ಭೀಕರ ಬರಗಾಲ : ಹೇಮಾವತಿ ನದಿಯಿಂದ ನೀರು ಹರಿಸದೆ ಒಣಗಿ ಬಾಯ್ಬಿಟ್ಟ ಭೂಮಿ

By Kannadaprabha NewsFirst Published May 1, 2024, 6:21 AM IST
Highlights

ಭೀಕರ ಬರಗಾಲ ಎದುರಾಗಿದ್ದು, ಹೇಮಾವತಿ ನದಿಯಿಂದ ಕಾಲುವೆಗಳಿಗೆ ಸರ್ಕಾರ ನೀರು ಹರಿಸದ ಪರಿಣಾಮ ತಾಲೂಕಿನ ಜಮೀನುಗಳಲ್ಲಿ ಅಳಿದುಳಿದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತ ಸಮುದಾಯ ಮುಳುಗಿದೆ

 ಕೆ.ಆರ್.ಪೇಟೆ :  ಭೀಕರ ಬರಗಾಲ ಎದುರಾಗಿದ್ದು, ಹೇಮಾವತಿ ನದಿಯಿಂದ ಕಾಲುವೆಗಳಿಗೆ ಸರ್ಕಾರ ನೀರು ಹರಿಸದ ಪರಿಣಾಮ ತಾಲೂಕಿನ ಜಮೀನುಗಳಲ್ಲಿ ಅಳಿದುಳಿದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತ ಸಮುದಾಯ ಮುಳುಗಿದೆ.

ಪ್ರಸಕ್ತ ಸಾಲಿನಲ್ಲಿ ಮಳೆರಾಯ ಕೈಕೊಟ್ಟರೂ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸುವಷ್ಟು ನೀರು ಹೇಮಾವತಿ ಜಲಾಶಯದಲ್ಲಿತ್ತು. ಆದರೆ, ಪಕ್ಕದ ತುಮಕೂರು ಜಿಲ್ಲೆಗೆ ಹೇಮೆ ನೀರು ಹರಿದರೂ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಮಂಡ್ಯ ಜಿಲ್ಲೆಯ ಕೆರೆ-ಕಟ್ಟೆಗಳಿಗೂ ಹೇಮೆಯ ನೀರು ಹರಿಯದೇರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ಬಿಸಿಲಿನ ತಾಪ, ಭೀಕರ ಬರಗಾಲದಿಂದಾಗಿ ತಾಲೂಕಿನ ಕೆರೆ ಕಟ್ಟೆಗಳು ಸಂಪೂರ್ಣ ಬರಿದಾಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೊರಿದೆ. ಅಂತರ್ಜಲ ಮಟ್ಟ ಕುಸಿದು ಸಾವಿರಾರು ರೈತರ ಕೃಷಿ ಪಂಪ್ ಸೆಟ್ಟುಗಳು ಸ್ಥಗಿತಗೊಂಡಿವೆ.

ರೈತರು ಕೃಷಿ ಪಂಪ್ ಸೆಟ್‌ಗಳನ್ನು ನಂಬಿ ತಮ್ಮ ಜಮೀನುಗಳಲ್ಲಿ ಹಾಕಿದ್ದ ಕಬ್ಬು, ಶುಂಠಿ, ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರನ್ನು ಕಾಡುತ್ತಿದೆ.

ತಾಲೂಕಿನ ಮಂದಗೆರೆ ಬಳಿ ಹಾಗೂ ಹೇಮಗಿರಿ ಬಳಿ ಹೇಮಾವತಿ ನದಿಗೆ ಒಡ್ಡು ಅಣೆಕಟ್ಟೆಗಳನ್ನು ನಿರ್ಮಿಸಿ ಶತಮಾನಗಳಷ್ಟು ಹಿಂದಿನಿಂದಲೇ ನೀರಾವರಿಗೆ ಒಳಪಡಿಸಲಾಗಿದೆ. ಹಿಂದೆಲ್ಲಾ ಈ ನಾಲೆಗಳಲ್ಲಿ ವರ್ಷದ 11 ತಿಂಗಳು ನೀರು ಹರಿಯುತ್ತಿತ್ತು. ರೈತರು ಯಾವುದೇ ಅಡೆತಡೆಯಿಲ್ಲದೆ ಸಂಮೃದ್ದವಾಗಿ ಎರಡು ಬೆಳೆ ಭತ್ತ ಬೆಳೆಯುತ್ತಿದ್ದರು.

ಸರ್ಕಾರ, ಸಚಿವರು ಹಾಗೂ ನೀರಾವರಿ ಇಲಾಖೆಯ ತಪ್ಪು ನಿರ್ಧಾರಗಳಿಂದ ಈ ನಾಲೆಗಳಲ್ಲಿ ಬೇಸಿಗೆ ಬೆಳೆಗೆ ನೀರು ಹರಿಯುತ್ತಿಲ್ಲ. ನೀರಿನ ಅಭಾವ ಮತ್ತು ಭತ್ತದ ಬೆಳೆ ಲಾಭದಾಯಕವಲ್ಲದ ಕಾರಣಕ್ಕೆ ಶೇ. 20 ರಷ್ಟು ರೈತರು ತೆಂಗು, ಅಡಿಕೆ, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳತ್ತ ವಾಲುತ್ತಿದ್ದಾರೆ. ಕಠಿಣ ಬರಗಾಲದಲ್ಲೂ ಈ ನಾಲಾ ವ್ಯಾಪ್ತಿಯ ರೈತರಿಗೆ ಭತ್ತ ಬೆಳೆಯಲು ನೀರು ಹರಿಸದಿದ್ದರೂ ಕಬ್ಬು, ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳ ಸಂರಕ್ಷಣೆಗಾಗಿ ಕಟ್ಟು ನೀರು ಪದ್ದತಿಯಡಿ ನೀರು ಹರಿಸಲಾಗುತ್ತಿತ್ತು.

ಕಟ್ಟು ನೀರು ಪದ್ಧತಿಯಡಿ ನೀರು ಹರಿಸುತ್ತಿದ್ದ ನೀರಾವರಿ ಇಲಾಖೆ ಇದೀಗ ಈ ನಾಲೆಗಳಿಗೆ ನೀರು ಹರಿಸದ ಪರಿಣಾಮ ರೈತರ ಬೆಳೆಗಳು ಒಣಗಲಾರಂಭಿಸಿವೆ. ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿರುವ ಕಾರಣದಿಂದಲೇ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಕಾಲುವೆಗಳಲ್ಲಿ ಕಟ್ಟು ನೀರು ಪದ್ದತಿಯಡಿ ನೀರು ಹರಿಯುವಿಕೆ ನಿಲ್ಲಿಸಿದೆ ಎಂದು ರೈತ ಸಮುದಾಯ ಆರೋಪಿಸುತ್ತಿದೆ. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ಸಂರಕ್ಷಿಸುವಂತೆ ಒತ್ತಾಯಿಸುತ್ತಿದ್ದಾರೆ.

ತಾಲೂಕಿನಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೀಡಿ ಸರ್ಕಾರ ಹೇಮಾವತಿ ಜಲಾಶಯದ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಆದರೆ. ಈ ವರ್ಷ ನಮ್ಮ ಕೆರೆ ಕಟ್ಟೆಗಳಿಗೆ ಹೇಮೆ ನೀರು ಹರಿದಿಲ್ಲ. ಕೆರೆಗಳು ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಕುಸಿದಿದೆ.

ಅಂತರ್ಜಲ ಕುಸಿತದಿಂದ ಬೋರ್‌ವೆಲ್ ಗಳು ಸ್ಥಗಿತಗೊಂಡಿವೆ. ಪಂಪ್‌ಸೆಟ್ ಆಧಾರಿತ ಕೃಷಿ ಅಸ್ತವ್ಯಸ್ಥ ಗೊಂಡಿದೆ. ತೆಂಗು, ಅಡಿಕೆ ಮುಂತಾದ ಧೀರ್ಘಕಾಲಿಕ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ರೈತರ ಬದುಕು ನಾಶವಾಗುವ ಪರಿಸ್ಥಿತಿ ಎದುರಾಗಿದೆ.

ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹೇಮಾವತಿ ನದಿ ವ್ಯಾಪ್ತಿಯ ಅಕ್ಕಿಹೆಬ್ಬಾಳು ಮತ್ತು ಬೂಕನಕೆರೆ ಹೋಬಳಿ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 500 ಕ್ಯುಸೆಕ್ ನೀರು ಹರಿಸುವಂತೆ ನಾನು ನೀರಾವರಿ ಇಲಾಖೆ ಎಂಜಿನಿಯರುಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದೇನೆ. ಜಿಲ್ಲಾ ಸಚಿವರ ಗಮನಕ್ಕೂ ತಂದಿದ್ದೇನೆ. ಆದರೆ, ಇದುವರೆಗೂ ಕ್ರಮವಹಿಸಿಲ್ಲ. ತಕ್ಷಣವೇ ಕಾಲುವೆಗಳ ಮುಖಾಂತರ ಕಟ್ಟು ಪದ್ಧತಿಯಡಿ ನೀರು ಹರಿಸಬೇಕು.

- ಎಚ್.ಟಿ.ಮಂಜು, ಶಾಸಕರು, ಕೆ.ಆರ್ .ಪೇಟೆ.

ಹೇಮಾವತಿ ಅಣೆಕಟ್ಟೆಯಿಂದ ನೆರೆಯ ತುಮಕೂರು ಜಿಲ್ಲೆಗೆ ನೀರು ಹರಿಸಿದ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆ ರೈತರಿಗೆ ನೀರು ಹರಿಸದೆ ತಾರತಮ್ಯ ಮಾಡಿದೆ. ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಾಂಗ್ರೆಸ್ ಮುಖಂಡರು ಕೂಡ ಅನ್ಯಾಯದ ಬಗ್ಗೆ ಧ್ವನಿಯೆತ್ತುತ್ತಿಲ್ಲ. ರೈತರ ಬೆಳೆ ರಕ್ಷಣೆ ಮತ್ತು ಕುಡಿಯುವ ನೀರಿನ ಬವಣೆ ನಿವಾರಿಸಲು ಮುಂದಾಗದಿದ್ದರೆ ರೈತಸಂಘ ಹೋರಾಟ ಆರಂಭಿಸಲಿದೆ.

- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ

click me!