
ಮಂಡ್ಯ (ಫೆ.16): ಮಕ್ಕಳಿಬ್ಬರು ಮನೆಯಲ್ಲಿ ಆಟವಾಡುತ್ತಿರುವಾಗ ಮನೆಯ ಮೇಲ್ಭಾಗದಲ್ಲಿ ಇಟ್ಟಿದ್ದ ಅಸಲಿ ಗನ್ ಅನ್ನು ತೆಗೆದುಕೊಂಡ ಬಾಲಕ ತನ್ನ 3 ವರ್ಷದ ತಮ್ಮನ ಮೇಲೆ ಫೈರಿಂಗ್ ಮಾಡಿದ್ದಾನೆ. ಸಣ್ಣ ಬಾಲಕನ ಹೊಟ್ಟೆಗೆ ಗುಂಡು ತಾಗಿದ್ದು, ಕರಳುಗಳೆಲ್ಲವೂ ಹೊರಗೆ ಬಂದು ಕೆಲವೇ ಹೊತ್ತಿನಲ್ಲಿ ಮಗು ಸಾವನ್ನಪ್ಪಿದೆ.
ಈ ದುರ್ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೊಂದೇಮಾದಿಹಳ್ಳಿ ಕೋಳಿ ಫಾರಂನಲ್ಲಿ ನಡೆದಿದೆ. ಅಭಿಷೇಕ್ (3) ಮೃತಪಟ್ಟ ಮಗು. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರ ಕುಟುಂಬದ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಕೋಳಿ ಫಾರಂನಲ್ಲಿ ಭದ್ರತೆಯಾಗಿ ಒಂದು ಅಸಲಿ ಗನ್ ಅನ್ನು ಇಡಲಾಗಿತ್ತು. ಅದು ಜೀವಂತ ಗುಂಡುಗಳನ್ನು ಹೊಂದಿದ್ದು, ಲೋಡೆಡ್ ಗನ್ ಆಗಿತ್ತು. ಇನ್ನು 13 ವರ್ಷದ ಬಾಲಕ ಸುದೀಪ್ ದಾಸ್‌ನೊಂದಿಗೆ 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಮನೆಯವರು ಕೆಲಸ ಮಾಡಲು ಹೋಗಿದ್ದಾರೆ. ಈ ವೇಳೆ ಬಾಲಕ ಸುದೀಪ್ ಮೇಲೆ ಇಟ್ಟಿದ್ದ ಗನ್ ಅನ್ನು ತೆಗೆದುಕೊಂಡು ಕಳ್ಳ-ಪೊಲೀಸ್ ಆಟವಾಡುತ್ತಾ ಸಣ್ಣ 3 ವರ್ಷದ ಮಗುವಿನ ಮೇಲೆ ಶೂಟ್ ಮಾಡಿದ್ದಾನೆ. ಈ ಆಕಸ್ಮಿಕ ಫೈರಿಂಗ್‌ನಿಂದ ಮಗುವಿನ ಹೊಟ್ಟೆ ಸೀಳಿದೆ.
ಸುದೀಪ್ ದಾಸ್ ಮಗುವಿನ ಕಡೆಗೆ ಫೈರಿಂಗ್ ಆಗುತ್ತಿದ್ದಂತೆ 3 ವರ್ಷದ ಮಗು ಅಭಿಷೇಕ್ ಹೊಟ್ಟೆಗೆ ಗುಂಡು ಹೊಕ್ಕಿದೆ. ಅಲ್ಲೇ ಅಭಿಷೇಕ್ ತಾಯಿ ಲಿಪಿಕಾ ಇದ್ದು ಅವರಿಗೂ ಈ ವೇಳೆ ಗಾಯವಾಗಿದೆ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂ ಇದಾಗಿದೆ. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ಹಾಗೂ ಲಿಪಿಕ ದಂಪತಿ ಮಗು ಅಭಿಷೇಕ್ ಮೃತಪಟ್ಟಿದೆ. ಪಶ್ಚಿಮ ಬಂಗಾಳ ಮೂಲದ ಕೂಲಿಕಾರ್ಮಿಕರಾದ ಶಶಾಂಕ್ ಹಾಗೂ ಲಿಪಿಕ ದಂಪತಿ. ಕಳೆದ ಕೆಲವು ವರ್ಷಗಳಿಂದ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲೇ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ತೀರ್ಥಸ್ನಾನ ಮಾಡಲೆಂದು ನದಿಗೆ ಇಳಿದಿದ್ದ ಯೋಗಪಟು ಸಾವು: ಕಾರಣ ಮಾತ್ರ ನಿಗೂಢ?
ಶಶಾಂಕ್ ಹಾಗೂ ಲಿಪಿಕರನ್ನ ನೋಡಲು ಬಂದಿದ್ದ ಅವರ ಭಾವ ಶಂಕರ್ ದಾಸ್‌ನೊಂದಿಗೆ ಅವರ ಮಗ ಸುದೀಪ್ ದಾಸ್ ಕೂಡ ಬಂದಿದ್ದನು. ಆಟವಾಡುತ್ತಿದ್ದಾಗ ಮಕ್ಕಳ ಕೈಗೆ ಗನ್ ಸಿಕ್ಕಿದೆ. ಕೋಳಿ ಫಾರಂ ಮಾಲೀಕ ನರಸಿಂಹಮೂರ್ತಿ ಅವರಿಗೆ ಸೇರಿದ ಗನ್ ಇದಾಗಿದೆ. ಪರವಾನಗಿ ಪಡೆದು ಗನ್ ಇಟ್ಟುಕೊಂಡಿದ್ದ ನರಸಿಂಹಮೂರ್ತಿ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗನ್‌ನಿಂದ ಫೈರ್ ಆದ ಗುಂಡು ಮಗುವಿನ ಹೊಟ್ಟೆ ಸೀಳಿದ್ದರಿಂದ ಮಗುವಿನ ಹೊಟ್ಟೆಯಲ್ಲಿದ್ದ ಕರಳುಗಳು ಹೊರಗೆ ಬಂದಿದ್ದವು. ಆದರೂ, ಉಸಿರಾಡುತ್ತಿದ್ದ ಮಗುವಿನ ಕರಳುಗಳನ್ನು ಹೊಟ್ಟೆಯ ಮೇಲೆ ಟವೆಲ್‌ನಿಂದ ಕಟ್ಟಿಕೊಂಡು ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಗು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.