
ಚಿಕ್ಕಮಗಳೂರು: ಕೆಲ ತಿಂಗಳ ಹಿಂದೆಯಷ್ಟೇ ತಮಿಳುನಾಡಿನ ವ್ಯಕ್ತಿಯೋರ್ವ ಸುಮಾರು 50 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಹಣ ಹಿಂದಿರುಗಿಸಲು ಶ್ರೀಲಂಕಾಗೆ ತೆರಳಿದ್ದರು. ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸಿ ಕ್ಷಮೆ ಕೇಳಿದ್ದರು. ಇದೀಗ ಇಂತಹುವುದೇ ಒಂದು ಘಟನೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. 35 ವರ್ಷಗಳ ಹಿಂದೆ ಕೊಟ್ಟಿಗೆಹಾರದ ಹೋಟೆಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು, ಕಡಬು ಮತ್ತು ಮೀನುಸಾರ ತಿಂದಿದ್ದರು. ಆದ್ರೆ ಅಂದು ಹಣವಿಲ್ಲದ ಕಾರಣ ತಮ್ಮ ಅಸಹಾಯಕತೆಯನ್ನು ಹೇಳಿ ಹಿಂದಿರುಗಿದ್ದರು. ಹೋಟೆಲ್ ಮಾಲೀಕರು ಸಹ ವ್ಯಕ್ತಿಗೆ ಆಹಾರ ನೀಡಿ, ಯಾವುದೇ ಹಣವನ್ನು ಪಡೆದುಕೊಂಡಿರಲಿಲ್ಲ. ಇದೀಗ 35 ವರ್ಷದ ಬಳಿಕ ಹಣ ಹಿಂದಿರುಗಿಸಿ, ಹೋಟೆಲ್ ಮಾಲೀಕರ ಬಳಿ ಕ್ಷಮೆ ಕೇಳಿ, ಒಂದು ಕಪ್ ಕಾಫಿ ಕುಡಿದು ತಿರುಗಿದ್ದಾರೆ.
ಮಂಗಳೂರಿನ ದೇರಳಕಟ್ಟೆಯ ನಿವಾಸಿಯಾಗಿರುವ ಎಂ.ಎ.ಮಹಮ್ಮದ್ ಎಂಬವರು ತಮ್ಮ 35 ವರ್ಷದ ಹಿಂದಿನ ಬಿಲ್ ನೀಡಲು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರಕ್ಕೆ ಶನಿವಾರ ಆಗಮಿಸಿದ್ದರು. ಕೊಟ್ಟಿಗೆಹಾರದ ಪ್ರಸಿದ್ದ 'ಭಾರತ್ ಹೋಟೆಲ್'ಗೆ ಆಗಮಿಸಿದ ಎಂ.ಎ.ಮಹಮ್ಮದ್ ತಮಗೆ 35 ವರ್ಷಗಳ ಹಿಂದೆ ತಮಗೆ ಯಾವುದೇ ಹಣ ಪಡೆಯದೇ ಕಡಬು ಮತ್ತು ಮೀನುಸಾರ ನೀಡಿದ್ದ ಹೋಟೆಲ್ ಮಾಲೀಕ ಎಂ.ಇಬ್ರಾಹಿಂ ಅವರನ್ನು ಹುಡುಕಿದ್ದಾರೆ.
ಹೋಟೆಲ್‌ಗೆ ಬಂದಾಗ ಎಂ.ಇಬ್ರಾಹಿಂ ನಿಧನರಾಗಿದ್ದು, ಭಾರತ್ ಹೋಟೆಲ್ ನ್ನು ಇಬ್ರಾಹಿ ಅವರ ಪುತ್ರ ಅಜೀಜ್ ನಡೆಸಿಕೊಂಡು ಹೋಗುತ್ತಿರುವ ವಿಷಯ ತಿಳಿದಿದೆ. ಅಜೀಜ್ ಅವರನ್ನು ಭೇಟಿಯಾದ ಎಂ.ಎ.ಮಹಮ್ಮದ್, 35 ವರ್ಷದ ಹಿಂದಿನ ಘಟನೆಯನ್ನು ಹೇಳಿ ಒಂದಿಷ್ಟು ಹಣವನ್ನು ನೀಡಿ ಕ್ಷಮೆ ಕೇಳಿದ್ದಾರೆ. ಇಷ್ಟು ದಿನ ವಿಳಂಬವಾಗಿರೋದಕ್ಕೆ ಎಂ.ಎ.ಮಹಮ್ಮದ್ ಹೋಟೆಲ್ ಮಾಲೀಕರ ಬಳಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: ಕೇಳಿದಷ್ಟು ವರದಕ್ಷಿಣೆ ಕೊಡದ್ದಕ್ಕೆ ಗಂಡನ ಮನೆಯವರೆಲ್ಲ ಸೇರಿ ಸೊಸೆಗೆ ಎಚ್‌ಐವಿ ಇಂಜೆಕ್ಷನ್!
35 ವರ್ಷದ ಹಿಂದೆ ಆಪತ್ತಿನ ಕಾಲದಲ್ಲಿ ಈ ಹೋಟೆಲ್‌ನಲ್ಲಿ ಆಹಾರ ಸೇವಿಸಿದ್ದೆ. ಹಣ ಹಿಂದಿರುಗಿಸೋದಾಗಿ ಹೇಳಿ ಹೋಗಿದ್ದೆ. ಆದ್ರೆ ಕಾರಣಾಂತರಗಳಿಂದ ಕೊಟ್ಟಿಗೆಹಾರಕ್ಕೆ ಬರಲು ಆಗಿರಲಿಲ್ಲ. ಸಾಲ ವಾಪಸ್ ನೀಡದ ಹಿನ್ನೆಲೆ ಪಶ್ಚತ್ತಾಪ ಕಾಡುತ್ತಿತ್ತು. ಹಾಗಾಗಿ ಹಣ ನೀಡಲು ಬಂದಿದ್ದೇನೆ ಎಂದು ಮಹಮ್ಮದ್ ಹೇಳಿಕೊಂಡಿದ್ದಾರೆ. ಭಾರತ್ ಹೋಟೆಲ್ ಮಾಲೀಕ ಅಜೀಜ್ ಸಹ ಮಹಮ್ಮದ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದಿನ ದಿನದಲ್ಲಿ ಸಾಲವಿದ್ರೆ ಜನರು ಹಿಂದಿರುಗಿಸದೇ ಮುಖ ಮುಚ್ಚಿಕೊಂಡು ಓಡಾಡುತ್ತಾರೆ. ಇಂತಹ ವ್ಯಕ್ತಿಗಳ ನಡುವೆ ಎಂ.ಎ.ಮಹಮ್ಮದ್ ವಿಭಿನ್ನವಾಗಿ ನಿಲ್ಲುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಕೊಟ್ಟಿಗೆಹಾರದ 'ಭಾರತ್ ಹೋಟೆಲ್'ಗೆ ಭೇಟಿ ನೀಡಿರುವ ಎಂ.ಎ.ಮಹಮ್ಮದ್ ಅವರ ಫೋಟೋಗಳು ವೈರಲ್ ಆಗುತ್ತಿವೆ. ಎಂ.ಎ.ಮಹಮ್ಮದ್ ಅವರ ಪ್ರಾಮಾಣಿಕತೆ ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: 54 ವರ್ಷದ ಹಿಂದೆ ಕದ್ದಿದ್ದ 37 ರೂ.ಯನ್ನ ವಿದೇಶಕ್ಕೆ ಹೋಗಿ ಹಿಂದಿರುಗಿಸಿ ಕೊಟ್ಟ ಬಂದ ಭಾರತೀಯ