೆ-ಕಟ್ಟೆಗಳೆಲ್ಲಾ ಬತ್ತಿಹೋಗಿವೆ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟದಲ್ಲಿ ಸುಮಾರು ಏಳು ಅಡಿಗಳಷ್ಟು ಕುಸಿತ ಕಂಡಿದೆ. ಕೃಷಿಗೆ ಆಸರೆಯಾಗಿದ್ದ ಕೊಳವೆ ಬಾವಿಗಳು ಬತ್ತಿಹೋಗುತ್ತಿರುವುದು ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

 ಮಂಡ್ಯ ಮಂಜುನಾಥ 

  ಮಂಡ್ಯ :  ರಣ ಬಿಸಿಲಿಗೆ ಭೂಮಿ ಕಾದು ಕೆಂಡವಾಗಿದೆ. ಕೆರೆ-ಕಟ್ಟೆಗಳೆಲ್ಲಾ ಬತ್ತಿಹೋಗಿವೆ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟದಲ್ಲಿ ಸುಮಾರು ಏಳು ಅಡಿಗಳಷ್ಟು ಕುಸಿತ ಕಂಡಿದೆ. ಕೃಷಿಗೆ ಆಸರೆಯಾಗಿದ್ದ ಕೊಳವೆ ಬಾವಿಗಳು ಬತ್ತಿಹೋಗುತ್ತಿರುವುದು ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಕಳೆದ ವರ್ಷ ಮಳೆ ಕೊರತೆಯಿಂದ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲಿಲ್ಲ. ಕೆರೆ-ಕಟ್ಟೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಲು ಸಾಧ್ಯವಾಗಲಿಲ್ಲ. ಬಿಸಿಲ ತಾಪ ತೀವ್ರಗತಿಯಲ್ಲಿ ಏರಿಕೆಯಾಗಿರುವುದರಿಂದ ಕೆರೆ-ಕಟ್ಟೆಗಳಲ್ಲಿದ್ದ ನೀರೆಲ್ಲವೂ ಬತ್ತಿಹೋಗಿವೆ. ಪರಿಣಾಮ ಅಂತರ್ಜಲದ ಮಟ್ಟವೂ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ. ನೀರಿಗೆ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿದ್ದು ಮಳೆಗಾಗಿ ಜನರು ನಿತ್ಯ ಎದುರುನೋಡುತ್ತಿದ್ದಾರೆ.

 ಕೆ.ಆರ್.ಪೇಟೆಯಲ್ಲಿ ಹೆಚ್ಚು ಕುಸಿತ: 

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಅಂತರ್ಜಲದ ಮಟ್ಟ ಅತಿ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷ 7.2ಮೀ.ವರೆಗಿದ್ದ ಅಂತರ್ಜಲದ ಮಟ್ಟ ಈ ವರ್ಷ 17.7ಮೀಟರ್‌ಗೆ ಇಳಿದಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಇಳಿಮುಖವಾಗಿದೆ. ಕಳೆದ ವರ್ಷ 2.73 ಮೀ. ಇದ್ದ ಅಂತರ್ಜಲ ಮಟ್ಟ ಈ ಬಾರಿ 3.30 ಮೀ.ಗೆ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಸರಾಸರಿ 5.76 ಮೀ.ನಿಂಧ 8.15 ಮೀ.ವರೆಗೆ ಅಂತರ್ಜಲ ಕುಸಿತಗೊಂಡಿದೆ. ಸುಮಾರು 2.93 ಮೀ.ನಷ್ಟು ಆಳಕ್ಕೆ ಅಂತರ್ಜಲ ಇಳಿಮುಖವಾಗಿದೆ. ಅಂದರೆ ಸುಮಾರು 7 ಅಡಿಗಳಷ್ಟು ಕುಸಿದಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

 ಕೊಳವೆ ಬಾವಿ ನಿರ್ಮಾಣಕ್ಕೆ ದುಂಬಾಲು 

ಅಂತರ್ಜಲ ಪಾತಾಳ ಸೇರಿದ್ದರೂ ರೈತರು ಮಾತ್ರ ಸುಮ್ಮನೆ ಕೂರುತ್ತಿಲ್ಲ. ಕೊಳವೆ ಬಾವಿಗಳು ಬತ್ತುತ್ತಿರುವ ಬೆನ್ನಲ್ಲೇ ಮತ್ತೊಂದು ಕಡೆ ಕೊಳವೆ ಬಾವಿಯನ್ನು ಹೊಸದಾಗಿ ನಿರ್ಮಿಸುವುದಕ್ಕೆ ಮುಗಿಬೀಳುತ್ತಿದ್ದಾರೆ. ಸಾಲ ಮಾಡಿಯಾದರೂ ತೋಟ, ಜಮೀನುಗಳಲ್ಲಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದಾರೆ. ಬರದಲ್ಲೂ ನೀರು ಸಿಗಬಹುದೆಂಬ ಆಶಾಭಾವನೆಯೊಂದಿಗೆ ಬೋರ್‌ವೆಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಕೆಲವೊಮ್ಮೆ ನೀರು ಸಿಗದೆ ಹಣ ವ್ಯರ್ಥವಾದರೂ ಮತ್ತೊಂದು ಕಡೆ ಸ್ಥಳ ಗುರುತಿಸಿ (ಪಾಯಿಂಟ್) ಬೋರ್‌ವೆಲ್ ಕೊರೆಸುವುದರಲ್ಲಿ ನಿರತರಾಗಿದ್ದಾರೆ.

ಅಂತರ್ಜಲ ಇಲಾಖೆಗೆ ಇದುವರೆಗೆ ಕೊಳವೆ ಬಾವಿ ನಿರ್ಮಾಣಕ್ಕೆ ೩೦೦ರಿಂದ ೪೦೦ ಅರ್ಜಿ ಸಲ್ಲಿಕೆಯಾಗಿದ್ದರೆ, ಅನಧಿಕೃತವಾಗಿ ನೂರಾರು ಮಂದಿ ರೈತರು ಕೊಳವೆ ಬಾವಿಗಳನ್ನು ನಿರ್ಮಿಸುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ, ಟಮೋಟೋ, ತರಕಾರಿ, ಹೂ ಸೇರಿದಂತೆ ನಾನಾ ರೀತಿಯ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕೇವಲ ಮಳೆಯನ್ನೇ ನಂಬಿ ಕೂರದ ರೈತರು ಕೊಳವೆ ಬಾವಿಗಳಿಗೆ ಮೊರೆಹೋಗಿದ್ದಾರೆ. ನೀರು ಸಮೃದ್ಧವಾಗಿ ದೊರೆತಲ್ಲಿ ಹನಿ ನೀರಾವರಿ ಮಾಡಿಕೊಂಡು ಬೆಳೆಗಳನ್ನು ಕಾಪಾಡಿಕೊಳ್ಳುವುದಕ್ಕೆ ಮುತುವರ್ಜಿ ವಹಿಸಿದ್ದಾರೆ.

 ಹಗಲು-ರಾತ್ರಿ ಕೊಳವೆಬಾವಿ ನಿರ್ಮಾಣ: 

ಬೋರ್‌ವೆಲ್ ಏಜೆನ್ಸಿಯವರಿಗಂತೂ ಈಗ ಸುಗ್ಗಿ ಕಾಲ. ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಬೋರ್‌ವೆಲ್‌ಗಳ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಪ್ರತಿ ಅಡಿಗೆ ೧೧೦ ರಿಂದ ೧೧೫ರವರೆಗೆ ದರ ನಿಗದಿಪಡಿಸುತ್ತಾ ಬೋರ್‌ವೆಲ್ ನಿರ್ಮಿಸುತ್ತಿದ್ದಾರೆ. ಒಂದೊಂದು ಹಳ್ಳಿಗೆ ಹೋದರೆ ಮೂರ್ನಾಲ್ಕು ಮಂದಿ ಬೋರ್‌ವೆಲ್ ನಿರ್ಮಿಸುವುದಕ್ಕೆ ದುಂಬಾಲು ಬೀಳುತ್ತಿದ್ದಾರೆ. ಎಷ್ಟೋ ಮಂದಿ ನಿಗದಿತ ಸಮಯಕ್ಕೆ ಬೋರ್‌ವೆಲ್ ನಿರ್ಮಿಸುವ ಲಾರಿಗಳು ಸಿಗದೆ ಪರಿತಪಿಸುತ್ತಿದ್ದಾರೆ.

ಬೋರ್‌ವೆಲ್ ಏಜೆನ್ಸಿಯವರು ತಾವಿರುವ ಸ್ಥಳದಿಂದ 15 -20 ಕಿ.ಮೀ. ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ಲಕ್ಷಾಂತರ ರು. ಹಣ ಗಳಿಸುತ್ತಿದ್ದಾರೆ. ಮತ್ತೆ ಕೆಲವರು ಸಾವಿರಾರು ಅಡಿ ಆಳಕ್ಕೆ ಕೊರೆಸುವ ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದರಿಂದ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬೋರ್‌ವೆಲ್ ಲಾರಿಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಬೋರ್‌ವೆಲ್ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದ್ದರೂ, ಸ್ಥಳದಲ್ಲೇ ದುಡ್ಡು ಕೊಡುವುದಕ್ಕೆ ಸಿದ್ಧರಿದ್ದರೂ ಬೋರ್‌ವೆಲ್ ಏಜೆನ್ಸಿಗಳು ಮಾತ್ರ ರೈತರ ಬೇಡಿಕೆಗೆ ತಕ್ಕಂತೆ ಕೊಳವೆ ಬಾವಿಗಳನ್ನು ನಿರ್ಮಿಸಲಾಗುತ್ತಿಲ್ಲ.

ಒಂದು ಬೋರ್‌ವೆಲ್ ನಿರ್ಮಿಸುವ ಲಾರಿ ದಿನಕ್ಕೆ ಎರಡು ಕೊಳವೆ ಬಾವಿ ನಿರ್ಮಿಸಲು ಶಕ್ತವಾಗಿರುತ್ತದೆ. ಒಮ್ಮೆಲೆ ಆರರಿಂದ ಏಳು ಕೊಳವೆ ಬಾವಿ ನಿರ್ಮಾಣಕ್ಕೆ ರೈತರು ಮುಗಿಬೀಳುತ್ತಿದ್ದಾರೆ. ತಮಗೇ ಮೊದಲು ಕೊಳವೆಬಾವಿ ನಿರ್ಮಿಸುವಂತೆ ಪೈಪೋಟಿಗೆ ಬೀಳುತ್ತಿದ್ದಾರೆ. ಇದು ಬೋರ್‌ವೆಲ್ ಏಜೆನ್ಸಿಯವರಿಗೂ ತಲೆಬಿಸಿ ಉಂಟುಮಾಡಿದೆ.

click me!