ಮಂಡ್ಯ : ನರಬಲಿ ನಂತರ ನಾಲೆಗೆ ತಡೆಗೋಡೆ ನಿರ್ಮಾಣ!

By Kannadaprabha News  |  First Published Nov 10, 2023, 10:29 AM IST

ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಐವರು ಜಲಸಮಾಧಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿಗಳು ಇದೀಗ ನಾಲೆ ಬಳಿ ಕಬ್ಬಿಣ ಮತ್ತು ಇಟ್ಟಿಗೆಗಳಿಂದ ಕೂಡಿದ ತಡೆಗೋಡೆ ನಿರ್ಮಿಸಿದ್ದಾರೆ. ಅವೈಜ್ಞಾನಿಕ ತಿರುವಿನ ಬಳಿ ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆ ಡುಬ್ಬ (ಹಂಪ್ಸ್)ಗಳನ್ನು ನಿರ್ಮಿಸಿ ಅಪಾಯ ಸಂಭವಿಸದಂತೆ ಕ್ರಮ ವಹಿಸಿದ್ದಾರೆ.


ಬಿ.ಎಸ್.ಜಯರಾಂ

  ಪಾಂಡವಪುರ :  ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಐವರು ಜಲಸಮಾಧಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿಗಳು ಇದೀಗ ನಾಲೆ ಬಳಿ ಕಬ್ಬಿಣ ಮತ್ತು ಇಟ್ಟಿಗೆಗಳಿಂದ ಕೂಡಿದ ತಡೆಗೋಡೆ ನಿರ್ಮಿಸಿದ್ದಾರೆ. ಅವೈಜ್ಞಾನಿಕ ತಿರುವಿನ ಬಳಿ ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆ ಡುಬ್ಬ (ಹಂಪ್ಸ್)ಗಳನ್ನು ನಿರ್ಮಿಸಿ ಅಪಾಯ ಸಂಭವಿಸದಂತೆ ಕ್ರಮ ವಹಿಸಿದ್ದಾರೆ.

Latest Videos

undefined

ಯಾವುದೇ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಯಾವುದಾದರೊಂದು ರೀತಿಯ ದುರಂತ ಸಂಭವಿಸಲೇಬೇಕು. ಅಲ್ಲಿಯವರೆಗೂ ಅಧಿಕಾರಿಗಳು ಜಾಗೃತರಾಗುವುದೇ ಇಲ್ಲ. ಅದೇ ರೀತಿ ದುರಂತ ಸಂಭವಿಸಿದ ನಾಲೆಗೆ ಹಿಂದೆಯೂ ಹಲವು ವಾಹನಗಳು ಉರುಳಿದ್ದರೂ ಅಧಿಕಾರಿಗಳು ನಿದ್ರಾವಸ್ಥೆಯಲ್ಲೇ ಇದ್ದರು. ಐದು ನರಬಲಿ ಪಡೆದ ಬಳಿಕ ಧುತ್ತನೆ ಮೇಲೆದ್ದವರಂತೆ ತಡೆಗೋಡೆ ನಿರ್ಮಿಸಿ ಸಂಭವನೀಯ ಅಪಘಾತಗಳಿಗೆ ತಡೆಯೊಡ್ಡಿದ್ದಾರೆ.

ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗಳಿಂದ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿಗಳು ತಕ್ಷಣವೇ ತಡೆಗೋಡೆ ನಿರ್ಮಾಣ ಕಾರ್ಯ ಕೈಗೊಂಡರು. ಸೇತುವೆ ರಸ್ತೆ ಹಾದುಹೋಗಿರುವ ಎರಡೂ ಬದಿ ಮುರಿದುಬಿದ್ದಿದ್ದ ತಡೆಗೋಡೆ ಸ್ಥಳದಲ್ಲಿ ಇಟ್ಟಿಗೆಗಳನ್ನು ಬಳಸಿ ಹೊಸದಾಗಿ ತಡೆಗೋಡೆ ನಿರ್ಮಿಸಿದರು. ಸೇತುವೆ ರಸ್ತೆಯಿಂದ ಮುಂದಕ್ಕೆದ ತಡೆಗೋಡೆಯನ್ನು ಹಾಕಿದರು.

ಖಾಲಿ ಇದ್ದ ಜಾಗಕ್ಕೆ ಮಣ್ಣನ್ನು ತುಂಬಿ ಎತ್ತರಿಸುವ ಮೂಲಕ ನಾಲೆಗೆ ವಾಹನಗಳು ಉರುಳದಂತೆ ಕಾಮಗಾರಿ ನಡೆಸಿದರು. ಅಲ್ಲದೆ, ಅವೈಜ್ಞಾನಿಕ ತಿರುವು ಇರುವ ಕಡೆ ಹಂಪ್ಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ವೇಗವಾಗಿ ಬರುವ ವಾಹನಗಳ ವೇಗಕ್ಕೆ ಬ್ರೇಕ್ ಹಾಕುವ ಸಲುವಾಗಿ ಈ ಹಂಪ್ಸ್‌ಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿಗಳಾದ ಇಇ ಶಿವಕುಮಾರ್, ಎಇ ಉಜ್ಜನ್ ಕೊಪ್ಪ ಅವರು ಖುದ್ದು ಹಾಜರಿದ್ದು ತಡೆಗೋಡೆ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದರು.

ಈ ಕಾಮಗಾರಿಯನ್ನು ಮೊದಲೇ ಎಚ್ಚೆತ್ತುಕೊಂಡು ನಿರ್ಮಿಸಿದ್ದರೆ ಐದು ಜೀವಗಳಾದರೂ ಉಳಿಯುತ್ತಿದ್ದವು. ಅಪಾಯ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಬೇಕು. ಆದರೆ, ಅಧಿಕಾರಿಗಳ ನಿರಾಸಕ್ತಿ, ನಿರ್ಲಕ್ಷ್ಯತನ ಅವರನ್ನು ಜಾಗೃತಾವಸ್ಥೆಗೆ ತರುವುದೇ ಇಲ್ಲ. ಪ್ರಾಣಹಾನಿ ಸಂಭವಿಸಿದಾಗ ಮಾತ್ರವಷ್ಟೇ ಪರಿಹಾರ ಹುಡುಕಿಕೊಂಡು ಓಡಾಡುವುದು ಸಾಮಾನ್ಯವಾಗಿದೆ.

ಬನಘಟ್ಟ ವಿಶ್ವೇಶ್ವರಯ್ಯ ನಾಲೆ ಬಳಿ ಮಾತ್ರ ತಡೆಗೋಡೆ ನಿರ್ಮಿಸಿದರೆ ಸಾಲದು ನಾಲೆಗಳ ಪಕ್ಕದ ರಸ್ತೆಗಳಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲೆಲ್ಲಾ ತಡೆಗೋಡೆಗಳನ್ನು ನಿರ್ಮಿಸಿದಾಗ ಮಾತ್ರ ಇಂತಹ ದುರಂತಗಳು ಸಂಭವಿಸುವುದನ್ನು ತಡೆಯಲು ಸಾಧ್ಯ. ಇಲ್ಲವಾದರೆ ದುರಂತಗಳಿಗೆ ಕೊನೆಯೇ ಇರುವುದಿಲ್ಲ.

300 ಕಿ.ಮೀ. ದೂರ ತಡೆಗೋಡೆಗೆ ವರದಿ

ಶ್ರೀರಂಗಪಟ್ಟಣದ ಗಾಮನಹಳ್ಳಿ ಬಳಿ ಕಾರೊಂದು ನಾಲೆಗೆ ಉರುಳಿ ನಾಲ್ವರು ಮಹಿಳೆಯರು ಮೃತಪಟ್ಟ ಸಮಯದಲ್ಲೇ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಾಂತ್ರಿಕ ಸಮಿತಿಯೊಂದನ್ನು ರಚನೆ ಮಾಡಿ ನಾಲೆ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಸಮಿತಿ ಜಿಲ್ಲೆಯೊಳಗೆ ನಡೆಸಿದ ಸರ್ವೇ ಪ್ರಕಾರ ಸುಮಾರು ೩೦೦ ಕಿ.ಮೀ. ದೂರದವರೆಗೆ ನಾಲಾ ವ್ಯಾಪ್ತಿಯಲ್ಲಿ ರಸ್ತೆ ಹಾದುಹೋಗಿದ್ದು, ಅಲ್ಲಿ ಕ್ರಾಸ್ ಬ್ಯಾರಿಯರ್ ಅಳವಡಿಸಬೇಕಿದೆ ಎಂದು ಹೇಳಲಾಗಿತ್ತು. ಇಷ್ಟು ದೂರದವರೆಗೆ ಕ್ರಾಸ್ ಬ್ಯಾರಿಯರ್ ಅಳವಡಿಸುವುದಕ್ಕೆ ಅನುದಾನದ ಕೊರತೆ ಕಾಡಿತ್ತಲ್ಲದೆ, ಸರ್ಕಾರದಿಂದ ಒಪ್ಪಿಗೆ ಸಿಗುವ ಅನುಮಾನವೂ ಕಾಡಿತ್ತು. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ವರದಿಯನ್ನು ಪುನರ್‌ಪರಿಶೀಲಿಸುವಂತೆ ಸೂಚಿಸಿದ್ದಾರೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

ಹಿಂದೆ ನಾಲಾ ದುರಂತಗಳು ಸಂಭವಿಸಿದಾಗ ನಾಲೆಗಳ ಬಳಿ ತಡೆಗೋಡೆ ನಿರ್ಮಿಸಲು ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿತ್ತು. ಅವರು ಸರ್ವೇ ನಡೆಸಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿದ್ದಾರೆ. ಆ ಪ್ರಕಾರ ಜಿಲ್ಲೆಯ ೩೦೦ ಕಿ.ಮೀ. ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ಕ್ರಾಸ್ ಬ್ಯಾರಿಯರ್ ನಿರ್ಮಾಣಕ್ಕೆ ಅನುದಾನದ ಕೊರತೆಯೂ ಇದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಅದಕ್ಕಾಗಿ ಇದನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

click me!