ದಾವಣಗೆರೆ(ಡಿ.06): ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ (police) ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ (Lockup Death) ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು, ಕುಟುಂಬ (family) ವರ್ಗದವರು ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಭಾನುವಾರ ಪ್ರತಿಭಟನೆ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಚಿತ್ರದುರ್ಗ (Chitradurga) ಜಿಲ್ಲೆ ಭರಮಸಾಗರ ತಾಲೂಕಿನ ಬಹಾದ್ದೂರ್ ಘಟ್ಟ ಗ್ರಾಮದ ಕುಮಾರ(35) ಮೃತ ಆರೋಪಿ.
ದಾವಣಗೆರೆ (Davanagere) ಸಿಇಎನ್ ಅಪರಾಧ ಪೊಲೀಸ್ (Police) ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರನನ್ನು ಪೊಲೀಸರು ವಶಕ್ಕೆ ಪಡೆದು, ಕರೆ ತಂದಿದ್ದರು. ಪೊಲೀಸ್ ವಶದಲ್ಲಿದ್ದಾಗಲೇ ಕುಮಾರ ಸಾವನ್ನಪ್ಪಿದ್ದ (Death). ಈ ವಿಚಾರ ತಿಳಿದು ಕುಟುಂಬದವರು, ದಲಿತ ಸಂಘಟನೆ, ಕನ್ನಡ ಪರ ಸಂಘಟನೆ ಮುಖಂಡರು ಜಿಲ್ಲಾಸ್ಪತ್ರೆ (Hospital) ಶವಗಾರದ ಬಳಿ ಜಮಾಯಿಸಿ ಪೊಲೀಸ್ ಅಧಿಕಾರಿಗಳೇ ಕುಮಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಇದು ಲಾಕಪ್ ಡೆತ್ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಎಸ್ಪಿ ಸಿ.ಬಿ.ರಿಷ್ಯಂತ್ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಗೆ ಸಮಾಧಾನಿಸಲು ಮುಂದಾದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಪ್ರಕಾಶ ಬಿರಾದಾರ ಮಾತನಾಡಿ, ವಿಚಾರಣೆ ನೆಪದಲ್ಲಿ ಕುಮಾರನನ್ನು ಕರೆ ತಂದು, ಲಾಡ್ಜ್ ನಲ್ಲಿಟ್ಟು, ಭಾನುವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸವು ಮುನ್ನವೇ ಪೊಲೀಸ್ ವಶದಲ್ಲಿದ್ದಾಗಲೇ ಆತ ಸಾವನ್ನಪ್ಪಿದ್ದಾನೆ. ಆತನ ಮೇಲೆ ಆರೋಪವಿದ್ದರೆ ಪ್ರಕರಣ (Case) ದಾಖಲಿಸಿ, ನ್ಯಾಯಾಂಗ ವಶಕ್ಕೆ ನೀಡಬೇಕಿತ್ತು. ಲಾಡ್ಜ್‌ನಲ್ಲಿಟ್ಟುದ್ದು ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಕಾರಣರಾದ ಸಿಇಎನ್ ಠಾಣೆಯ (Station) ಸಿಪಿಐ ಗಿರೀಶ ಹಾಗೂ ಕಾನ್ ಸ್ಟೇಬಲ್ ಕೊಟ್ರೇಶ ಅವರನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಮೃತನ ಪತ್ನಿಗೆ ಸರ್ಕಾರಿ ನೌಕರಿ, ಮಕ್ಕಳ ಜವಾಬ್ದಾರಿಗಾಗಿ 50 ಲಕ್ಷ ರು. ಪರಿಹಾರ ನೀಡಬೇಕು. ಪ್ರಕಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟವಂತೂ ನಿಲ್ಲುವುದಿಲ್ಲ ಎಂದರು.
ಕಳೆದ ವರ್ಷವಷ್ಟೇ ದಾವಣಗೆರೆ (Davanagere) ತಾಲೂಕಿನ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಎಂಬಾತ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ವ್ಯಕ್ತಿ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದಾನೆ.
ಕುಮಾರ ಸಾವಿನ ಬಗ್ಗೆ ಎಸ್ಪಿ ರಿಷ್ಯಂತ್ ಹೇಳಿಕೆ
ಮೃತನ ಕುಟುಂಬಸ್ಥರು ನೀಡುವ ದೂರಿನನ್ವಯ ಕೇಸ್ ದಾಖಲು
ದಾವಣಗೆರೆ: ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ ಅ.18ರಂದು 91/21ರ ಅಡಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕುಮಾರನನ್ನು ಚಿತ್ರದುರ್ಗಕ್ಕೆ ಹೋಗಿ ಸಿಬ್ಬಂದಿ ಕರೆ ತಂದಿದ್ದರು. ಆತ ಶ್ರೀ ಲಾಡ್ಜ್‌ನಲ್ಲಿ ನಿನ್ನೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮೃತರ ಸಂಬಂಧಿಗಳು ಯಾವ ರೀತಿ ದೂರು ನೀಡುತ್ತಾರೋ, ಅದರನ್ವಯ ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿ.ಬಿ.ರಿಷ್ಯಂತ್ ತಿಳಿಸಿದರು.
ಕುಮಾರ ಸಾವು ಹೇಗಾಯಿತು, ಏಕೆ ಆಯಿತು ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾವು ಪೊಲೀಸ್ ಕಸ್ಟಡಿಯಲ್ಲಿ ಯಾಕೆ ಆಯ್ತು? ಪೊಲೀಸರು ಇದಕ್ಕೆ ಕಾರಣವಾ ಅಥವಾ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಬೇರೆ ಕಾರಣದಿಂದ ಮೃತಪಟ್ಟಿರಬಹುದೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುವುದು. ಅಗತ್ಯ ಬಿದ್ದರೆ ಸಿಐಡಿ ತನಿಖೆಗೆ ಪ್ರಕರಣ ಒಪ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.