ತಪ್ಪಿಸಿಕೊಳ್ಳಲಾಗದೇ ಮೆಟ್ರೋ ನಿಲ್ದಾಣದಿಂದಲೇ ಜಿಗಿದ

By Web DeskFirst Published May 15, 2019, 8:56 AM IST
Highlights

ವ್ಯಕ್ತಿಯೋರ್ವ ಮೆಟ್ರೋ ನಿಲ್ದಾಣದಿಂದ ಜಿಗಿದು ಗಂಭಿರವಾಗಿ ಗಾಯಗೊಂಡಿದ್ದಾನೆ.  ಸಹ ಪ್ರಯಾಣಿಕನೊಬ್ಬನ ಜತೆ ಅನುಚಿತ ವರ್ತನೆ ತೋರಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಪ್ರಶ್ನಿಸಲು ಮುಂದಾದಾಗ ಈ ಘಟನೆ ನಡೆದಿದೆ.

ಬೆಂಗಳೂರು :  ಸಹ ಪ್ರಯಾಣಿಕನೊಬ್ಬನ ಜತೆ ಅನುಚಿತ ವರ್ತನೆ ತೋರಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಪ್ರಶ್ನಿಸಲು ಮುಂದಾದ ವೇಳೆ ಯುವಕನೊಬ್ಬ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದಿರುವ ಘಟನೆ ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.  ದಾಸರಹಳ್ಳಿ ನಿವಾಸಿ ಸಂದೀಪ್‌ (27) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಂದೀಪ್‌ ಮೂಲತಃ ಕೇರಳ ರಾಜ್ಯದವನಾಗಿದ್ದು, ಪಿಯುಸಿ ವ್ಯಾಸಂಗ ಮಾಡಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ. ಯುವಕನ ಪೋಷಕರು ಹಲವು ವರ್ಷಗಳಿಂದ ದಾಸರಹಳ್ಳಿಯಲ್ಲಿ ನೆಲೆಸಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸಂದೀಪ್‌ ಒಂದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಇಲ್ಲಿಯೇ ಓಡಾಡಿಕೊಂಡಿದ್ದ. ಸಂದೀಪ್‌ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಯಶವಂತಪುರ ಮೆಟ್ರೋ ರೈಲ್ವೆ ನಿಲ್ದಾಣದಿಂದ ದಾಸರಹಳ್ಳಿ ನಿಲ್ದಾಣಕ್ಕೆ ಬಂದಿದ್ದ. ಮೆಟ್ರೋ ಇಳಿದು ಸಂದೀಪ್‌ ನಿಲ್ದಾಣದಲ್ಲಿನ ಶೌಚಾಲಯಕ್ಕೆ ತೆರಳಿದ್ದ.

ಶೌಚಾಲಯದಲ್ಲಿ ಸಂದೀಪ್‌ ಸಹ ಪ್ರಯಾಣಿಕನ ಜತೆ ಅನುಚಿತವಾಗಿ ವರ್ತನೆ ತೋರಿದ್ದು, ಸಹ ಪ್ರಯಾಣಿಕ ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಸಂದೀಪ್‌ ವರ್ತನೆ ಬಗ್ಗೆ ದೂರು ನೀಡಿದ್ದರು. ಭದ್ರತಾ ಸಿಬ್ಬಂದಿ ಸಂದೀಪ್‌ನನ್ನು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ಓಡಿ ಹೋಗಲು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳಲು ಅವಕಾಶ ಸಿಗದಿದ್ದಾಗ ಹೌಸ್‌ಕೀಪಿಂಗ್‌ ಕೊಠಡಿ ಮೇಲಿಂದ ರಸ್ತೆಗೆ ಜಿಗಿದಿದ್ದಾನೆ. ಯುವಕ ಸುಮಾರು 25 ಅಡಿಯಿಂದ ಕೆಳಗೆ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಮೆಟ್ರೋ ಸಿಬ್ಬಂದಿ ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಯುವಕನ ಕೈ-ಕಾಲು, ದೇಹದ ಹಲವು ಭಾಗದಲ್ಲಿ ಗಂಭೀರ ಪೆಟ್ಟು ಬಿದ್ದಿದ್ದು, ಅರೆ ಪ್ರಜ್ಞಾಸ್ಥಿತಿಯಲ್ಲಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದ್ಯ ಸೇವೆ ಶಂಕೆ?

ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದಿರುವ ಸಂದೀಪ್‌ ಮದ್ಯ ಸೇವನೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತನ ರಕ್ತದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶೌಚಾಲಯದಲ್ಲಿ ಸಂದೀಪ್‌ ಅನುಚಿತ ವರ್ತನೆ ತೋರಿರುವ ವ್ಯಕ್ತಿ ಹಾಗೂ ಭದ್ರತಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮೆಟ್ರೋ ನಿಲ್ದಾಣದಲ್ಲಿ ಇರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು  ಮಾಹಿತಿ ನೀಡಿದರು.

click me!