ಕಾಂಕ್ರೀಟ್‌ ಕಾಡಿನಿಂದ ‘ತುರಹಳ್ಳಿ’ಗೆ ಸಂಕಷ್ಟ: ಅರಣ್ಯ ಇಲಾಖೆಯಿಂದಲೇ ನಾಶ?

By Web DeskFirst Published May 14, 2019, 12:07 PM IST
Highlights

ಕಾಂಕ್ರೀಟ್‌ ಕಾಡಿನಿಂದ ‘ತುರಹಳ್ಳಿ’ಗೆ ಸಂಕಷ್ಟ| ಅರಣ್ಯ ಇಲಾಖೆಯಿಂದಲೇ ಕಾಡಿನ ನಾಶ| ಪರಿಸರ ಪ್ರೇಮಿಗಳ ಆರೋಪ

ಬೆಂಗಳೂರು[ಮೇ.14]: ಉದ್ಯಾನ ನಗರಿಯ ಪ್ರತಿಷ್ಠಿತ ಉದ್ಯಾನವೆನಿಸಿದ ಲಾಲ್‌ಬಾಗ್‌ನ ದುಪ್ಪಟ್ಟು ಇರುವ ತುರಹಳ್ಳಿ ಅರಣ್ಯ ಅತ್ಯುತ್ತಮ ಜೀವಜಾಲ ಹೊಂದಿರುವ ಪ್ರಮುಖ ನೈಸರ್ಗಿಕ ತಾಣ. ಸುಮಾರು 582 ಎಕರೆ ವಿಸ್ತೀರ್ಣದ ಈ ಅರಣ್ಯವು ಇಡೀ ದಕ್ಷಿಣ ಭಾರತದ ವ್ಯಾಪ್ತಿ ಹೊಂದಿರುವ ಆನೆ ಕಾರಿಡಾರ್‌ನ ಪ್ರಮುಖ ಕೊಂಡಿಯಾಗಿತ್ತು.

ಬನ್ನೇರುಘಟ್ಟದಿಂದ ಮುಂದುವರೆದು ತುರಹಳ್ಳಿ ನಂತರ ಕನಕಪುರದ ಮೂಲಕ ಸಾಗಿ ತಮಿಳುನಾಡು ಅರಣ್ಯಕ್ಕೆ ಸೇರಿಕೊಳ್ಳುವ ಆನೆಕಾರಿಡಾರ್‌ನ ಕೊಂಡಿಯಾಗಿದ್ದ ತುರಹಳ್ಳಿ ಅರಣ್ಯ ಕಳೆದ ಎರಡು ದಶಕದಲ್ಲಿ ನಡೆದ ಭಾರಿ ನಗರೀಕರಣದ ಪರಿಣಾಮವಾಗಿ ಕೊಂಡಿ ಕಳಚಿಕೊಂಡಿದೆ. ಆದರೂ, ಈ ಅರಣ್ಯ ಅತ್ಯುತ್ತಮ ಜೀವಜಾಲ ಹೊಂದಿದ್ದು, 150ಕ್ಕೂ ಹೆಚ್ಚು ಪ್ರಾಣಿಗಳು ಹಾಗೂ 98ಕ್ಕೂ ಪಕ್ಷಿ ಪ್ರಭೇದಗಳ ವಾಸತಾಣವಾಗಿದೆ.

ಆದರೆ, ಬೆಂಗಳೂರು ಎಂಬ ಕಾಂಕ್ರೀಟ್‌ ಕಾಡು ಇದೀಗ ತುರಹಳ್ಳಿಯ ಹೆಬ್ಬಾಗಿಲವರೆಗೂ ಬಂದು ನಿಂತಿದ್ದು, ಈ ಅರಣ್ಯದ ಪ್ರಮುಖ ಭಾಗವನ್ನು ಖುದ್ದು ಅರಣ್ಯ ಇಲಾಖೆಯೇ ಉದ್ಯಾನ ಮಾಡಲು ಹೊರಡುವ ಮೂಲಕ ನೈಸರ್ಗಿಕ ಅರಣ್ಯವನ್ನು ಕಾಂಕ್ರೀಟ್‌ ಕಾಡಿನ ಭಾಗವಾಗಿ ಮಾಡಲು ಹೊರಟ ಆರೋಪ ಹೊತ್ತಿದೆ.

ದೊಡ್ಡ ದೊಡ್ಡ ಕೈಗಾರಿಕೆಗಳು, ವಸತಿ ಬಡಾವಣೆಗಳು, ರಿಯಲ್‌ ಎಸ್ಟೆಟ್‌ ಉದ್ಯಮ, ಅಭಿವೃದ್ಧಿ ಕಾಮಗಾರಿಗಳು ಇದೀಗ ತುರಹಳ್ಳಿ ಕಾಡಿಗೆ ಕೊಡಲಿ ಹಾಕುತ್ತಿವೆ. ಅರಣ್ಯದ ಸುತ್ತಲ ಪ್ರದೇಶದಲ್ಲಿ ಪಕ್ಕದಲ್ಲೇ ಒತ್ತುವರಿ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಡನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಅಭಿವೃದ್ಧಿ ಹೆಸರಿನಲ್ಲಿ ಈ ಕಾಡಿನ ನಾಶಕ್ಕೆ ಮುಂದಾಗಿದೆ ಎಂದು ಪರಿಸರ ಪ್ರೇಮಿಗಳು, ಸ್ಥಳೀಯರು ಆರೋಪಿಸುತ್ತಾರೆ.

ಅರಣ್ಯ ಪ್ರದೇಶದ ಸುತ್ತಮುತ್ತ ಅಭಿವೃದ್ಧಿ ಕಾರ್ಯಗಳಿಗೆ ಇಡೀ ಕಾಡು ನಾಶವಾಗಲಿದೆ ಎಂಬ ಆತಂಕ ಇದೀಗ ಪರಿಸರವಾದಿಯಲ್ಲಿ ಮೂಡಿದೆ. ಹೀಗಾಗಿ ಅರಣ್ಯ ಪ್ರದೇಶದ ಸುತ್ತಾ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಬಾರದು ಎಂದು ಕೂಗು ಎದ್ದಿದೆ.

ಸುಮಾರು 582 ಎಕರೆ ಅರಣ್ಯದಲ್ಲಿ ಸಾವಿರಾರು ಜಾತಿಯ ಮರಗಿಡಗಳಿವೆ. ಇವು ಬೆಂಗಳೂರಿನ ಜನತೆಗ ಶುದ್ಧವಾದ ಗಾಳಿಯನ್ನು ನೀಡುತ್ತಿವೆ. ಅವುಗಳಿಂದ ನಗರ ಪ್ರದೇಶದಲ್ಲಿ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ. ಇದನ್ನು ನಾಶ ಮಾಡಿದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗಲಿದೆ ಎಂದು ಪರಿಸರ ವಾದಿಗಳ ತಿಳಿಸುತ್ತಾರೆ.

click me!